Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಣ ದುರುಪಯೋಗ ಆರೋಪ : ತಹಶೀಲ್ದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು


  • ಪ್ರಕೃತಿ ವಿಕೋಪ ಪರಿಹಾರ – ಕೋವಿಡ್‌ಗೆ ಸಂಬಂಧಿಸಿದಂತೆ 3 ಕೋಟಿ ರೂ. ದುರುಪಯೋಗದ ಆರೋಪ
  • ವಾಹನಗಳ ಬಾಡಿಗೆ ಹೆಸರಿನಲ್ಲಿ 1.80 ಲಕ್ಷ ರೂ. ಚೆಕ್‌ಗಳಿಗೆ ತಹಸೀಲ್ದಾರ್ ಒಬ್ಬರೇ ಸಹಿ
  • ಪ್ರಥಮ ದರ್ಜೆ ಸಹಾಯಕಿಯಾಗಿದ್ದ ಎಸ್.ಎಂ. ಉಮಾ ಗೆ ಹಿಂಬಡ್ತಿ. ಬೇನಾಮಿ ವ್ಯಕ್ತಿಗಳ ಹೆಸರಿಗೆ ಹಣ ಸಂದಾಯವಾಗಿರುವ ಸಾಧ್ಯತೆ

ನಾಗಮಂಗಲ ತಾಲೂಕು ಕಚೇರಿಯಲ್ಲಿ ಪ್ರಕೃತಿ ವಿಕೋಪ ಪರಿಹಾರ ಹಾಗೂ ಕೋವಿಡ್‌ಗೆ ಸಂಬಂಧಿಸಿದಂತೆ 3 ಕೋಟಿ ರೂ.ಗೂ ಅಧಿಕ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಕೆ.ಆರ್. ರವೀಂದ್ರ ಅವರು ಆಗಿನ ನಾಗಮಂಗಲ ತಹಸೀಲ್ದಾರ್ ಆಗಿದ್ದ ಕುಂಞ ಅಹಮದ್‌ ಎನ್‌.ಎ. ಹಾಗೂ ದ್ವಿತೀಯ ದರ್ಜೆ ಸಹಾಯಕಿ ಎಸ್.ಎಂ.ಉಮಾ ಅವರ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ದಾಖಲೆಗಳ ಸಮೇತ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಸರ್ಕಾರದ ಹಣವನ್ನು ಕಬಳಿಸಬೇಕೆಂಬ ಉದ್ದೇಶದಿಂದ ಇವರಿಬ್ಬರೂ ಖಾಸಗಿ ವ್ಯಕ್ತಿಗಳ ಜೊತೆ ಶಾಮೀಲಾಗಿ  ಸರ್ಕಾರದ ನಿಯಮಾವಳಿ ಮತ್ತು ಕಾಯ್ದೆಗಳನ್ನು ಗಾಳಿಗೆ ತೂರಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ಕೇಳಿ ಬಂದಿರುವ ಆರೋಪಗಳೇನು ? 

ಕೋವಿಡ್ ಲಸಿಕಾ ಮೇಳಕ್ಕೆ ವಾಹನಗಳನ್ನು ನಿಯೋಜಿಸಿರುವುದಾಗಿ ಡಿ.ದೇವರಾಜು ಹೆಸರಿನ ಬ್ಯಾಂಕ್ ಆಫ್ ಬರೋಡಾ ಖಾತೆಗೆ 5,08,200 ರೂ.ಗಳನ್ನು ಚೆಕ್‌ ಮೂಲಕ ಪಾವತಿಸಿರುವುದು. ಕೋವಿಡ್ ಲಸಿಕೆ ಸಂಬಂಧ ಬಾಡಿಗೆ ಕರಾರು ವಾಹನಕ್ಕೆ 40 ಲಕ್ಷ ರೂ.ಗಳನ್ನು ಡ್ರಾ ಮಾಡಲಾಗಿದೆ. ಕೋವಿಡ್‌ ಲಸಿಕಾ ಮೇಳಕ್ಕೆ ವಾಹನ ಬಳಸಿಕೊಂಡಿರುವುದಾಗಿ ಎನ್.ಪಿ.ಮಹೇಶ ಹೆಸರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಸಗಿ ಖಾತೆಗೆ 3.16 ಲಕ್ಷ ರೂ. ಹಣವನ್ನು ಚೆಕ್ ಮೂಲಕ ಪಾವತಿಸಿರುವುದು. ವಾಹನಗಳ ಬಾಡಿಗೆ ಹೆಸರಿನಲ್ಲಿ 1.80 ಲಕ್ಷ ರೂ. ನೀಡಲಾಗಿದೆ. ಈ ಎಲ್ಲಾ ಚೆಕ್‌ಗಳಿಗೆ ತಹಸೀಲ್ದಾರ್ ಒಬ್ಬರೇ ಸಹಿ ಮಾಡಿದ್ದು, ವಿಷಯ ನಿರ್ವಾಹಕರು, ಶಾಲಾ ಮುಖ್ಯಸ್ಥರು ಸಹಿ ಮಾಡಿಲ್ಲ. ದಿನಾಂಕವನ್ನೂ ನಮೂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಾಗಮಂಗಲ ತಾಲೂಕಿನಲ್ಲಿ ಮಳೆಹಾನಿಯಿಂದ 105 ಫಲಾನುಭವಿಗಳಿಗೆ 80,62,069 ರೂ. ಪರಿಹಾರ ವಿತರಿಸಲಾಗಿದೆ, ರಾಜೀವ್‌ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಡೇಟಾ ಎಂಟ್ರಿ ಮಾಡದಿರುವುದು. ನಿಯಮ ಬಾಹಿರವಾಗಿದೆ. ಫಲಾನುಭವಿಗಳು ಚೆಕ್ ವಿತರಣಾ ವಹಿಯಲ್ಲಿ ಸಹಿ ಮಾಡಿ ಚೆಕ್‌ ಪಡೆಯಬೇಕು. ಆದರೆ, ಇಲ್ಲಿ ಬೇರೆ ಬೇರೆ ವ್ಯಕ್ತಿಗಳು ಸಹಿ ಮಾಡಿ ಚೆಕ್ ಪಡೆದಿರುವುದು ಕಂಡುಬಂದಿದೆ. ಹಲವಾರು ಫಲಾನುಭವಿಗಳ ಹೆಸರಿನಲ್ಲಿ ಒಬ್ಬರೇ ಸಹಿ ಮಾಡಿ ಚೆಕ್ ಪಡೆದಿದ್ದಾರೆ. ಫಲಾನುಭವಿಗಳ ಹೆಸರು ಇರುವ ಪಟ್ಟಿಯಲ್ಲಿ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಫಲಾನುಭವಿಗಳ ಪಟ್ಟಿಯ ಮೂಲೆಯಲ್ಲಿ ಎಎಪಿ ಎಂದು ಬರೆದಿರುವುದು,

ಫಲಾನುಭವಿಗಳು ಸಹಿ ಮಾಡುವ ಕಡ ಒ೦ದೇ ಮಾದರಿಯ ಸಹಿಗಳಿರುವುದು, ಕಂದಾಯ ಲೆಕ್ಕ ಪರಿಶೋಧಕರು 28 ಫೆಬ್ರವರಿ 2022ರಂದು 2020-21 ನೇ ಸಾಲಿನ ಚೆಕ್ ವಿತರಣಾ ಪುಸ್ತಕ ಮತ್ತು ನಗದು ಪುಸ್ತಕವನ್ನು ಪರಿಶೀಲನೆಗೆ ಹಾಜರುಪಡಿಸಿಲ್ಲವೆಂದು ಷರಾ ಬರೆದಿದ್ದಾರೆ. ಇದು ವ್ಯಾಪಕ ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಾಗಿದೆ.

ಅಹಮದ್‌ ಅವರು ನಾಗಮಂಗಲದಿಂದ 28 ಫೆಬ್ರವರಿ 2012ರಂದು ವರ್ಗಾವಣೆ ಆದೇಶವಾಗಿದ್ದು, ಅದರ ನಂತರವೂ ಚೆಕ್ ಗಳಿಗೆ ಸಹಿ ಮಾಡಿದ್ದು, 1 ಮಾರ್ಚ್ 2022ರಂದು ಕರ್ತವ್ಯದಿಂದ ಬಿಡುಗಡೆಯಾಗಿದ್ದಾರೆ. ನಾಗಮಂಗಲ ತಹಸೀಲ್ದಾರ್ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದು, ಖಾತೆಗೆ ಬಂದ ಹಣ ಹಾಗೂ ಖಾಸಗಿ ವ್ಯಕ್ತಿಗಳಿಗೆ ಹಣ ಸಂದಾಯವಾಗಿರುವ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ. 16 ಫೆಬ್ರವರಿ 2022ರಂದು ಜಿಲ್ಲಾಧಿಕಾರಿ ಖಾತೆಯಿಂದ ತಹಶೀಲ್ದಾರ್ ಖಾತೆಗೆ ಲಕ್ಷ ರೂ. ಡ್ರಾ ಆಗಿದ್ದು, ಈ ಹಣ ವೆಚ್ಚ ಮಾಡಿ ರುವ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ನಾಗಮಂಗಲ ತಹಶೀಲ್ದಾರ್ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಕೌಂಟ್ ನಂ.54026773946 ಖಾತೆ ಹೊಂದಿದ್ದು ಈ ಖಾತೆಗೆ ಬಂದ ಹಣ ಹಾಗೂ ಖಾಸಗಿ ವ್ಯಕ್ತಿಗಳಿಗೆ ಹಣ ಸಂದಾಯವಾಗಿರುವ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಾಗಿರುತ್ತದೆ. ಅಲ್ಲದೇ ಖಾಸಗಿ ವ್ಯಕ್ತಿಗಳ ಬೇನಾಮಿ ವ್ಯಕ್ತಿಗಳ ಹೆಸರಿಗೆ ಹಣ ಸಂದಾಯವಾಗಿರುವ ಸಾಧ್ಯತೆ ಇದ್ದು ದಿನಾಂಕ: 16-02- 2022 ರಂದು ಡಿಸಿ ಆಕೌಂಟ್‌ನಿಂದ 75 ಲಕ್ಷ ರೂಪಾಯಿ ತಹಶೀಲ್ದಾರ್ ಆಕೌಂಟ್‌ಗೆ ಡ್ರಾ ಆಗಿದ್ದು, ಈ ಹಣ ವೆಚ್ಚ ಮಾಡಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿರುತ್ತದೆ (21 ಪುಟಗಳ ಬ್ಯಾಂಕ್‌ ಸ್ಟೇಟ್‌ಮೆಂಟ್ ಕಾಫಿಯನ್ನು ಇದರೊಂದಿಗೆ  ಲಗತ್ತಿಸಿದ್ದಾರೆ) ಇದರಿಂದ ಕುಂಞ ಅಹಮ್ಮದ್ ಎನ್.ಎ ರವರು ನಾಗಮಂಗಲ ತಹಶೀಲ್ದಾರ್ ಆಗಿ ಬಂದ ದಿನಾಂಕ 03/02/2020 ರಿಂದ ದಿ:07/03/2022 ರ ಅವಧಿಯಲ್ಲಿ ನಡೆದಿರುವ ಹಣಕಾಸಿನ ಅಕ್ರಮದ ಬಗ್ಗೆ ಹಾಗೂ ಕೋವಿಡ್-19, ಮತ್ತು ಪ್ರಕೃತಿ ವಿಕೋಪ ಪರಿಹಾರಕ್ಕೆ ಸಂಬಂಧಪಟ್ಟಂತೆ ಬೋಗಸ್ ಬಿಲ್ಲುಗಳನ್ನು ಸೃಷ್ಟಿ ಮಾಡಿ ಬೋಗಸ್ ಫಲಾನುಭವಿಗಳನ್ನು ಸೃಷ್ಟಿಸಿರುಬಹುದಾದ ಸಾಧ್ಯತೆಯಿದ್ದು ಈ ಬಗ್ಗೆ ಲಭ್ಯವಿರುವ ಮಾಹಿತಿ ಹಾಗೂ ದಾಖಲೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಮಗೆ ದಾಖಲೆಗಳನ್ನು ಸಲ್ಲಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಹಶೀಲ್ದಾರ್ ಕುಂಞ ಅಹಮ್ಮದ್, ಎನ್.ಎ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಉಮಾ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಇತರ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ, ವಂಚನೆ ಪ್ರಕರಣದ ಕಾಯ್ದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ- 2005 ಎಸ್‌.ಡಿ.ಆರ್.ಎಫ್ ಹಾಗೂ ಕೆ.ಸಿ.ಎಸ್.ಆರ್.ಸಿ.ಸಿ.ಎ ನಿಯಮಾವಳಿಯನ್ವಯ ಕಾನೂನು ಕ್ರಮ ಜರುಗಿಸವಂತೆ ರವೀಂದ್ರ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಹಿಂಬಡ್ತಿ ಪಡೆದ ಪ್ರಥಮ ದರ್ಜೆ ಸಹಾಯಕಿ 

ಪ್ರಥಮ ದರ್ಜೆ ಸಹಾಯಕಿಯಾಗಿದ್ದ ಎಸ್‌. ಎಂ.ಉಮಾ ಅನಧಿಕೃತ ಗೈರು ಹಾಜರಿ ಬಗ್ಗೆ ತಹಸೀಲ್ದಾರ್ ನಂದೀಶ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದಾಗ ಆಕಸ್ಮಿಕವಾಗಿ ಮನೆಯಲ್ಲಿ ಕಾಲು ಜಾರಿ ಬಿದ್ದು ನನ್ನ ಬಲಗೈ ತೋಳು ಮುಂದಿದೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿ ನಾಗರಾಜೇಗೌಡ ಮೆಮೋರಿಯಲ್ ಆಸ್ಪತ್ರೆ ವೈದ್ಯರ ಪ್ರಮಾಣಪತ್ರ ನೀಡಿದ್ದಾರೆ. ಉಮಾ ಅವರನ್ನು ಪರೀಕ್ಷಿಸಿ ಈ ವೈದ್ಯಕೀಯ ಪ್ರಮಾಣಪತ್ರ ದೃಢೀಕರಿಸುವಂತೆ 31 ಜೂನ್ 2022ರಂದು ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ. ಅಲ್ಲದೇ, 10 ಜೂನ್ 2022ರಂದೇ ಎಸ್.ಎಂ.ಉಮಾ ಮೇಲಿನ ಆರೋಪಗಳನ್ನು ಪರಿಗಣಿಸಿ ಆಮಾನತುಗೊಳಿಸುವಂತೆ ತಹಶೀಲ್ದಾರ್ ರವರು ಕೋರಿದ್ದು 7 ಜನವರಿ 2023 ರಂದು ಅಮಾನತುಗೊಳಿಸಲಾಗಿದೆ.

ಇವೆಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕೋವಿಡ್ ಮತ್ತು ಪ್ರಕೃತಿವಿಕೋಪಪರಿಹಾರಕ್ಕೆ ಸಂಬಂಧಿಸಿದಂತೆ ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ಫಲಾನುಭವಿಗಳನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ಮತ್ತು ಅಮಾನತುಗೊಂಡಿರುವ ದ್ವಿತೀಯ ದರ್ಜೆ ಸಹಾಯಕಿ ಎಸ್‌.ಎಂ.ಉಮಾ ಹಾಗೂ ಇತರ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ, ವ೦ಚನೆ ಪ್ರಕರಣ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

 

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!