ಅವೈಜ್ಞಾನಿಕ ರಸ್ತೆ ಡುಬ್ಬಕ್ಕೆ ಮೊನ್ನೆ ಬಲಿಯಾದ ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರದ ರೋಹಿತ್ ಸಾವಿನ ಹಿನ್ನೆಲೆಯಲ್ಲಿ ಮಂಡ್ಯದ ಪ್ರಜ್ಞಾವಂತರು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ರವಿಕುಮಾರ್ ಗೌಡರಿಗೆ ಪತ್ರ ಬರೆದು ಅವೈಜ್ಞಾನಿಕ ರಸ್ತೆ ಡುಬ್ಬಗಳನ್ನು ತೆರವು ಮಾಡುವಂತೆ ಕೋರಿದ್ದಾರೆ.
ಪತ್ರದ ಸಾರಾಂಶ ಹೀಗಿದೆ..
ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಶಂಕರಲಿಂಗೇಗೌಡರಿಗೆ ಸಾಂತ್ವನ ಹೇಳಿದ್ದೀರಿ. ನಿಮ್ಮ ಈ ನಡೆ ಇಷ್ಟವಾಯಿತು. ಕಷ್ಟದಲ್ಲಿರುವ ಈ ಕುಟುಂಬಕ್ಕೆ ಆರ್ಥಿಕ, ನೈತಿಕ ನೆರವನ್ನೂ ನೀಡುತ್ತೀರಿ, ಅದರಲ್ಲಿ ಯಾವ ಅನುಮಾನವೂ ಇಲ್ಲ. ಇಲ್ಲಿಗೆ ನಿಮ್ಮ ಜವಾಬ್ದಾರಿ ಮುಗಿಯಿತೇ? ಇಲ್ಲ! ಈ ಕಡೆಗೂ ನೀವು ಗಂಭೀರವಾಗಿ ಗಮನ ಹರಿಸಬೇಕಿದೆ.
1. ಪ್ರತಿನಿತ್ಯ ಸಾರ್ವಜನಿಕರ ಪ್ರಾಣ ತೆಗೆದುಕೊಳ್ಳುತ್ತಿರುವ ಅವೈಜ್ಞಾನಿಕ ರೋಡ್ ಹಂಪ್ಸ್‌ಗಳನ್ನು ತೆರವು ಮಾಡಿಸಬೇಕು.
2. ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದಾಗ ಸಕಾಲದಲ್ಲಿ ತುರ್ತು ಚಿಕಿತ್ಸೆ ಸಿಗಲು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭಿಸಲು ಮುಂದಾಗಬೇಕು.
3. ಕೆಲಸ ಅರಸಿ ದೂರದ ಮೈಸೂರು, ಬೆಂಗಳೂರುಗಳಿಗೆ ನಮ್ಮ ಹುಡುಗರು ವಲಸೆ ಹೋಗುತ್ತಿದ್ದಾರೆ. ನಾವೀಗ ಮಂಡ್ಯದಲ್ಲೇ ಉದ್ಯೋಗ ಸೃಷ್ಟಿಸುವತ್ತ ಯೋಚಿಸಬೇಕು. ಜಿಲ್ಲೆಯ ಯುವಕರ ನವೋದ್ಯಮಗಳನ್ನು ಪ್ರಾಮಾಣಿಕವಾಗಿ ಬೆಂಬಲಿಸಬೇಕು.
ಇದರಿಂದ ಬಡವರು, ಮಧ್ಯಮ ವರ್ಗದವರು ಮತ್ತು ಮಂಡ್ಯದ ಹಳ್ಳಿಗಾಡಿನ ರೈತರ ಮಕ್ಕಳ ಪ್ರಾಣ ಉಳಿಸುವ ಪುಣ್ಯದ ಕೆಲಸ ಮಾಡಿದಂತಾಗುತ್ತದೆ. ರೋಹಿತ್ ಕೂಡ ಇಂತದೇ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ. ಮೈಸೂರಿನಲ್ಲಿ ಕೆಲಸ ಮುಗಿಸಿ, ವಾರಾಂತ್ಯಕ್ಕೆ ಹುಟ್ಟಿದೂರಿಗೆ ಬರುವ ಧಾವಂತದಲ್ಲಿ ಚಿಕ್ಕ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಅಸುನೀಗಿದ. ಅವನ ಸಾವು ನಮ್ಮೆಲ್ಲರ ಕಣ್ಣು ತೆರಸಲಿ ಎಂದು ಪ್ರಜ್ಞಾವಂತರು ನಾಳೆ ಸಚಿವರಿಗೆ ಮನವಿ ಮಾಡಲಿದ್ದಾರೆ.




