Saturday, November 21, 2026

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರು ಸತ್ಯಶೋಧನೆ ಮಾಡಿ ನೈಜ ವರದಿ ಮಾಡಲಿ : ಸಿಎಂ ಸಿದ್ದರಾಮಯ್ಯ

ಪತ್ರಕರ್ತರು ಸತ್ಯ ಶೋಧನೆ ಮಾಡಿ ನೈಜ ಘಟನೆಗಳನ್ನು ಪ್ರತಿಬಿಂಬಿಸುವ ಸುದ್ದಿಗಳನ್ನು ಬರೆಯುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗ ಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ತಮ್ಮ ಕಾವೇರಿ ನಿವಾಸದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ವರದಿಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರದಾನ, ಸಂವಹನ ತಜ್ಞ ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಕೆ.ರವಿ ಅವರಿಗೆ 50ವರ್ಷಗಳ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಹಿರಿಯ ಪತ್ರಕರ್ತ ಹಾಗೂ ವಿಮರ್ಶಕರಾದ ಡಾ. ಎಂ.ಎಸ್.ಮಣಿ ಅವರು ಬರೆದಿರುವ ಒಳಕೋವೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆಯುತ್ತಿದ್ದರೂ ಇಂದಿಗೂ ಸಂವಿಧಾನದ ಆಶಯಗಳು ಈಡೇರಿಲ್ಲಾ.
ಜಾತಿ ಪದ್ದತಿಯು ಸಮಾಜದಲ್ಲಿ ಇಂದಿಗೂ ವಿಜೃಂಭಿಸುತ್ತಿದೆ. ವರ್ಗಗಳು ಚಾಲನಶೀಲ ವಾಗಿದ್ದರೆ ಜಾತಿಯು ನಿಶ್ಚಲವಾಗಿಯೇ ಅಳ್ಳಾಡದೆ ಹಾಗೆಯೇ ನಿಂತಿದೆ. ವಿದ್ಯಾವಂತ ಯುವ ಜನರು ಹಾಗೂ ಬುದ್ಧಿ ಜೀವಿಗಳಿಗೆ ಜಾತಿಯ ಮೇಲಿನ ಮೋಹವು ಕಡಿಮೆಯಾಗಿಲ್ಲ. ಬಸವಾದಿ ಶರಣರ ಆಶಯಗಳು ಇಂದಿಗೂ ಸಮರ್ಥವಾಗಿ ಈಡೇರದಿರಲು ಜಾತಿಯ ವಿಷ ಬೀಜವೇ ಮುಖ್ಯ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಪತ್ರಕರ್ತರ ಸಂಘವು ದೇಶದ ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ವಿ.ಪಿ.ಸಿಂಗ್ ಅವರ ಹೆಸರಿನಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿರುವುದು ಸಂತೋಷ ತಂದಿದೆ. ಹಿರಿಯ ಪತ್ರಕರ್ತ ಹಾಗೂ ಚಿಂತಕರಾದ ಮಣಿ ಅವರು ಹಸಿವು, ಬಡತನ ಸೇರಿದಂತೆ ಸಮಾಜದ ಮೇಲೆ ಬೆಳಕು ಚೆಲ್ಲುವ ವಿಷಯಗಳನ್ನು ಕುರಿತು ಒಳಕೋವೆ ಪುಸ್ತಕ ಬರೆದಿರುವುದು ಸ್ವಾಗತಾರ್ಹವಾಗಿದೆ. ಪತ್ರಕರ್ತರು ಸುಳ್ಳು ಸುದ್ದಿಗಳನ್ನು ಹರಡದೆ ವಾಸ್ತವ ನೆಲಗಟ್ಟಿನಲ್ಲಿ ವಸ್ತುನಿಷ್ಟ ಸತ್ಯ ಶೋಧನಾ ವರದಿಗಳನ್ನು ಬರೆಯುವ ಮೂಲಕ ಸಮಾಜದ ಕಣ್ತೆರೆಸುವ ಜೊತೆಗೆ ಸರ್ಕಾರದ ಕಿವಿ ಹಿಂಡುವ ಕೆಲಸವನ್ನೂ ಮಾಡಬೇಕು ಎಂದು ಹೇಳಿದರು.

ಮಹಿಳಾ ಕವಿಯತ್ರಿ ಡಾ.ಕೆ. ಶರೀಫ, ಕರ್ನಾಟಕ ಸಂಧ್ಯಾ ಕಾಲ ಪತ್ರಿಕೆ ಸಂಪಾದಕ ಡಿ. ಶಿವಲಿಂಗಪ್ಪ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸಾಧಕಿ ಎಂ. ನಾಗವೇಣಿ, ಮಹಿಳಾ ಸಬಲೀಕರಣ ಸಾಧಕಿ ನಳಿನಾಕ್ಷಿ ಸಣ್ಣಪ್ಪ, ಹಿರಿಯ ಪತ್ರಕರ್ತ ಐ.ಹೆಚ್. ಸಂಗಮದೇವ್ ಅವರಿಗೆ ವಿ. ಪಿ. ಸಿಂಗ್ ಪ್ರಶಸ್ತಿ ಹಾಗೂ ಪ್ರೊ.ಬಿ. ಕೆ. ರವಿ ಆವರಿಗೆ 50ರ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಹೆಚ್. ಕಾಂತರಾಜು ಒಳಕೋವೆ ಪುಸ್ತಕ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹೆಚ್.ಎಂ.ರೇವಣ್ಣ, ರಾಜ್ಯವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ವಿ. ಪಟ್ಟಣ, ಶಾಸಕ ಅಲ್ಲಮಪ್ರಭು ಪಾಟೀಲ್, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಶಿಯಾ ಖಾನಮ್, ಮಾಜಿ ಅಧ್ಯಕ್ಷ ಹೆಚ್.ಸಿದ್ಧರಾಜು, ಮಂಡ್ಯ ಮೈಶುಗರ್ ಸಕ್ಕರೆ ಕಂಪನಿ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಮುಖಂಡ ಬಿ. ನಾಗೇಂದ್ರಕುಮಾರ್, ಒಬಿಸಿ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಗಂಧರ್ವ ಸೇನಾ, ಕಾರ್ಯದರ್ಶಿ ವಿರೂಪಾಕ್ಷ, ಶಿವರಾಜ್ ಮೌರ್ಯ, ಅಭಿಮನ್ಯು ರಮೇಶ್, ರಾಜ್ಯ ಮಾಹಿತಿ ಆಯೋಗದ ಕಮಿಷನರ್ ರುದ್ರಣ್ಣ ಹರ್ತಿಕೋಟೆ, ನಿಂಗಜ್ಜ, ಶರಣಯ್ಯ ಒಡೆಯರ್, ವೆಂಕಟಸಿಂಗ್, ಪೂರ್ಣಿಮಾ ಸಿಂಗ್, ಇಂದು ಸಂಜೆ ಪತ್ರಿಕೆ ಸಂಪಾದಕಿ ಪದ್ಮ ನಾಗರಾಜ್, ಸಮತಾ ದೇಶಮಾನೆ, ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯ ಶಶಿಕುಮಾರ್ ಸೇರಿದಂತೆ ನೂರಾರು ಪತ್ರಕರ್ತರು ಹಾಗೂ ವಿಚಾರವಾಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ