ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ದೈವ ಸಂಕಲ್ಪವಾಗಿದೆ ಎಂದು ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹಳೆಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿಯವರು ಒಳಸಂಚು ಮಾಡಿ ಸಮ್ಮಿಶ್ರ ಸರ್ಕಾರವನ್ನು ಕೆಡವಿದರು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಮಿಶ್ರ ಸರ್ಕಾರವನ್ನು ಕೆಡವಿದ ಕಿಂಗ್ ಪಿನ್ ಕದಲೂರು ಉದಯ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೊದಲಿನಿಂದಲೂ ಅವರು ಕಾಂಗ್ರೆಸ್ ಸಂಪರ್ಕದಲ್ಲಿದ್ದು ಈಗಷ್ಟೆ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ ಎಂದರು.
ಯಾವುದೇ ಘಟಾನುಘಟಿಗಳು ಬಂದರೂ ಜೆಡಿಎಸ್ ಪಕ್ಷವನ್ನು ಮುಳುಗಿಸಲು ಸಾಧ್ಯವಿಲ್ಲ. ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಮಟ್ಟ ಹಾಕುತ್ತೇನೆ. ಬಗ್ಗು ಬಡೆಯುತ್ತೇನೆ ಎಂದು ಹೇಳಿದ ಎಂತೆಂತಹ ನಾಯಕರು ಏನಾಗಿದ್ದಾರೆ ಎಂದು ಇತಿಹಾಸವನ್ನು ತೆರೆದು ನೋಡಲಿ ಗೊತ್ತಾಗುತ್ತದೆ. ಎಂದು ಪರೋಕ್ಷವಾಗಿ ಟೀಕಿಸಿದರು.
ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ವಲ್ಲದ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ನಡೆಸಲು ಒಪ್ಪಿಕೊಂಡು ಜೆಡಿಎಸ್ ಪಕ್ಷ ಆಡಳಿತ ನಡೆಸಿತೆ ಕೆಲ ನಾಯಕರ ಕುತಂತ್ರದಿಂದಾಗಿ ಸಮಿಶ್ರ ಸರ್ಕಾರ ಉರುಳಲು ಕಾರಣವಾಯಿತು ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಿಖಿಲ್ ಕುಮಾರಸ್ವಾಮಿ ಅವರ ಪರ ಮತಯಾಚನೆ ಮಾಡಿದರೆ ಹೊರತು, ಜಿಲ್ಲೆಯ ಸ್ಥಳೀಯ ಮುಖಂಡರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಪರಿಣಾಮ ರೈತಸಂಘ ಇನ್ನಿತರ ಕುತಂತ್ರದಿಂದಾಗಿ ಜೆಡಿಎಸ್ ಅಭ್ಯರ್ಥಿ ಪರಾಭವಗೊಳ್ಳಲು ಕಾರಣವಾಯಿತು ಎಂದರು.
ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಕೆಲ ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರೇ ತೀರ್ಮಾನ ಕೈಗೊಳ್ಳಲಿದ್ದು ಯಾರಿಂದಲೂ ನನ್ನ ಅಭಿವೃದ್ಧಿಯ ಬಗ್ಗೆ ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ ಎಂದರು.
ಚುನಾವಣಾ ಸಂದರ್ಭದಲ್ಲಿ ನನ್ನ ವಿರೋಧಿಗಳು ನನ್ನ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳಿಕೊಂಡು ಅವರ ತತ್ವಗಳನ್ನು ಮರೆಮಾಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ, ಯಾವ ಗ್ರಾಮಕ್ಕೆ ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ಅಲ್ಲಿನ ಗ್ರಾಮಸ್ಥರಿಗೆ ಚೆನ್ನಾಗಿ ತಿಳಿದಿದ್ದು ಕೊಪ್ಪ ಬಸ್ ನಿಲ್ದಾಣದ ನಿರ್ಮಾಣದಲ್ಲಿ ಮಾಜಿ ಶಾಸಕ ಎನ್. ಚಲುವರಾಯಸ್ವಾಮಿಯವರ ಶ್ರಮವಿದ್ದರೆ ಆತ ಹೇಳಿದ ಹಾಗೆ ನಡೆದುಕೊಳ್ಳುತ್ತೇನೆ, ಈ ಸಂಬಂಧ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಸಿಪಿ ಯೋಗೇಶ್ವರ್ ಅವರಿಂದ ಮಾಹಿತಿ ಪಡೆದು ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ವ್ಯಾಪ್ತಿಯ ಕಿರಂಗೂರು,ಹಳೆಹಳ್ಳಿ ತರೀಕೆರೆ ಕಾಲೋನಿ, ತರೀಕೆರೆ ವೀರಣ್ಣಗೌಡನ ಕೊಪ್ಪಲು, ಬೆಕ್ಕಳೇ ಕೊಪ್ಪಲು ಗ್ರಾಮದ ಸ್ಥಳೀಯ ಮುಖಂಡರ ನಿವಾಸಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆಗೆ ಮತ್ತು ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಸಂಬಂಧ ಚರ್ಚೆ ನಡೆಸಿದರು.
ಈ ವೇಳೆ ಮುಖಂಡರಾದ ಕೌಡ್ಲೆ ರಾಮಣ್ಣ, ಶಶಿ,ಮುಂತಾದವರು ಹಳೆಹಳ್ಳಿ ಗ್ರಾಮಸ್ಥರು ಹಾಜರಿದ್ದರು




