Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾಲಕ್ಕೆ ತಕ್ಕಂತೆ ಶಿಕ್ಷಕರು ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು ; ಚಲುವರಾಯಸ್ವಾಮಿ

ಶಿಕ್ಷಣದ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಇಂದಿನ ಸಂದರ್ಭದಲ್ಲಿ ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚಿದೆ, ಹಾಗಾಗಿ ಕಾಲ ಕಾಲಕ್ಕೆ ತಕ್ಕಂತೆ ಶಿಕ್ಷಕರು ತಮ್ಮಲ್ಲಿ ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಶೀಘ್ರವಾಗಿ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.

ಇಂದು (ಮಾ.1) ರಂದು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನ, ಮಾತೆ “ಸಾವಿತ್ರಿಬಾಯಿ ಫುಲೆ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ನೀಡಿ

ಮಕ್ಕಳಿಗೆ ಸಾಮಾನ್ಯ ಜ್ಞಾನ, ಸಾಮಾಜದ ಸ್ಥಿತಿಗತಿಗಳನ್ನು ಅರ್ಥಪೂರ್ಣವಾಗಿ ಅರ್ಥ ಮಾಡಿಸಬೇಕು, ಶಾಲೆಯಲ್ಲಿ ಅಭ್ಯಾಸಿಸುತ್ತಿರುವ ಮಕ್ಕಳನ್ನೆಲ್ಲ ಶಿಕ್ಷಕರು ತಮ್ಮ ಮಕ್ಕಳೆಂಬ ಭಾವನೆಯಿಂದ ನೋಡಿಕೊಳ್ಳಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ನೀಡಿ. ಮುಂದಿನ ದಿನಗಳಲ್ಲಿ ಅವರಲ್ಲಿ ಸಮಾಜದಲ್ಲಿರುವ ಇರುವ ತಪ್ಪುಗಳನ್ನು ತಿದ್ದುವ ಸಾಮರ್ಥ್ಯ ಬೆಳೆಯಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದಡ ಎಂದು ಹೇಳಿದರು.

ಸಮಸ್ಯೆಗಳನ್ನು ಪರಿಹರಿಸಲಾಗುವುದು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಮಾತನಾಡಿ, ಜಗತ್ತಿನಲ್ಲಿ ಶಿಕ್ಷಣ ಹಾಗೂ ಜ್ಞಾನವೆಂಬುದು ನಿರಂತರವಾಗಿ ಆಸಕ್ತರ ಆಸ್ತಿಯಾಗಿರುತ್ತದೆ. ಕದಿಯಲು ಸಾಧ್ಯವಾಗದ ಸಂಪತ್ತು ಶಿಕ್ಷಣ, ಅಂತಹ ಶಿಕ್ಷಣವನ್ನು ನೀಡಲು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ, ಶಿಕ್ಷಕರು ಯಾವುದೇ ಭಯಪಡದೆ ಕಾರ್ಯ ನಿರ್ವಹಿಸಿ ಮುಖ್ಯಮಂತ್ರಿಗಳು ನಿಮ್ಮ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಲಿಖಿತವಾಗಿ ದಾಖಲಿಸಿದ್ದಾರೆ, ಸಾಧ್ಯವಾದಷ್ಟು ಬೇಗ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ಶಿಕ್ಷಕರಿಗೆ ಇರುವ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದೆ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕರು ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಉತ್ತಮ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ ಎಂಬುದನ್ನು ಉತ್ತಮ ಫಲಿತಾಂಶ ನೀಡಿ ನಿರೂಪಿಸಿ‌, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಅನುಮೋದನೆಯನ್ನು ಮುಖ್ಯ ಮಂತ್ರಿಗಳು ನೀಡಿದ್ದಾರೆ, ಈ ಭಾರಿ ಸುಮಾರು 15 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಹೋರಾಟ ಮಂಡ್ಯದಲ್ಲಿಯೇ ನಿಲ್ಲಬೇಕು, ಸಾಧ್ಯವಾದಷ್ಟು ಶೀಘ್ರವಾಗಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ, ಶಿಕ್ಷಕರ ಪರವಾಗಿ ಸರ್ಕಾರ ಇದೆ ಎಂದು ಹೇಳಿದರು.

ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಶಿಕ್ಷಣ ವೃತ್ತಿಯಿಂದ ಮಾತ್ರ ಹಲವು ವೃತ್ತಿಗಳನ್ನು ಹುಟ್ಟುಹಾಕಲು ಸಾಧ್ಯ, ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಹೊಣೆ ನಮ್ಮೇಲ್ಲರ ಮೇಲೆ ಇದೆ, ಸರ್ಕಾರಿ ಶಾಲೆಗಳ ಮೇಲೆ ಜನರಿಗೆ ಇರುವ ತಾತ್ಸಾರ ಭಾವನೆ ಹೋಗಲಾಡಿಸಬೇಕು, ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಸಹ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಿಕ್ಷಕರು ಸದಾ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು, ಹಾಗೇಯೇ ತಮ್ಮ ಆರೋಗ್ಯದ ಕಡೆ ಗಮನಹರಿಸಿ, ಪುಸ್ತಕದ ಪಾಠವನ್ನು ಎಲ್ಲರೂ ಮಾಡ್ತಾರೆ, ಆದರೆ ಮಕ್ಕಳಿಗೆ ಜೀವನ ಪಾಠವನ್ನು ಹೇಳಿಕೊಡುವುದು ಶಿಕ್ಷಕರಿಂದ ಮಾತ್ರ ಸಾಧ್ಯ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ, ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಕರಿಸಬೇಕು, ಇಲ್ಲವಾದಲ್ಲಿ ನೀವು ಆದರ್ಶ ಶಿಕ್ಷಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ