ಮಳವಳ್ಳಿ ಪಟ್ಟಣದಲ್ಲಿ ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಸುಮಾರು 2 ಎಕರೆ 32 ಗುಂಟೆ ಸರ್ಕಾರಿ ಜಮೀನನ್ನು ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ತಾಲೂಕು ತಹಶೀಲ್ದಾರ್ ಲೋಕೇಶ್ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಈ ಜಮೀನು 1987 ರಿಂದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಿತ್ತು. ಸರ್ವೆ ನಂಬರ್ 595/2 ಮತ್ತು 560 ಸೇರಿದಂತೆ ಒಟ್ಟು 2 ಎಕರೆ 32 ಗುಂಟೆ ಜಮೀನು ದಿವಂಗತ ಉದ್ಯಮಿ ಎಂ.ವಿ. ಸುಬ್ರಮಣ್ಯ ಅವರ ಕುಟುಂಬದವರ ವಶದಲ್ಲಿತ್ತು. ಇದೀಗ ನ್ಯಾಯಾಲಯದ ಆದೇಶದಂತೆ ಮಳವಳ್ಳಿ ಪುರಸಭೆಗೆ ಹಸ್ತಾಂತರಿಸಲಾಗಿದೆ. ಮಾಜಿ ಕೇಂದ್ರ ಸಚಿವ ದಿ. ಚಂದ್ರಶೇಖರ್ ಮೂರ್ತಿ ಅವರ ಸಮಾಧಿ ಇರುವ ಜಾಗವನ್ನೂ ಸಹ ವಶಕ್ಕೆ ಪಡೆಯಲಾಗಿದೆ.
ಇದೇ ವೇಳೆ, ಬೃಹತ್ ಉದ್ಯಮಿ ಉದಯರಂಗ ಬಸ್ ಮಾಲೀಕ ದಿ.ಸುಬ್ರಮಣ್ಯ ಧರ್ಮಪತ್ನಿ ಉಷಾ ಸುಬ್ರಮಣ್ಯ ಅವರು ಹೈಕೋರ್ಟ್ ಆದೇಶಕ್ಕೆ ತಲೆಬಾಗಿದ್ದಾರೆ.
ಈ ವೇಳೆ ತಹಸೀಲ್ದಾರ್ ಲೋಕೇಶ್ ಮಾತನಾಡಿ, ಸರ್ವೆ ನಂಬರ್ 595/2 ಮತ್ತು 560 ಸೇರಿದಂತೆ ಒಟ್ಟು 2 ಎಕರೆ 32 ಗುಂಟೆ ಜಮೀನು ವಿವಿದ ನ್ಯಾಯಾಲಯದಲ್ಲಿತ್ತು, ಹೈಕೋರ್ಟ್ ಆದೇಶದಂತೆ ಇಂದು ತಾಲ್ಲೂಕು ಆಡಳಿತ ವಶಕ್ಕೆ ಪಡೆದು ಪುರಸಭೆಗೆ ಹಸ್ತಾಂತರಿಸಲಾಗಿದೆ ಎಂದರು.
ತಾಲೂಕು ಆಡಳಿತವು ಸದ್ಯಕ್ಕೆ ಮಾಜಿ ಕೇಂದ್ರ ಸಚಿವರ ಸಮಾಧಿಗೆ ಯಾವುದೇ ತೊಂದರೆ ನೀಡದೆ, ಸರ್ಕಾರದ ತೀರ್ಮಾನಕ್ಕೆ ಕಾಯ್ದಿರಿಸಿದೆ. ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. 38 ವರ್ಷಗಳ ಸುದೀರ್ಘ ನ್ಯಾಯಾಲಯದ ಹೋರಾಟಕ್ಕೆ ಇದೀಗ ತೆರೆ ಬಿದ್ದಿದೆ.




