ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು ಸಿದ್ದಗೊಳಿಸುತ್ತಿದ್ದ ಜಮೀನಿನಲ್ಲಿ ಕೆಲ ಕಿಡಿಗೇಡಿಗಳು ಅಂಜನೇಯ ದೇವರ ವಿಗ್ರಹ ಪ್ರತಿಷ್ಠಾಪಿಸಿ ಅಡ್ಡಿಪಡಿಸಲು ಯತ್ನಿಸಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿ ಪಿಡಿಓ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ತಹಶೀಲ್ದಾರ್ ಕುಂಞ ಅಹಮದ್, ತಾಪಂ ಇಓ ಎ.ಬಿ.ವೇಣು, ಆಡಳಿತಾಧಿಕಾರಿ ಶ್ರೀನಿವಾಸ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬೂದನೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ 130 ಕ್ಕೂ ಹೆಚ್ಚು ಬಡ, ದಲಿತ ಕುಟುಂಬಗಳು ಕಳೆದ 8 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ನಿವೇಶನ ಕೊಡಬೇಕೆಂದು ಹೋರಾಟ ನಡೆಸುತ್ತಿವೆ.ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆದಿದೆ.ಚಳಿ,ಮಳೆ,ಗಾಳಿ ಎನ್ನದೆ ಹತ್ತಾರು ದಿನಗಳ ಕಾಲ ಬಡವರು,ದಲಿತರು ನಡೆಸಿದ ಹೋರಾಟದ ಫಲವಾಗಿ ಜಿಲ್ಲಾಡಳಿತ ಬೂದನೂರು ಗ್ರಾಮದ ಸರ್ವೆ ನಂ.190ರಲ್ಲಿ 2 ಎಕರೆ ಭೂಮಿ ಗುರುತಿಸಿ ನಿವೇಶನ ಹಂಚುವ ಕ್ರಮಕ್ಕೆ ಮುಂದಾಗಿತ್ತು.
ಆದರೆ ಇದಕ್ಕೆ ಕೆಲ ಭೂ ಒತ್ತುವರಿದಾರರು ಹಾಗೂ ರಾಜಕೀಯ ಪುಢಾರಿಗಳು ಭೂಮಿ ದಕ್ಕದಂತೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದ ಕಾರಣ ಹಾಗೂ ನ್ಯಾಯಾಲಯದಲ್ಲಿ ಪ್ರಕರಣವಿದ್ದ ಹಿನ್ನಲೆಯಲ್ಲಿ ಮೊದಲ ಹಂತದಲ್ಲಿ ಗ್ರಾಮದ ಮತ್ತೊಂದೆಡೆ 1.21ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಅದನ್ನು ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಚಗೊಳಿಸಿ ಬಡಾವಣೆ ನಿರ್ಮಿಸಲು ಮುಂದಾಗುತ್ತಿದ್ದಂತೆ ಅದನ್ನು ತಪ್ಪಿಸಲು ದುರುಳರು ತಿಪ್ಪೆ ಇದ್ದ ಜಾಗದಲ್ಲಿ ಆಂಜನೇಯ ಮೂರ್ತಿ ಪ್ರತಿಪ್ಟಾಪಿಸಿ ಬಡವರಿಗೆ ಜಮೀನು ಸಿಗದಂತೆ ಮಾಡುವ ನೀಚ ಕೃತ್ಯ ಎಸಗಿದ್ದಾರೆ.
ಈ ಹಿಂದೆ ಗುರುತಿಸಿದ್ದ ಜಾಗ ಕ್ಕೂ ಕಿರುಕುಳ ನೀಡಿದ ಪಟ್ಟಭದ್ರ ಹಿತಾಸಕ್ತಿಗಳು ಸದ್ಯ ಗ್ರಾಮದ ದೇವಾಲಯದಲ್ಲಿದ್ದ ಹಳೆ ವಿಗ್ರಹ ತಂದು ತಿಪ್ಪೆಯಲ್ಲಿ ಪ್ರತಿಷ್ಟಾಷಿಸಿ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ ಬಡವರಿಗೆ ನಿವೇಶನ ನೀಡದಂತೆ ತಡೆಯಲು ಹೊರಟಿರುವುದನ್ನು ಯಾವ ದೇವರೂ ಕ್ಷಮಿಸಲಾರ.ಜಿಲ್ಲಾಡಳಿತ ಕೂಡಲೇ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಇಂತಹ ಕೃತ್ಯಕ್ಕೆ ಕೈಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು.ಇಲ್ಲದಿದ್ದರೆ ಶಾಂತಿಯಿಂದಿರುವ ಜನರ ಮಧ್ಯೆ ಜಗಳ ಹಬ್ಬಿಸುತ್ತಾರೆ.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಇತ್ತ ಗಮನಹರಿಸಿ ಕಿಡಿಗೇಡಿಗಳನ್ನು ಬಂಧಿಸಿ ಬಡಜನರಿಗೆ ನ್ಯಾಯ ಒದಗಿಸಬೇಕಿದೆ.