ಜಿಲ್ಲೆಯ ಎಲ್ಲಾ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ಶ್ರಮಿಕ್ ಸಂಜೀವಿನಿ ವಾಹನ ಸೌಲಭ್ಯವನ್ನು ಒದಗಿಸಲಾಗಿದ್ದು,ಕಾರ್ಮಿಕರು ಇದರ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ ನಳಿನಿಕುಮಾರಿ ತಿಳಿಸಿದರು.
ಮಂಡ್ಯ ನಗರದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಶ್ರಮಿಕ್ ಸಂಜೀವಿನಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಹಾಗೂ ಸ್ಕೊಡ್ ವೆಸ್ ಸಂಸ್ಥೆ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಸಂಚಾರಿ ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು. ಕೈಗಾರಿಕೆಗಳು ಕಟ್ಟಡ ನಿರ್ಮಾಣದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಉತ್ತಮ ಆರೋಗ್ಯಕರ ಜೀವನ ನಡೆಸಲು ಕಾರ್ಮಿಕರು ಹಾಗೂ ಅವರ ಕುಟುಂಬದ ಹಿತಾಸಕ್ತಿಗಾಗಿ ಶ್ರಮಿಕ್ ಸಂಜೀವಿನಿ ವಾಹನವು ಸಹಾಯಕವಾಗಿದೆ ಎಂದರು.
ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಶ್ರಮಿಕ್ ವಾಹನವು ತೆರಳಿ ಅವರಿಗೆ ಆರೋಗ್ಯ ತಪಾಸಣೆ ಮಾಡಿ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡುವಂತಹ ಸೌಲಭ್ಯವು ಈ ವಾಹನದಲ್ಲಿ ಲಭ್ಯವಿದೆ. ಇದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಕಾರ್ಮಿಕರು ಶ್ರಮಿಕ್ ಸಂಜೀವಿನಿ ಸಂಚಾರ ವಾಹನ ಬಂದಾಗ ಯಾವುದೇ ಮುಜುಗರಕ್ಕೆ ಒಳಪಡದೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.ಇಲ್ಲಿಬವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಸಹ ನೀಡಲಾಗುವುದು. ಇದರ ಉಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯದಿಂದ ಇರಿ ಎಂದು ಕಾರ್ಮಿಕಾ ಅಧಿಕಾರಿ ಎಸ್.ಎನ್. ಮಂಜುಳಾದೇವಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರುಗಳಾದ ಎಂ. ಸ್ವಾಮಿ, ಬಿ. ಎನ್. ನಾಗರತ್ನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.