Friday, November 20, 2026

ಪ್ರಾಯೋಗಿಕ ಆವೃತ್ತಿ

ಕುಂಭಮೇಳಕ್ಕಾಗಿ ಶಾಲಾ ಮಕ್ಕಳ ದುರ್ಬಳಕೆ : ಬಿ.ಟಿ.ವಿಶ್ವನಾಥ್

ಕೆ.ಆರ್.ಪೇಟೆಯಲ್ಲಿ ನಡೆಯುವ ಕುಂಭಮೇಳಕ್ಕೆ ಶಾಲಾ ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಹೋಗುವ ಮೂಲಕ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದು ಅಖಿಲ ಭಾರತ ವಕೀಲ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್ ದೂರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕುಂಭಮೇಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಶಾಲೆಯ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ಧಾರೆ ಎಂಬ ಮಾಹಿತಿ ಇದೆ, ಈ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಸಾರ್ವಜನಿಕರ ಹಣವನ್ನು ಈ ರೀತಿಯ ದುಂದುವೆಚ್ಚದ ಕಾರ್ಯಕ್ರಮಗಳಿಗೆ ಬಳಕೆ ಮಾಡುವುದನ್ನು ವಕೀಲರ ಸಂಘವು ಖಂಡಿಸುತ್ತದೆ ಎಂದರು.

ಪ್ರೊ.ಹುಲ್ಲುಕೆರೆ ಮಹದೇವು ಮಾತನಾಡಿ, ಮಹದೇಶ್ವರು  ಎಂದು ವೈದಿಕ ಸಂಸ್ಕೃತಿಯನ್ನು ಅನುಕರಣೆ ಮಾಡಿದವರಲ್ಲ, ಆದರೆ ಅವರ ಹೆಸರಿನಲ್ಲಿ ಕುಂಭಮೇಳ ನಡೆಯುತ್ತಿರುವುದು ಖಂಡನೀಯ. ಬಸವಣ್ಣನವರು ವೈದಿಕಶಾಹಿಗಳ ವಿರುದ್ಧ ಹೋರಾಟ ಮಾಡಿದವರು, ಆದರೆ ಸುತ್ತೂರು ಮಠದ ಸ್ವಾಮೀಜಿ ಅವರು, ಇತಂಹ ಕಾರ್ಯದಲ್ಲಿ ಕೈಜೋಡಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.

ಜಿಲ್ಲಾಡಳಿತ ಸರಕಾರದ ಹಣವನ್ನು ಖರ್ಚು ಮಾಡಿ ಕುಂಭ ಮೇಳ ನಡೆಸುತ್ತಿದೆ. ಇದರ ಬದಲಿಗೆ ಅದೇ ಹಣವನ್ನು ಕೆ.ಆರ್.ಎಸ್ ಜಲಾಶಯದ ಹಿನ್ನೀರಿನ ಊರುಗಳು, ರಸ್ತೆ, ಸಮುದಾಯ ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಕೇಂದ್ರ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಬಳಸಬಹದಿತ್ತು, ಆದರೆ ಅವಕ್ಕೆಲ್ಲಾ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಸಬೂಬು ಕೊಡಲಾಗುತ್ತದೆ ಆದರೆ ಕುಂಭಮೇಳಕೆ, ಬಂದ ಹಣ ಎಲ್ಲಿಯದು? ಪ್ರಶ್ನಿಸಿದರು.

ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಇಲ್ಲದ ಬಿಜೆಪಿಯ ರಾಜಕೀಯ ಕುಂಭಮೇಳಕ್ಕೆ ಇಲ್ಲಿನ ಜನರ ಪ್ರತಿಸ್ಪಂದನೆ ಕೂಡ ಬಹಳ ಕಡಿಮೆ ಆಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಮೂಲಕ ಶಾಲಾ ಮಕ್ಕಳು, ಶಿಕ್ಷಕರು, ಸ್ವಸಹಾಯ ಸಂಘಗಳ ಮಹಿಳೆಯರು ಮೊದಲಾದವರನ್ನು ಕಡ್ಡಾಯವಾಗಿ ಕುಂಭಮೇಳದಲ್ಲಿ ಭಾಗವಹಿಸಬೇಕು’ ಎಂಬ ಸೂಚನೆಯನ್ನು ಕೊಡಲಾಗಿದೆ ಎಂದು ದೂರಿದರು.

ಮಂಡ್ಯ  ಜಿಲ್ಲಾಡಳಿತ ಯಾವ ರೀತಿಯ ಆಡಳಿತ ವ್ಯವಸ್ಥೆ ತೋರಿಸುತ್ತಿದೆ? ಮಕ್ಕಳು, ಮಹಿಳೆಯರು ಮತ್ತು ಶಿಕ್ಷಕರನ್ನು ಬಲವಂತವಾಗಿ ಅದರಲ್ಲೂ ಅಧಿಕಾರ ಬಳಸಿ ಭಾಗವಹಿಸಲು ಒತ್ತಡ ಹೇರುವುದು ಅಸಂವಿಧಾನಿಕ ಕ್ರಮವಾಗಿದೆ, ಇಂತಹ ಅಧಿಕಾರ ದುರುಪಯೋಗ ಮತ್ತು ದೌರ್ಜನ್ಯಕಾರಿ ನಡವಳಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವು ಕೈ ಬಿಡಬೇಕು. ಇಲ್ಲವಾದರೆ ಸಾರ್ವಜನಿಕರು ಇದರ ವಿರುದ್ಧ, ದೊಡ್ಡ, ಪ್ರತಿಭಟನೆ ಮತ್ತು ಕಾನೂನಾತ್ಮಕ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಸರ್ಕಾರದ ಇಂತಹ ಅಪ್ರಯೋಜಕ ಮತ್ತು ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ಒತ್ತುಕೊಟ್ಟು, ತನ್ನು ಸಂವಿಧಾನಿಕ ಕೆಲಸಗಳನ್ನ ಮರೆತಿರುವ ಜಿಲ್ಲಾಡಳಿತದ ಕಾರ್ಯ ವೈಖರಿಯನ್ನು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಎಂದರು.

ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಮೇಳಕ್ಕಾಗಿ ಶಾಲಾ ಮಕ್ಕಳು ಹಾಗೂ ಮಹಿಳೆಯರನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತಿದೆ, ಶಾಲಾ ಮಕ್ಕಳನ್ನು ಈ ಮೇಳಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ಜಿಲ್ಲೆಯಾದ್ಯಂತ ವ್ಯಾಪಾರಿಗಳು, ಉದ್ಯಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ, ಈ ಬಗ್ಗೆ ಪ್ರಜಾವಾಣಿ ಪತ್ರಿಕೆಯೂ ವರದಿ ಪ್ರಕಟಿಸಿದೆ ಎಂದು ವಿವರಿಸಿದರು.

 

 

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ