ರೈತರು ಯಾರ ಗುಲಾಮರು ಅಲ್ಲ, ದೇಶದ ಅನ್ನದಾತರು. ಇನ್ನು 15 ದಿನಗಳು ಕಾದು ನೋಡುತ್ತೇವೆ, ರೈತ ಪ್ರಣಾಳಿಕೆ ಬಗ್ಗೆ ಯಾವುದೇ ಪಕ್ಷದಿಂದ ಬದ್ಧತೆ, ಸ್ಪಷ್ಟ ನಿರ್ಧಾರ ಹೊರ ಬೀಳದಿದ್ದರೆ, ರಾಜ್ಯದ ರೈತರು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡುತ್ತಾರೆ, ಹಾಗಾಗಿ ತಾವು ‘ರೈತರ ಪ್ರಣಾಳಿಕೆ’ ಯನ್ನು ಹೊರತಂದಿದ್ದು, ಆ ಅಂಶಗಳನ್ನು ರಾಜಕೀಯ ಪಕ್ಷಗಳು ಅಳವಡಿಸಿಕೊಳ್ಳಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪ್ರಣಾಳಿಕೆ ಮುಖಮುಖಿ ಚರ್ಚೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಆಪ್, ಪಕ್ಷಗಳಿಂದ ಸಹನುಭೂತಿ, ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುವ ಭರವಸೆ ನೀಡಿವೆ. ಬೆಂಗಳೂರಿನ ನಡೆದ ರೈತ ಪ್ರಣಾಳಿಕೆ ಕುರಿತು ಮುಖಾಮುಖಿ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷ ವರಿಷ್ಠರ ಜೊತೆ ಚರ್ಚಿಸಿ ನಿರ್ಧಾರ ತಿಳಿಸುವ ಭರವಸೆ ನೀಡಿದೆ. ಜೆಡಿಎಸ್ ಪಕ್ಷ ಈಗಾಗಲೇ ಬಹುತೇಕ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ್ದೇವೆ, ರೈತ ಸಂಘಟನೆಗಳು ಒಪ್ಪಿದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಸಭೆ ನಡೆಸಿ ಬದ್ಧತೆ ತೋರುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ತಿಳಿಸಿದರು.
ಅಮ್ ಆದ್ಮಿ ಪಕ್ಷದವರು ಆಡಳಿತ ನಡೆಸುತ್ತಿರುವ ದೆಹಲಿ ದಲ್ಲಿ ರೈತಪರವಾದ ನಿರ್ಣಯಗಳನ್ನು ಕೈಗೊಂಡಿದ್ದೇವೆ, ರೈತ ಸಂಘಟನೆಗಳು ಕೈಜೋಡಿಸಿದರೆ ಕರ್ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತೇವೆ, ನಾವು ಸುಳ್ಳು ಪೂಳ್ಳು ಭರವಸೆಗಳನ್ನು ಕೊಡುವುದಿಲ್ಲ ಎಂದು ತಿಳಿಸಿದ್ದಾರೆ, ಆದರೆ ಭಾರತೀಯ ಜನತಾ ಪಾರ್ಟಿಯವರು ಆಹ್ವಾನ ನೀಡಿದರೂ ಸಭೆಗೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ, ಇದು ರಾಜ್ಯದ ರೈತರಿಗೆ ಮಾಡಿದ ಅಪಮಾನ ಎಂದು ಖಂಡಿಸಿದರು.
ರೈತರ 39 ದಿನಗಳ ಹೋರಾಟದ ನಂತರ ಕಬ್ಬು ಹೆಚ್ಚುವರಿ ದರ 150 ರು ನಿಗದಿ ಮಾಡಿ ಆದೇಶವಾಗಿದ್ದರು ನ್ಯಾಯಾಲಯದಲ್ಲಿ ತಡೆಯಾಜ್ಞೆತಂದಾಗ, ಸರ್ಕಾರಿ ವಕೀಲರು ಸರ್ಕಾರದ ಆದೇಶ ಜಾರಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ಈ ರೀತಿ ಬಿಜೆಪಿ ಸರ್ಕಾರವು ರೈತರಿಗೆ ದ್ರೋಹವೆಸಗುತ್ತಿದೆ. ರೈತ ಪ್ರಣಾಳಿಕೆಯನ್ನು ರಾಜ್ಯದ ರೈತರು ರಾಜಕೀಯ ಪಕ್ಷಗಳಿಗೆ ಪ್ರಶ್ನೆ ಮಾಡಬೇಕು, ಬಹಿರಂಗವಾಗಿ ಅವರಿಂದ ಹೇಳಿಕೆ ಪಡೆಯಬೇಕು, ಆಗ ರೈತರ ಶಕ್ತಿ, ಜಾಗೃತಿ, ಅರಿವಾಗುತ್ತದೆ ಎಂದರು.
ಕುರುಬೂರು ಶಾಂತಕುಮಾರ್ ಅವರ ರೈತಪರ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಮಂಡ್ಯ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ವೇಣುಗೋಪಾಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೊತ್ತಹಳ್ಳಿ ದೇವರಾಜ್, ಜಿಲ್ಲಾ ಸಂಚಾಲಕ ಸಾತನೂರು ವೇಣುಗೋಪಾಲ್, ತುಮ್ಕೆರೆ ಮಂಜುನಾಥ್, ಕನ್ನಲ್ಲಿ ದೇವರಾಜ್, ಶಿವಳ್ಳಿ ಲಕ್ಷ್ಮಣ್, ಹುಲಿವಾನ ಬಾಲ್ ರಾಜ್, ಬಾಣಸ್ವಾಡಿ ಪ್ರಸನ್ನ, ಬನ್ನೂರ್ ಶ್ರೀನಿವಾಸ್ ಇದ್ದರು.




