Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ರೆಡ್ಡಿ ಪತ್ನಿಯೇ ಅಭ್ಯರ್ಥಿ

ಇತ್ತೀಚೆಗೆ ಕರ್ನಾಟಕದ ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಅವರು “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಎಂಬ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಇದೀಗ ಆ ಪಕ್ಷದಿಂದ ಅವರ ಪತ್ನಿ ಲಕ್ಷ್ಮಿ ಅರುಣಾ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮಂಗಳವಾರ ಘೋಷಿಸಿದ್ದಾರೆ.

ಈ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ರೆಡ್ಡಿ ಸಹೋದರ ಜಿ.ಸೋಮಶೇಖರ ರೆಡ್ಡಿ ಅವರು ಪ್ರಸ್ತುತ ಬಿಜೆಪಿಯಿಂದ ಪ್ರತಿನಿಧಿಸುತ್ತಿದ್ದಾರೆ.

ಈ ಬಗ್ಗೆ ತಮ್ಮ ಪಕ್ಷದ ಯಾತ್ರೆ (ಪ್ರವಾಸ ಕಾರ್ಯಕ್ರಮ) ಸಂದರ್ಭದಲ್ಲಿ ಮಾತನಾಡಿದ ಜಿ ಜನಾರ್ದನ ರೆಡ್ಡಿ, ”ನಾನು ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂಬುದು ನಿಮಗೆ ತಿಳಿದಿದೆ. ನಾನು ಇಂದು ನನ್ನ ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸುತ್ತಿದ್ದೇನೆ” ಎಂದು ಹೇಳಿದರು.

ಗಣಿ ಲೂಟಿ ಪ್ರಕರಣಗಳಲ್ಲಿ ಸಿಲುಕಿರುವ ಜನಾರ್ದನ ರೆಡ್ಡಿಗೆ ನವೆಂಬರ್ 06ರಿಂದ ಬಳ್ಳಾರಿ ಜಿಲ್ಲೆಯಲ್ಲಿ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಬಳ್ಳಾರಿ ಬಿಟ್ಟು ಗಂಗಾವತಿ ಜಿಲ್ಲೆಯಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಆದರೆ ಬಳ್ಳಾರಿಯಿಂದ ಸ್ಪರ್ಧಿಸಲು ತಮ್ಮ ಪತ್ನಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ.

ರೆಡ್ಡಿ ಸಹೋದರರಾದ ಜಿ.ಕರುಣಾಕರ ರೆಡ್ಡಿ ಮತ್ತು ಜಿ ಸೋಮಶೇಖರ್ ರೆಡ್ಡಿ ಅವರು ಹರಪನಹಳ್ಳಿ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಅವರ ಆಪ್ತ ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಬಿಜೆಪಿ ಶಾಸಕರು ಮತ್ತು ಸಚಿವರೂ ಆಗಿದ್ದಾರೆ. ಅವರು ಬಿಜೆಪಿಯ ಜೊತೆ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ ಹಾಗಾಗಿ ಅವರಿಗೂ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ರೆಡ್ಡಿ, ಬಿಜೆಪಿಗೆ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ.

ಒಂದು ವೇಳೆ ಬಿಜೆಪಿ ಪಕ್ಷ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮಶೇಖರ್ ರೆಡ್ಡಿ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದರೆ ಅದು ರೆಡ್ಡಿ ಕುಟುಂಬದ ಸದಸ್ಯರ ನಡುವಿನ ಚುನಾವಣಾ ಹೋರಾಟವಾಗಲಿದೆ. ತಮ್ಮ ಸಹೋದರ ಸೋಮಶೇಖರ ರೆಡ್ಡಿ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದರೂ ನಿಮ್ಮ ಪತ್ನಿ ಬಳ್ಳಾರಿ ನಗರದಿಂದ ಸ್ಪರ್ಧಿಸುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ”ನಾನು ಬೇರೆ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದರು.

”ನನ್ನ ಘೋಷಣೆಯಲ್ಲಿ ಗೊಂದಲವಿದೆಯೇ? ಎಲ್ಲೆಲ್ಲಿ ನನಗೆ ಗೆಲ್ಲುವ ಸಾಧ್ಯತೆ ಇದೆಯೋ ಅಲ್ಲೆಲ್ಲಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ, ಯಾರನ್ನೋ ಸೋಲಿಸಲು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಗತ್ಯವಿಲ್ಲ, ಮೂರು ತಿಂಗಳಲ್ಲಿ ಕ್ಷೇತ್ರಗಳಲ್ಲಿ ಸಂಚರಿಸುತ್ತೇನೆ. ನನ್ನ ಮಿತಿಯೊಳಗೆ ನಾನು ನನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!