ಒಂದೇ ಮಾರ್ಗಕ್ಕೆ ಎರಡು ದರ ನಿಗದಿ ಮಾಡಿ ಪ್ರಯಾಣಿಕರಿಂದ 2 ರೂಪಾಯಿ ಲಾಭ ಪಡೆಯುವ ಉದ್ದೇಶದಿಂದ ‘ಅನುಚಿತ ವ್ಯಾಪಾರ ಪದ್ದತಿ’ಗೆ ಕೈ ಹಾಕಿದ ಕೆಎಸ್‌ಆರ್‌ಟಿಸಿಗೆ (ಮಂಡ್ಯ ವಿಭಾಗ) ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ 5,000 ರೂ. ದಂಡ ವಿಧಿಸಿದೆ.
2022 ಜೂನ್ 21ರಂದು ವಕೀಲ ಎನ್.ಚನ್ನಬಸಪ್ಪ ಮಂಡ್ಯದಿಂದ ಮದ್ದೂರಿಗೆ ಮಂಡ್ಯ ವಿಭಾಗದ ಕೆಎಸ್‌ಆರ್ಟಿಸ್ ಸಿಟಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಆಗ ನಿರ್ವಾಹಕ 25 ರೂ. ಟಿಕೆಟ್ ನೀಡಿದ್ದರು. ಮದ್ದೂರಿನಲ್ಲಿ ಕೆಲಸ ಮುಗಿಸಿಕೊಂಡು ಚನ್ನಬಸಪ್ಪ ಮಂಡ್ಯಕ್ಕೆ ಹಿಂದಿರುಗಲು ಮಂಡ್ಯ ವಿಭಾಗದ್ದೇ ಬಸ್ ಹತ್ತಿದ್ದರು. ಆಗ ನಿರ್ವಾಹಕ 23 ರೂ. ಟಿಕೆಟ್ ನೀಡಿದ್ದರು.
ಅದನ್ನು ಗಮನಿಸಿದ ಚನ್ನಬಸಪ್ಪ ಹೋಗುವಾಗ ಟಿಕೆಟ್ ದರ 25 ರೂ. ಮತ್ತು ಬರುವಾಗ 23 ರೂ. ಏಕೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಎನ್ ಚನ್ನಬಸಪ್ಪ ಅವರು ದೂರು ನೀಡಿದ್ದರು.
ಪ್ರಕರಣದ ವಿಚಾರಣೆಯನ್ನು ವೇದಿಕೆಯ ಅಧ್ಯಕ್ಷೆ ಸಿ.ಎಂ.ಚಂಚಲಾ ಕೈಗೆತ್ತಿಗೊಂಡಿದ್ದರು. ರಾಜ್ಯ ಸರ್ಕಾರದಿಂದ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೋ ಮ್ಯಾನೇಜರ್ ಮತ್ತು ನಿರ್ವಾಹಕರು ಪ್ರತಿವಾದಿಯಾಗಿದ್ದರು.
ಎರಡು ಕಡೆಯ ವಾದ ಆಲಿಸಿದ ವೇದಿಕೆ, “ಇದು ಸ್ಪಷ್ಟವಾಗಿ ಸಾರಿಗೆ ಸಂಸ್ಥೆಯ ‘ಅನುಚಿತ ವ್ಯಾಪಾರ ಪದ್ಧತಿ ಮತ್ತು ಸೇವಾ ನ್ಯೂನತೆ’ಯಾಗಿದೆ” ಎಂದು ಹೇಳಿದೆ. ಕೆಎಸ್‌ಆರ್‌ಟಿಸಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಹೊರಡಿಸಿದೆ. ಆದೇಶವಾದ 45 ದಿನದೊಳಗೆ ದಂಡ ಪಾವತಿ ಮಾಡುವಂತೆ ಸೂಚಿಸಿದೆ. ತಪ್ಪಿದರೆ ವಾರ್ಷಿಕ ಶೇ.10ರ ಬಡ್ಡಿ ದರ ವಸೂಲು ಮಾಡುವಂತೆ ತಿಳಿಸಿದೆ.




