ಮಂಡ್ಯ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಿದ್ದಲ್ಲಿ ಒಂದು ತಿಂಗಳ ಮುನ್ನವೇ ಬೇಡಿಕೆಯನ್ನು ವರದಿ ಮಾಡಿ ನೀಡುವುದು ಕಡ್ಡಾಯ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬು ಕುಮಾರ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯ ವಿವರವೂ ವಾಡಿಕೆಯ ಪ್ರಕಾರ ಒಟ್ಟು 150.2 ಮಿ. ಮಿ ಇದ್ದು ಮಾರ್ಚ್ ಮಾಹೆಯಿಂದ ಮೇ 28 ರವರೆಗೆ ವಾಸ್ತವವಾಗಿ 260.1 ಮಿ. ಮಿ ಮಳೆಯಾಗಿರುತ್ತದೆ ಎಂದು ತಿಳಿಸಿದರು.
ಮನೆಹಾನಿಗೆ ಸಂಬಂಧಿಸಿದಂತೆ ಕಳೆದ 02 ದಿನಗಳಲ್ಲಿ ಮಳೆಯಿಂದಾಗಿ 28 ಮನೆಗಳು ಹಾನಿಯಾಗಿದ್ದು ಪರಿಹಾರ ಪಾವತಿಸಲು ಪರಿಹಾರ ತಂತ್ರಾಶದ ಮೂಲಕ ಕ್ರಮಕೈಗೊಳ್ಳಲಾಗಿದೆ ಎಂದರು.
ಮುಂಗಾರು ಪೂರ್ವ ಸಿದ್ದತಾ ಕ್ರಮವಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದೆ ಎಂದರು.
ಮಳೆ ಬರುವ ಸೂಚನೆಯಿದ್ದಾಗ ಉಕ್ಕಿ ಹರಿಯುವ ಸೇತುವೆಗಳು, ನದಿಗಳು, ತೊರೆಗಳ ಸ್ಥಳಗಳಲ್ಲಿ ಹಾಗೂ ಅಪಾಯ ಮುನ್ಸೂಚನೆಯ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪೂರ್ವಭಾವಿಯಾಗಿ ಅಳವಡಿಸಲು ಕ್ರಮವಹಿಸಲಾಗಿದೆ ಎಂದರು.
112 ಪ್ರವಾಹಕ್ಕೆ ಒಳಗಾಗುವ ಗ್ರಾಮಗಳು
ಹಿಂದಿನ ವರ್ಷಗಳ ವಿಪತ್ತಿನ ಆದಾರದ ಮೇಲೆ ಜಿಲ್ಲೆಯ 112 ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಗುರುತಿಸಲಾಗಿದ್ದು, ರಕ್ಷಣಾ ಸಲಕರಣೆಗಳನ್ನು ಸಜ್ಜುಗೊಳಿಸಲಾಗಿದೆ. ಪ್ರವಾಹಕ್ಕೆ ಒಳಗಾಗುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.
ಇಲಾಖಾವಾರು ತಮ್ಮ ವ್ಯಾಪ್ತಿಗೆ ಒಳಪಡುವ ಚರಂಡಿ ಮತ್ತು ಕಾಲುವೆಗಳಲ್ಲಿನ ಹೂಳು ತೆಗೆಯಲು ಕ್ರಮವಹಿಸಲಾಗಿದೆ. ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ ಗಳ ಪರಿಶೀಲಿಸಲು ಮತ್ತು ಅಗತ್ಯವಿದ್ದಲ್ಲಿ ಕೂಡಲೆ ಸರಿಪಡಿಸಲು ಕ್ರಮವಹಿಸಲಾಗಿದೆ ಎಂದರು.
2019 ರಿಂದ 2024 ರವರೆಗೆ ಬೆಳೆ ವಿಮೆಗಾಗಿ ಒಟ್ಟು ಅರ್ಜಿಗಳು 333988 ನೋಂದಣಿಯಾಗಿದ್ದು, ಒಟ್ಟು 193780 ಫಲನುಭವಿಗಳು 8327.7 ಪರಿಹಾರ ಮೊತ್ತವನ್ನು ಪಡೆದಿರುತ್ತಾರೆ ಎಂದರು.
ಮೀನು ಆರೋಗ್ಯಕರ ಆಹಾರವಾಗಿದ್ದು, ಜಿಲ್ಲೆಯಲ್ಲಿ ಮೀನುಗಾರಿಕೆ ಕಡಿಮೆಯಿದೆ. ಮೀನು ಮಾರಾಟ ಮಾಡುವವರಿಗಾಗಿ ಆಟೋಗಳ ವ್ಯವಸ್ಥೆ ಒದಗಿಸುವ ಯೋಜನೆ ರೂಪಿಸಿ ಹಾಗೂ ಮೀನು ಮಾರುಕಟ್ಟೆಯನ್ನು ವೃದ್ಧಿಸಿ ಎಂದು ಮೀನುಗಾರಿಗೆ ಇಲಾಖೆಗೆ ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಬಿ.ಸಿ.ಶಿವಾನಂದ ಮೂರ್ತಿ, ನಗರಾಭಿವೃದ್ಧಿ ಕೋಶಾಧಿಕಾರಿಯಾದ ಮಾಯಣ್ಣ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಲಕ್ಷ್ಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.




