Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜಕಾರಣ ಸೇವೆಯಾಗಲಿ, ವೃತ್ತಿಯಾಗುವುದು ಬೇಡ : ಆಶಯ್ ಮಧು 

ಹಿಂದೆಲ್ಲ ಸಮಾಜ ಸುಧಾರಣೆಗೋಸ್ಕರ ರಾಜಕಾರಣಕ್ಕೆ ಬರುತ್ತಿದ್ದರು, ಆದರೀಗ ರಾಜಕಾರಣವನ್ನೇ ವೃತ್ತಿಯಾಗಿಸಿಕೊಳ್ಳುತ್ತಿರುವ ಕ್ರಮ ಸರಿಯಲ್ಲ ಎಂದು ಕಾಂಗ್ರೆಸ್ ಯುವಮುಖಂಡ ಆಶಯ್ ಮಧು ಮಾದೇಗೌಡ ಹೇಳಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಗುರುದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್, ಶ್ರೀಮತಿ ಪದ್ಮಜಿಮಾದೇಗೌಡ ನರ್ಸಿಂಗ್ ಕಾಲೇಜು, ಬಿಇಟಿ ಹೆಲ್ತ್ ಸೈನ್ಸ್ ಅಂಗಸಂಸ್ಥೆಗಳು, ಆಶಯ್ ಮಧು ಅಭಿಮಾನಿಗಳ ಬಳಗ, ವರ್ಧಮಾನ್ ಜೈನ್ ನೇತ್ರಾಲಯ ಇವರ ಸಂಯುಕ್ತಾಶ್ರಯದಲ್ಲಿ 5 ದಿನಗಳ ಕಾಲ ಬೃಹತ್ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಸುಧಾರಣೆಗೋಸ್ಕರ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಿದ್ದ ಕಾಲ ಹೋಗಿ ರಾಜಕಾರಣಿಯಾಗುವುದಕ್ಕೋಸ್ಕರ ಸಮಾಜ ಸೇವೆ ಮಾಡುತ್ತಿದ್ದಾರೆ. ತಮ್ಮ ತಾತ ದಿ.ಜಿ.ಮಾದೇಗೌಡರು ಜನರ ಸೇವೆಗಾಗಿ ರಾಜಕೀಯ ಮಾಡಿದವರು. ಹಾಗೆಯೇ ನಮ್ಮ ಕುಟುಂಬದವರು ಸಹ ಅದೇ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂದರು.

ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಚುನಾವಣೆ ಬರುವ ಒಂದೆರಡು ವರ್ಷಗಳ ಮುಂಚಿತವಾಗಿ ಜನರಿಗೆ ಉಡುಗೊರೆಗಳನ್ನು ಕೊಟ್ಟು ಕಾರ್ಯಕ್ರಮಗಳನ್ನು ಮಾಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳಿಂದ ಯಾವುದೇ ಅಭಿವೃದ್ದಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ತಾತ ಜಿ.ಮಾದೇಗೌಡರು ಹುಟ್ಟೂರಿನಲ್ಲಿ ಮೂರುವರೆ ಎಕರೆ ಜಮೀನನ್ನು ಖರೀದಿಸಿ ಸುತ್ತಮುತ್ತಲಿನ ಹಳ್ಳಿಗಳ ಜನರ ಆರೋಗ್ಯದ ದೃಷ್ಠಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ ಜಮೀನನ್ನು ಬಿಟ್ಟುಕೊಟ್ಟು ಸೇವೆಸಲ್ಲಿಸಿದ್ದಾರೆ. ಸ್ವಂತಕ್ಕೆ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ಒಂದು ಮನೆ ಬಿಟ್ಟು ಇನ್ಯಾವುದನ್ನು ಮಾಡಿಕೊಂಡವರಲ್ಲ ಎಂದರು.

ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಜಿ.ಮಾದೇಗೌಡರ ಹಾದಿಯಲ್ಲೇ ನಡೆಯುತ್ತಿರುವ ಆಶಯ್ ಮಧು ಅವರಿಗೆ ರಾಜಕೀಯದಲ್ಲಿ ಶಕ್ತಿ ನೀಡಿ ಬೆಂಬಲಿಸಬೇಕಾಗಿದೆ. ಜನರ ಆಶಯಗಳು ಈಡೇರಬೇಕಾದರೆ ದೂರದೃಷ್ಠಿಯ ಫಲವಾಗಿರಬೇಕು. ಇಲ್ಲದಿದ್ದರೆ ಜನರ ಸೇವೆಯ ಹೆಸರಿನಲ್ಲಿ ಮೋಸ ಮಾಡುವ ರಾಜಕಾರಣಿಗಳು ಹೆಚ್ಚಾಗಿದ್ದಾರೆಂದು ತಿಳಿಸಿದರು.

ಶಾಸಕ ಮಧು ಜಿ ಮಾದೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಆರೋಗ್ಯ ತಪಾಸಣಾ ಶಿಬಿರ ಪ್ರತೀ ಗ್ರಾ.ಪಂ ಮಟ್ಟದಲ್ಲೂ ಆಯೋಜಿಸಲು ಆಶಯ್ಅಭಿಮಾನಿಗಳ ಬಳಗ ಚಿಂತನೆ ನಡೆಸಿದೆ ಎಂದರು.

ವೇದಕೆಯಲ್ಲಿ ಟಿಎಚ್ಓ ಬಿ.ರವೀಂದ್ರ, ಬಿಇಟಿ ಹೆಲ್ತ್ ಸೈನ್ಸ್ ನಿರ್ದೇಶಕ ಟಿ.ತಮಿಜ್ಮಣಿ, ಗ್ರಾ.ಪಂ ಅಧ್ಯಕ್ಷೆ ಕಮಲಮ್ಮ, ಜಿ.ಮಾದೇಗೌಡ ಆಸ್ಪತ್ರೆಯ ಆಡಳಿತಾಧಿಕಾರಿ ಪಿ.ಎಸ್.ಗಣೇಶ್ ಪ್ರಭು, ವರ್ಧಮಾನ್ ಜೈನ್ ನೇತ್ರಾಲಯ ವೈದ್ಯಾಧಿಕಾರಿ ಜೆ.ಆಶಾರಾಣಿ, ಪಿಡಿಓ ಎಚ್.ಪಿ.ಶಿವಮಾದಯ್ಯ, ಪದ್ಮ ಜಿ.ಮಾದೇಗೌಡ ನರ್ಸರಿ ಕಾಲೇಜಿನ ಪ್ರೊ.ಮಹೇಶ್ ಕುಮಾರ್, ತಾ.ಪಂ ಮಾಜಿ ಸದಸ್ಯ ಭರತೇಶ್, ಮುಖಂಡರಾದ ಅಣ್ಣೂರು ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್ಚಂದ್ರು, ಗುರುದೇವರಹಳ್ಳಿ ಪುಟ್ಟಸ್ವಾಮಿ, ಚಿಕ್ಕರಸಿನಕೆರೆ ಶಿವಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!