Friday, November 20, 2026

ಪ್ರಾಯೋಗಿಕ ಆವೃತ್ತಿ

ಸ್ವಾತಂತ್ರ್ಯ ದಿನವನ್ನು ಅಂತಃಕರಣದಿಂದ ಗೌರವಿಸಿ, ಸ್ಮರಿಸೋಣ: ಚಲುವರಾಯಸ್ವಾಮಿ

ಬ್ರಿಟೀಷರ ದಾಸ್ಯದಿಂದ 1947 ಆಗಸ್ಟ್ 15 ರಂದು ಭಾರತ ಮಾತೆ ಸ್ವಾತಂತ್ರ‍್ಯಗೊಂಡ ಈ ಶುಭದಿನವನ್ನು ಪ್ರತಿಯೊಬ್ಬ ಭಾರತೀಯರು ತಮ್ಮ ಅಂತಃಕರಣದಿಂದ ಗೌರವಿಸಬೇಕಿರುತ್ತದೆ ಹಾಗೂ ಪವಿತ್ರಭಾವನೆಯೊಂದಿಗೆ ಸ್ಮರಿಸಬೇಕಿರುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಮಂಡ್ಯದ ಸರ್. ಎಂ. ವಿ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ದೇಶವನ್ನು ಬ್ರಿಟೀಷರ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಸಹಸ್ರಾರು ಭಾರತೀಯರು ತಮ್ಮ ತನು-ಮನ-ಧನವನ್ನು ತ್ಯಾಗಮಾಡಿದ್ದಾರೆ ಎಂದರು.

ಮಹಾತ್ಮಗಾಂಧೀಜಿ, ಜವಾಹರ್ ಲಾಲ್ ನೆಹರು, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಬಾಯಿಪಟೇಲ್, ಭಗತ್ಸಿಂಗ್, ಸುಭಾಷ್ ಚಂದ್ರಬೋಸ್, ಸರೋಜಿನಿನಾಯ್ಡು, ಕಿತ್ತೂರುರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಭಾಯಿ ಮುಂತಾದ ಅನೇಕ ಹೋರಾಟಗಾರರ ಪರಿಶ್ರಮದಿಂದ ನಾವಿಂದು ಸ್ವಾತಂತ್ರ‍್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಈ ಸುಸಂದರ್ಭದಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ನೆನೆದುಆತ್ಮಪೂರ್ವಕವಾಗಿ ಗೌರವ ಸಲ್ಲಿಸ ಬಯಸುತ್ತೇನೆ ಎಂದರು

ಭಾರತ ದೇಶ ಬ್ರಿಟೀಷರ ಆಳ್ವಿಕೆಯಲ್ಲಿದ್ದಾಗ ಸ್ವಾತಂತ್ರ‍್ಯದ ಕಿಚ್ಚು ನಾಡಿನೆಲ್ಲೆಡೆ ಹರಡಿ ಚಳುವಳಿಯ ರೂಪ ಪಡೆಯಿತು. ಸಾವಿರಾರು ಮಂದಿಯ ಬಲಿದಾನವಾಯಿತು. ಸ್ವಾತಂತ್ರ‍್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಮರೆಯುವಂತಿಲ್ಲ. ಕನ್ನಡಿಗರ ಧಮನಿಧಮನಿಯಲ್ಲಿ ಸ್ವಾತಂತ್ರ‍್ಯ ಹೋರಾಟದ ಕಿಚ್ಚು ಪ್ರಜ್ವಲಿಸಲು ಅನೇಕ ಚೇತನಗಳು ಪ್ರೇರಕಶಕ್ತಿಯಾಗಿದ್ದವು ಎಂದರು.

ಕಿತ್ತೂರು ರಾಣಿಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಗಂಗಾಧರರಾವ್ ದೇಶಪಾಂಡೆ, ಆರ್ಆರ್ದಿವಾಕರ್, ಎನ್.ಎಸ್.ಹರ್ಡೀಕರ್, ಆಲೂರು ವೆಂಕಟರಾಯರು, ಸದಾಶಿವರಾಯರು, ನಿಜಲಿಂಗಪ್ಪ ಸೇರಿದಂತೆ ಸಾವಿರಾರು ಮಂದಿ ಸ್ವಾತಂತ್ರ‍್ಯ ಚಳುವಳಿಯ ಭಾಗವಾಗಿದ್ದನ್ನು ನಾವಿಲ್ಲಿ ಸ್ಮರಿಸಬೇಕಿದೆ ಎಂದರು.

ಮಂಡ್ಯ ಜಿಲ್ಲೆಯ ಕೊಡುಗೆಯೂ ಅಪಾರ

ಸ್ವಾತಂತ್ರ‍್ಯ ಹೋರಾಟಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆಯೂ ಅಪಾರ. ಸಾಹುಕಾರ್ ಚನ್ನಯ್ಯ, ಟಿ.ಮರಿಯಪ್ಪ, ಮಳವಳ್ಳಿ ವೀರಪ್ಪ, ಕಾಂಗ್ರೆಸ್‌ಸುಬ್ಬಯ್ಯ, ಎ.ಸಿ.ಭೈರಪ್ಪ, ಎ.ಜಿ.ಬಂದೀಗೌಡ, ಹೆಚ್.ಕೆ.ವೀರಣ್ಣಗೌಡ, ಇಂಡುವಾಳು ಹೊನ್ನಯ್ಯ ಸೇರಿದಂತೆ ಸಾಕಷ್ಟು ಜನರು ಈ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತಾವು ಆತ್ಮಾರ್ಪಣೆ ಮಾಡಿಕೊಂಡಿರುವುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕಿದೆ ಎಂದರು.

ಭಾರತ ಸ್ವಾತಂತ್ರ‍್ಯ ಹೊರಾಟದ ಚರಿತ್ರೆಯಲ್ಲಿ ಶಿವಪುರದ ಧ್ವಜಸತ್ಯಾಗ್ರಹ ಅವಿಸ್ಮರಣಿಯ ಮೈಲಿಗಲ್ಲು. ಭಾರತದಲ್ಲಿ ಸ್ವಾತಂತ್ರ‍್ಯದ ಹೋರಾಟ ನಡೆಯುವಾಗ 1938ರ ಏಪ್ರಿಲ್ 9 ರಂದು ಶಿವಪುರದ ತಿರುಮಲೇಗೌಡ ಅವರ ಜಮೀನಿನಲ್ಲಿ ಧ್ವಜರೋಹಣ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ಸೇರಿ, ಯಾವುದೇ ಬೆದರಿಕೆಗೂ ಬಗ್ಗದೆ, ಧೈರ್ಯವಾಗಿ ಭಾರತದ ತ್ರಿವರ್ಣಧ್ವಜವನ್ನು ಆರೋಹಣ ಮಾಡಿ ಪೊಲೀಸರ ಬಂಧನಕ್ಕೆ ಒಳಗಾದರು. ಇದರ ಸ್ಮರಣಾರ್ಥವಾಗಿ ಶಿವಪುರದಲ್ಲಿ ಸತ್ಯಾಗ್ರಹಸೌಧವನ್ನು ನಿರ್ಮಿಸಿರುವುದು ಶ್ಲಾಘನೀಯ. ಇದು ಮಂಡ್ಯ ಜಿಲ್ಲೆಯ ಹೆಮ್ಮೆ ಎಂದರು.

ಅನ್ನ ಭಾಗ್ಯ

ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ಸದರಿ ಯೋಜನೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 4,50,000 (ನಾಲ್ಕು ಲಕ್ಷದ ಐವತ್ತು ಸಾವಿರ) ಫಲಾನುಭವಿಗಳು ಇದರ ಸದೂಪಯೋಗ ಪಡೆಯುತ್ತಿದ್ದಾರೆ ಹಾಗೂ 5 ಕೆ.ಜಿ. ಅಕ್ಕಿಗೆ ಪರ್ಯಾಯವಾಗಿ ನಗದು ರೂಪದಲ್ಲಿ ನೇರ ನಗದು ವರ್ಗಾವಣೆ ಮಾಡಿದ್ದು, ಇಲ್ಲಿಯವರೆಗೆ ರೂ.287 ಕೋಟಿ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗಿರುತ್ತದೆ ಎಂದರು.

ಶಕ್ತಿ ಯೋಜನೆ

ಎಲ್ಲಾ ವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ ಶಕ್ತಿಯೋಜನೆಯನ್ನು ಜಾರಿಗೆತಂದಿದ್ದು, ಯಶಸ್ವಿಯಾಗಿ ಈ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ. ಎಲ್ಲಾ ಮಹಿಳೆಯರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸುಮಾರು 6 ಕೋಟಿ ಮಹಿಳೆಯರು ಉಚಿತವಾಗಿ ಶಕ್ತಿಯೋಜನೆಯಡಿ ಪ್ರಯಾಣಿಸಿರುತ್ತಾರೆ ಎಂದರು

ಗೃಹ ಜ್ಯೋತಿ

ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಪರಿಕಲ್ಪನೆಯನ್ವಯ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಸುಮಾರು 4,60,000 (ನಾಲ್ಕು ಲಕ್ಷದ ಅರವತ್ತು ಸಾವಿರ) ಗ್ರಾಹಕರು ಸದುಪಯೋಗ ಪಡೆದುಕೊಂಡಿರುತ್ತಾರೆ. ಇದರಿಂದ ರೂ. 192 ಕೋಟಿ ಮೊತ್ತದ ವಿದ್ಯುತ್ ಬಿಲ್ಲನ್ನು ಉಚಿತವಾಗಿ ನೀಡಲಾಗಿರುತ್ತದೆ ಎಂದರು.

ಗೃಹ ಲಕ್ಷ್ಮಿ

ಮಹಿಳೆ ಮನೆಯೊಳಗೆ ಆರ್ಥಿಕವಾಗಿ ಶಕ್ತಿವಂತಳಾದರೆ ಸಮಾಜದ ಅಭಿವೃದ್ದಿಗೂ ಪೂರಕವಾಗುತ್ತದೆ ಎಂಬ ದೃಷ್ಠಿಯಿಂದ ಮತ್ತು ಮಹಿಳೆ ಮನೆಯೊಳಗಿನ ದೀಪವಾದರೆ ಸಮಾಜವನ್ನು ಬೆಳಗುತ್ತಾಳೆ ಎಂಬ ಉದ್ದೇಶವನ್ನಿಟ್ಟುಕೊಂಡು ಮಹಿಳೆಯ ‘ಆರ್ಥಿಕ ಸಬಲೀಕರಣ’ಕ್ಕಾಗಿ ಪ್ರತಿ ತಿಂಗಳು ರೂ.2,000 (ರೂ.ಎರಡು ಸಾವಿರ) ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 4,50,000(ನಾಲ್ಕು ಲಕ್ಷದ ಐವತ್ತು ಸಾವಿರ) ಫಲಾನುಭವಿಗಳಿದ್ದು, ಇದುವರೆವಿಗೂ ರೂ.851 ಕೋಟಿ ಮೊತ್ತವನ್ನು ಈ ಯೋಜನೆಯಲ್ಲಿ ಪಾವತಿಸಲಾಗಿರುತ್ತದೆ ಎಂದರು.

ಯುವ ನಿಧಿ

ಯುವಕರಲ್ಲಿ ಉದ್ಯೋಗ ಅರಸುವಾಗ ನಿರಾಶಾಭಾವನೆ ಮೂಡದಿರಲಿ ಎಂಬ ಉದ್ದೇಶದಿಂದ ಅವರಿಗೆ ಅನುಕೂಲಕರವಾಗುವಂತೆ ನಿರುದ್ಯೋಗದ ಸಮಯದಲ್ಲಿ ಪ್ರಯೋಜನವಾಗುವ ಉದ್ದೇಶದಿಂದ‘ ಯುವನಿಧಿ ಯೋಜನೆ’ಯನ್ನು ಜಾರಿಗೊಳಿಸಿದ್ದು, ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 4,300 (ನಾಲ್ಕು ಸಾವಿರ ಮುನ್ನೂರು) ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗಿದೆ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನ

ಮಂಡ್ಯ ಜಿಲ್ಲೆಯು ಹಲವು ಸಾಹಿತಿಗಳ ತವರಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಮೊದಲನೇ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವು 1973ರಲ್ಲಿ ಮತ್ತು ಎರಡನೇ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವು 1994ರಲ್ಲಿ ಜರುಗಿದ್ದು, ಹೆಮ್ಮೆಯ ಸಂಗತಿ. ಅದೇ ರೀತಿ ಮೂರನೇ ಬಾರಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಆತಿಥ್ಯ ವಹಿಸಲು ಅವಕಾಶ ಸಿಕ್ಕಿರುವುದು, ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ.

ಈ ವರ್ಷ ಡಿಸೆಂಬರ್-20, 21 ಮತ್ತು 22 ರಂದು ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಿದ್ದು, ನಾಡಿನಾದ್ಯಂತ ಕನ್ನಡಾಭಿಮಾನಿಗಳು ಸಾಹಿತ್ಯಾಸಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ಇದನ್ನು ನಾವು ಹಬ್ಬದಂತೆ ಸಂಭ್ರಮಿಸಬೇಕು ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲರೂ ಒಂದು ಕೂಡಿ ಸಹಕಾರ ಸಮನ್ವಯತೆಯಿಂದ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿನಂತಿಸುತ್ತೇನೆ ಎಂದರು

ಬೃಂದಾವನ ಉನ್ನತೀಕರಣ

ಕೆ.ಆರ್.ಎಸ್. ಅಣೆಕಟ್ಟೆಯ ಬೃಂದಾವನ ಉದ್ಯಾನವನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ಆಕರ್ಷಣೆಯ ಕೇಂದ್ರವನ್ನಾಗಿ ಉನ್ನತೀಕರಿಸುವ ಸಲುವಾಗಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಮೂಲಕ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದರು.

ವಿಶ್ವೇಶ್ವರಯ್ಯ ನಾಲೆಯು 92 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾರಣ ಸಮಗ್ರ ಅಚ್ಚುಕಟ್ಟು ಪ್ರದೇಶಕ್ಕೆ ಶೀಘ್ರವಾಗಿ, ಸಮರ್ಪಕವಾಗಿ ನೀರನ್ನು ಹಂಚಿಕೆ ಮಾಡುವ ದೃಷ್ಠಿಯಿಂದ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು, ಸುಮಾರು ರೂ.300 ಕೋಟಿ ಅಂದಾಜು ವೆಚ್ಛದ ಕಾಮಗಾರಿಯ ಪೈಕಿ, ಶೇಕಡ 60 ರಷ್ಟು ಕಾಮಗಾರಿ ಮುಕ್ತಾಯಗೊಂಡಿರುತ್ತದೆ ಎಂದರು.

ವಿಶ್ವೇಶ್ವರಯ್ಯ ನಾಲೆಯ ಅಚ್ಚು ಕಟ್ಟಿನಲ್ಲಿ ಬರುವ ಸಂಪರ್ಕ ಶಾಖಾ ನಾಲಾ, ತುರಗನೂರು ಶಾಖಾ ನಾಲಾ, ಹೆಬಕವಾಡಿ ಮತ್ತು ನಿಡಘಟ್ಟ ಶಾಖಾ ನಾಲಾಗಳನ್ನು ಆಧುನೀಕರಣ ಕಾರ್ಯ ರೂ.400 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಅಂಗಾಂಗ ದಾನ ಮಾಡಿದ ಕುಟುಂಬ ಸದಸ್ಯರಿಗೆ ಪ್ರಶಂಸನಾ ಪತ್ರ

ಅಂಗಾಂಗ ದಾನ ಮಾಡಿರುವ ಬೊಮ್ಮರಾಜು ಎಲ್.ಜಿ, ಬಸವಣ್ಣ, ಗಿರೀಶ್ ಸಿ.ಎಸ್, ದೀಕ್ಷಿತ, ಅಭಿಷೇಕ್ ಕೆ.ಎನ್, ಪ್ರಜ್ವಲಾ ಇ.ಎ, ರಾಜೇಶ್ ಕೆ.ಕೆ, ಮೌಲ್ಯ ಡಿ, ಸಿದ್ದರಾಜು, ರಾಜು ಹಾಗೂ ಮಂಜು.ಸಿ ಒಟ್ಟು 11 ಮಂದಿಯ ಕುಟುಂಬದ ಸದಸ್ಯರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಲ್ಯಾಪ್ ಟಾಪ್ ವಿತರಣೆ

ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಾದ ಜ್ಯೋತಿ ಎಸ್.ಎಸ್, ಜಯಲಕ್ಷ್ಮಿ, ಕಿರಣ್ ಎಂ ಒ ಹಾಗೂ ವಸುಧಾ ಹೆಚ್.ಎಸ್ ಅವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.

ಪ್ರತಿಭಾ ಪುರಸ್ಕಾರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಫಾತಿಮಾ ಎಂ.ಕೆ, ಅಫ್ರೀನ್ ಖಾನಂ (ಎಸ್.ಎಸ್.ಎಲ್.ಸಿ)- ರೂ 8,000/- ಹಾಗೂ ಜುನೃದ್ ಅಲಿ (ಪಿಯುಸಿ) ರೂ 12,000/- ವಿದ್ಯಾರ್ಥಿಗಳಿಗೆ ಮೌಲಾನಾ ಅಬ್ದುಲ್ ಕಲಂ ಆಜಾದ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ ರವಿ ಕುಮಾರ್, ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ