Thursday, September 19, 2024

ಪ್ರಾಯೋಗಿಕ ಆವೃತ್ತಿ

ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ನಿಸ್ವಾರ್ಥ ಸೇವೆ ಅನನ್ಯ – ಕೆ.ಟಿ.ಹನುಮಂತ

ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ನಿಸ್ವಾರ್ಥ ಸೇವೆ ಅನನ್ಯವಾಗಿದೆ, ರೋಗಿಗಳ ಯೋಗಕ್ಷೇಮ, ಸುರಕ್ಷತೆ ಹಾಗೂ ಚೇತರಿಕೆಗೆ ಅವರ ಕೊಡುಗೆ ಅಪಾರ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೃಷಿಕ ಲಯನ್ ಸಂಸ್ಥೆ ಮತ್ತು ಸಕ್ಕರೆ ನಾಡು ಲಯನ್ ಸಂಸ್ಥೆ ಇವರು ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ಪ್ರತಿವರ್ಷ ಮೇ.12ರ ದಿನವನ್ನು ದಾದಿಯರ ಕೊಡುಗೆಯನ್ನು ವಿವರಿಸುವ ಜಾಗತಿಕ ಅಭಿಯಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

2023ನೇ ವರ್ಷದ ಥೀಮ್ “ನಮ್ಮ ದಾದಿಯರು, ನಮ್ಮ ಭವಿಷ್ಯ” ಎಂಬುದಾಗಿದೆ, ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಮತ್ತು ವಿಶ್ವಾದ್ಯಂತ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು ಭವಿಷ್ಯದಲ್ಲಿ ಶುಶ್ರೂಷೆಗಾಗಿ ದಾದಿಯರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ ಎಂದು ನುಡಿದರು.

ಹಳೇ ಬೂದನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಶರತ್‌ಚಂದ್ರ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರು ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಾರೆ, ರೋಗಿಗಳ ಶುಶ್ರೂಷೆ ಮತ್ತು ಆರೋಗ್ಯ ಚೇತರಿಕೆಗೆ ನೀಡು ಶ್ರಮ ದೊಡ್ಡದು, ವೈದ್ಯರಾದ ನಾವು ಔಷಧಗಳನ್ನು ಚೀಟಿಗೆ ಬರೆದು ಕೊಡುತ್ತೇವೆ, ಆದರೆ ಔಷಧಗಳನ್ನು ಸರಿಯಾದ ಸಮಯಕ್ಕೆ, ಗುಣಮುಖರಾಗಲು ಸಲ್ಲಿಸುವ ಸೇವೆಯನ್ನು ಸ್ಮರಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಪಿ.ಶಿವಮ್ಮ, ಪವಿತ್ರಾ, ಮಧುಮಾಲತಿ, ರೂಪಾ, ನಂದಿನಿ, ನಿತ್ಯಶ್ರೀ, ಸುಚಿತ್ರಾ, ಎಸ್.ಆಶಾ, ಶಿವು ಹುಲ್ಲಹಳ್ಳಿ, ಭರತ್‌ಕುಡಾಕಿ ಮತ್ತಿತರರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್ ಕುಮಾರ್, ಸಕ್ಕರೆ ನಾಡು ಲಯನ್ಸ್ ಸಂಸ್ಥೆ ಅಧ್ಯಕ್ಷ ಶಶಿಧರಈಚೆಗೆರೆ, ನಗರಸಭೆ ಸದಸ್ಯ ಕುಮಾರ್, ಗ್ರಾ.ಪಂ.ಸದಸ್ಯ ಸತೀಶ್(ಬೂಸ), ಸಮಾಜ ಸೇವಕ ಶಿವಕುಮಾರ್, ಚಂದ್ರಶೇಖರ್, ಚೇತನ್ ಕುಮಾರ್, ಹಾಗೂ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಆಶಾ ಕಾರ್ಯಕರ್ತರು ಸಿಬ್ಬಂದಿಗಳು ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!