Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಲಸಂಪನ್ಮೂಲ ರಕ್ಷಣೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲನೀತಿ ರೂಪಿಸಲಿ: ಆತ್ಮಾನಂದ

ಕರ್ನಾಟಕ ರಾಜ್ಯದ ಕೃಷ್ಣ, ಕಾವೇರಿ, ಮಹದಾಯಿ ಸೇರಿದಂತೆ ಹಲವು ನದಿಗಳ ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಯ ಜಲನೀತಿ ರೂಪಿಸಿ, ಜಾರಿಗೆ ತರಬೇಕೆಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಆಗ್ರಹಿಸಿದರು.

ಮಂಡ್ಯ ನಗರದಲ್ಲಿ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾವೇರಿ ನ್ಯಾಯಾಧಿಕರಣ, ಸುಪ್ರೀಂಕೋರ್ಟ್, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ನೀಡಿರುವ ಆದೇಶಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡದೆ ಕನ್ನಡ ನಾಡಿನ ವಿರೋಧಿ ನಡೆ ಅನುಸರಿಸಿದೆ ಎಂದು ಕಿಡಿಕಾರಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಎದುರಾಗಿರುವುದರಿಂದ
ಪ್ರಧಾನಮಂತ್ರಿ ಮಧ್ಯ ಪ್ರವೇಶಿಸಿ, ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆ ನಡೆಸಬೇಕು,ಕಾವೇರಿ ಜಲಾನಯನ ಪ್ರದೇಶದ ಜಲಾಶಯದ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರದ ಸುಪರ್ಧಿಯಲ್ಲಿ ನೀರಾವರಿ ತಜ್ಞರನ್ನು ಎರಡು ರಾಜ್ಯಗಳಿಗೆ ಕಳುಹಿಸಿ ವಾಸ್ತವಿಕ ವರದಿ ಆಧರಿಸಿ ನ್ಯಾಯ ಸಮ್ಮತವಾಗಿ ಕಾವೇರಿ ಸಂಕಷ್ಟ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಲವಿವಾದಗಳ ಶಾಶ್ವತ ಪರಿಹಾರಕ್ಕೆ ವೈಜ್ಞಾನಿಕ ಆಧಾರಿತ ರಾಷ್ಟ್ರೀಯ ಜಲನೀತಿ ರೂಪಿಸಬೇಕು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟಕಾಲದಲ್ಲಿ ಅನುಕೂಲವಾಗುವ ಸಂಕಷ್ಟ ಸೂತ್ರ ರೂಪಿಸಬೇಕು ಬ್ರಿಟಿಷರ ಆಳ್ವಿಕೆಯಲ್ಲಿ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಆಗಿರುವ ಒಪ್ಪಂದ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಭೂಮಿತಾಯಿ ಹೋರಾಟ ಸಮಿತಿಯ ಕೆ.ಎಸ್.ನಂಜುಂಡೇಗೌಡ, ಕದಂಬ ಸೈನ್ಯದ ಬೇಕ್ರಿ ರಮೇಶ್  ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂದಾನಿ ಸೋಮನಹಳ್ಳಿ, ಭಾರತೀಯ ಕಿಸಾನ್ ಸಂಘದ ನಾರಾಯಣಸ್ವಾಮಿ, ರಮೇಶ್‌ ರಾಜು ಹಾಡ್ಯ, ಕರ್ನಾಟಕ ಕಾವಲು ಪಡೆಯ ಮೋಹನ್ ಕುಮಾರ್ ಗೌಡ, ಕಾವೇರಿ ಕ್ರಿಯಾ ಸಮಿತಿಯ ಜಯಪ್ರಕಾಶ್, ಕನ್ನಡ ಮಹಿಳಾ ಒಕ್ಕೂಟದ ಭಾಗ್ಯಮ್ಮ, ನಾನು ಕನ್ನಡಿಗ ಒಕ್ಕೂಟದ ಹರಿಪ್ರಸಾದ್, ರವಿಶಂಕರ್, ಗೌರಮ್ಮ, ಉಮ್ಮಡಹಳ್ಳಿ ಉಮೇಶ್, ಎಂ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!