Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಡಿ.28 ರಂದು ಕುವೆಂಪು ಜನ್ಮೋತ್ಸವ ಸಂಭ್ರಮ

ಕರ್ನಾಟಕ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ವಿವೇಕಾನಂದ ರಂಗಮಂದಿರದಲ್ಲಿ ಡಿ.೨೮ ರಂದು ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ಅದ್ಧೂರಿ ಕುವೆಂಪು ಜನ್ಮೋತ್ಸವ ಸಂಭ್ರಮ ಹಮ್ಮಿಕೊಂಡಿವೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಹಾಗೂ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. ೨೮ರಂದು ಮಧ್ಯಾಹ್ನ ೨.೩೦ಕ್ಕೆ ಆರಂಭವಾಗಲಿರುವ ಕುವೆಂಪು ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಆಂಧ್ರಪ್ರದೇಶದ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಜಯರಾಂ ರಾಯಪುರ ವಹಿಸುವರು. ಸಾಂಸ್ಕೃತಿಕ ಚಿಂತಕ ಪ್ರೊ.ಎಸ್.ಡಿ.ಸಿದ್ದರಾಮಯ್ಯ ವಿಚಾರ ಕ್ರಾಂತಿಗೆ ಆಹ್ವಾನ ಹಿನ್ನೆಲೆಯಲ್ಲಿ ನಿರಂಕುಶ ಮತಿತ್ವದ ಕುರಿತು ಮಾತನಾಡುವರು. ನಂತರ ಮತ್ತೊರ್ವ ಸಾಂಸ್ಕೃತಿಕ ಚಿಂತಕ ಚಂದ್ರಶೇಖರ್ ನಂಗಲಿ ಕುವೆಂಪು ಸಾಹಿತ್ಯ ಪ್ರವೇಶಕ್ಕೆ ಭೂಮಿಕೆಯ ಕುರಿತು ತಮ್ಮ ಒಳನೋಟ ಹಂಚಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ಸಂಜೆ ೬ಕ್ಕೆ ಬೆಂಗಳೂರಿನ ಮನೋಜ್ಞ ಕಲಾತಂಡದ ಡಾ.ಪಿ.ಮಾನಸ ನೇತೃತ್ವದ ತಂಡ ಕುವೆಂಪು ಅವರ ಜೀವನಾಧಾರಿತ ‘ಕಾಡಿನ ಕೊಳಲು’ ನೃತ್ಯ ರೂಪಕ ಪ್ರಸ್ತುತಪಡಿಸಲಿದ್ದಾರೆ. ಆದಿಚುಂಚನಗಿರಿ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ವಿಶ್ವ ಮಾನವ ಕ್ಷೇತ್ರದ ಪುರುಷೋತ್ತಮನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಲಯನ್ಸ್ ಕ್ಲಬ್‌ನ ಮಾಜಿ ರಾಜ್ಯಪಾಲ ಲಯನ್ ಕೆ.ದೇವೇಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಡಿಸೆಂಬರ್ ೨೬, ೨೭ರಂದು ಪ್ರತಿದಿನ ಸಂಜೆ ೫.೪೫ ರಿಂದ ೭.೩೦ರವರೆಗೆ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಗಮಕ ವ್ಯಾಖ್ಯಾನ ನಡೆಯಲಿದೆ. ವಿಶ್ರಾಂತ ಪ್ರಾಚಾರ್ಯ ಡಾ.ಮ.ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಅಧ್ಯಕ್ಷತೆ ವಹಿಸುವರು. ತುಮಕೂರಿನ ಲಕ್ಷ್ಮಿದೇವಪ್ರಕಾಶ್ ಮತ್ತು ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದಿಂದ ಕಾರ್ಯಕ್ರಮ ನಡೆಯಲಿದೆ. ಡಾ.ಶುಭಶ್ರೀ ಪ್ರಸಾದ್ ವ್ಯಾಖ್ಯಾನ ಮಾಡುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್, ಕರ್ನಾಟಕ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರೇವಕ್ಕ, ಸುಜಾತಾ ಕೃಷ್ಣ, ಶಿವಕುಮಾರ್ ಆರಾಧ್ಯ, ಅರವಿಂದ ಪ್ರಭು ಹಾಗೂ ಜಯರಾಮ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ