ದಲಿತ ಸಮುದಾಯದ ರೈತ ಜಯಕುಮಾರ್ ಜೀವಂತ ದಹನ ಪ್ರಕರಣದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮಕ್ಕೆ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರು ಭೇಟಿ ನೀಡಿ ಮೃತ ರೈತನ ಪತ್ನಿಗೆ ಸಾಂತ್ವನ ಹೇಳಿ,ನ್ಯಾಯ ಕೊಡಿಸುವ ಭರವಸೆ ನೀಡಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮಕ್ಕೆ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಶಾಸಕರಾದ ಪ್ರಸಾದ್ ಅಬ್ಬಯ್ಯ,ಸಿ.ಚಂದ್ರಪ್ಪ,ಡಾ.ತಿಮ್ಮಯ್ಯ,ಹಂಪಣ್ಣ ನಾಯಕ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಲಿತ ಸಮುದಾಯದ ರೈತ ಜಯಕುಮಾರ್ ಮನೆ ಹಾಗೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೃತ ರೈತನ ಪತ್ನಿ ಲಕ್ಷ್ಮಿ ಅವರಿಗೆ ಸಾಂತ್ವನ ಹೇಳಿದರು.
ಕಳೆದ 10ದಿನಗಳ ಹಿಂದೆ ಕತ್ತರಘಟ್ಟ ಗ್ರಾಮದಲ್ಲಿ ಹುಲ್ಲಿನ ಮೆದೆಯೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಜಯಕುಮಾರ್ ಮೃತದೇಹ ಪತ್ತೆಯಾಗಿತ್ತು. ದೃಶ್ಯ ಮಾಧ್ಯಮಗಳು, ಸಾಮಾಜಿಕ ಜಾಲ ತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಮೃತ ರೈತ ಜಯಕುಮಾರ್ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಜಾಗೃತವಾದ ಪೊಲೀಸರು ಹಾಗೂ ಪ್ರಗತಿಪರ ಸಂಘಟನೆಗಳು ಗ್ರಾಮದಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ರೌಡಿ ಶೀಟರ್ ಅನಿಲ್ ಕುಮಾರ್ ರೈತ ಜಯಕುಮಾರ್ ಕೊಲೆ ಮಾಡಿ ಹುಲ್ಲಿನ ಮೆದೆಯೊಳಕ್ಕೆ ತಳ್ಳಿ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ಕೊಡಿಸುವ ಮೂಲಕ ಜಯಕುಮಾರ್ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದವು.
ಈ ಹಿನ್ನೆಲೆಯಲ್ಲಿ ಇಂದು ಕೆ.ಆರ್.ಪೇಟೆ ಪಟ್ಟಣಕ್ಕೆ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಶಾಸಕರಾದ ಪ್ರಸಾದ್ ಅಬ್ಬಯ್ಯ, ಡಾ.ತಿಮ್ಮಯ್ಯ, ಅಭಯ್ ಪಾಟೀಲ್, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಚಂದ್ರಪ್ಪ, ಶಾಸಕ ಹೆಚ್.ಟಿ.ಮಂಜು, ಮೈಸೂರಿನ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ರಾದ ಅರುಣ್ ಚಕ್ರವರ್ತಿ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ತಂಡದೊಂದಿಗೆ ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿದ ಸಮಿತಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರು ಹಾಗೂ ಮೃತ ರೈತನ ಪತ್ನಿಯೊಂದಿಗೆ ಮಾತನಾಡಿ ನಿಮ್ಮೊಂದಿಗೆ ನಾವಿದ್ದೇವೆ, ಸರ್ಕಾರ ನಿಮ್ಮೊಂದಿಗಿದೆ ಹೆದರಬೇಡಿ, ನಿಮ್ಮ ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಮುಖಂಡರಾದ ವಿಜಯ್ ರಾಮೇಗೌಡ, ಬಿ.ಎಲ್. ದೇವರಾಜು, ಮಲ್ಲಿಕಾರ್ಜುನ, ಅಪರ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಡಿವೈಎಸ್ ಪಿ ಚಲುವರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಡಾ.ಅಶೋಕ್, ದಲಿತ ಮುಖಂಡರಾದ ಡಿ. ಪ್ರೇಮಕುಮಾರ್, ಡಾ.ಬಸ್ತಿ ರಂಗಪ್ಪ, ಮಾಂಬಳ್ಳಿ ಜಯರಾಮ್, ಸೋಮಸುಂದರ್, ಕಮಲಾಕ್ಷಿ ನಾಗರಾಜು, ಕತ್ತರಘಟ್ಟ ರಾಜೇಶ್, ಲಕ್ಷ್ಮೀಪುರ ರಂಗಸ್ವಾಮಿ, ಊಚನಹಳ್ಳಿ ನಟರಾಜ್, ಸಿಂದಘಟ್ಟ ರಘು, ಶಿವಪ್ರಕಾಶ್ ಸೇರಿದಂತೆ ವಿವಿಧ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ನಿಷ್ಪಕ್ಷಪಾತ ತನಿಖೆ
ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಮೃತ ಜಯಕುಮಾರ್ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸದಸ್ಯರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ನರೇಂದ್ರ ಸ್ವಾಮಿ, ದಲಿತ ಸಮುದಾಯದ ಜಯಕುಮಾರ್ ಸಾವು ಹಲವು ಅನುಮಾನಗಳನ್ನು ಎತ್ತಿ ತೋರಿಸಿದ ಹಿನ್ನೆಲೆಯಲ್ಲಿ ನಾವು ಇಂದು ಇಲ್ಲಿಗೇ ಆಗಮಿಸಿದ್ದು,ಜಯಕುಮಾರ್ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು,ಸತ್ಯ ಹೊರಬರಲಿದೆ ಎಂದರು.
ಘಟನೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ಕತ್ತರಘಟ್ಟ ಘಟನೆಯ ಬಗ್ಗೆ ಮಾಹಿತಿ ಪಡೆದ ಸಮಿತಿಯು ಘಟನೆಯ ತನಿಖೆಯಲ್ಲಿ ಹಾಗೂ ಪ್ರಕರಣ ದಾಖಲಿಸುವಲ್ಲಿ ಪೋಲೀಸರ ವೈಫಲ್ಯವಿಲ್ಲ.ಈಗಲೇ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವ ಅವಶ್ಯಕತೆಯಿಲ್ಲ. ಸಾಮಾಜಿಕ ಜಾಲ ತಾಣ ಹಾಗೂ ಪತ್ರಿಕಾ ವರದಿಗಳು ನಮ್ಮ ಸಮಿತಿಯ ಕಣ್ಣನ್ನು ತೆರೆಸಿವೆ. ದಲಿತ ರೈತ ಜಯಕುಮಾರ್ ಸಾವು ಆತ್ಮಹತ್ಯೆಯಲ್ಲ, ಆತನ ಸಾವು ಅನುಮಾನಸ್ಪದ ಎಂಬುದು ಖಚಿತವಾಗಿದೆ. ಹುಲ್ಲಿನ ಮೆದೆಯ ವಿಚಾರವಾಗಿ ಕತ್ತರಘಟ್ಟ ಗ್ರಾಮದಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ರೌಡಿ ಶೀಟರ್ ಅನಿಲ್ಕುಮಾರ್ ವಿರುದ್ಧ ದೂರು ನೀಡಿದ್ದಾಗಲೇ ಕ್ರಮ ಕೈಗೊಂಡಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ ಎಂದು ಹೇಳಿದರು.
ಸದನ ಸಮಿತಿಯು ಈಗ ಮಧ್ಯ ಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸಲು ಧರಣಿದೇವಿ ಮಾಲಗತ್ತಿ ಅವರನ್ನು ನೇಮಿಸಿದೆ. ಎಫ್ಎಸ್ಎಲ್ ವರದಿ ಸೇರಿದಂತೆ, ತನಿಖೆಯು ಪ್ರಗತಿಯಲ್ಲಿರುವುದರಿಂದ ಬಹಿರಂಗವಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ನಾವು ಬಂದಿರುವುದು ಅಮಾಯಕ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸಲು ಹೊರತು ಅನ್ಯಾಯ ಮಾಡಲು ಅಲ್ಲ.ಪತ್ರಿಕಾ ವರದಿಗಳು ಹಾಗೂ ಸಾಮಾಜಿಕ ಜಾಲ ತಾಣಗಳಿಂದಾಗಿ ಅನ್ಯಾಯಕ್ಕೊಳಗಾದ ಒಂದು ದಲಿತ ಕುಟುಂಬಕ್ಕೆ ನ್ಯಾಯ ಸಿಗುವಂತಾಗಿದೆ.ಜಿಲ್ಲಾಡಳಿತ ಪ್ರಕರಣದ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿದ್ದೇವೆ. ಜಯಕುಮಾರ್ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಸಮಿತಿ ಪ್ರಯತ್ನ ಮಾಡಲಿದೆ ಎಂದರು.




