Thursday, November 19, 2026

ಪ್ರಾಯೋಗಿಕ ಆವೃತ್ತಿ

ಗರ್ಭಗುಡಿ ಸಂಸ್ಕೃತಿ ಬೇಕಾಗಿಲ್ಲ, ಗ್ರಂಥಾಲಯ ಸಂಸ್ಕೃತಿ ಬೇಕು: ಜ್ಞಾನಪ್ರಕಾಶ ಸ್ವಾಮೀಜಿ

ಭಾರತ ದೇಶ ಕೃಷಿ ಸಂಸ್ಕೃತಿಗೆ ಸೇರಿದೆಯೇ ಹೊರತು ಋಷಿ ಸಂಸ್ಕೃತಿಗೆ ಸೇರಿದ್ದಲ್ಲ, ಆದರೆ ಮನುವಾದಿಗಳು ಗರ್ಭಗುಡಿ ಸಂಸ್ಕೃತಿಯನ್ನು ವೈಭವಿಕರಿಸುತ್ತಿದ್ದಾರೆ, ನಮಗೆ ಗರ್ಭಗುಡಿ ಸಂಸ್ಕೃತಿ ಬೇಕಾಗಿಲ್ಲ, ನಿರಂತರ ಓದುವ ಗ್ರಂಥಾಲಯ ಸಂಸ್ಕೃತಿ ಬೇಕು ಎಂದು ಮೈಸೂರು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ಸಹಯೋಗದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ, ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ನಡೆದ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಬೆಳೆದ ಅಕ್ಕಿಗೆ ಅರಿಶಿನ ಬೆರೆಸಿ ಮಂತ್ರಾಕ್ಷತೆ ಎಂದು ಎಲ್ಲೆಡೆ ವಿತರಿಸುತ್ತಿದ್ದಾರೆ, ನಿಮಗೆ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ಹೋಗುತ್ತೀರೊ, ಅಯೋಧ್ಯೆಗೆ ಹೋಗುತ್ತೀರೊ, ಆಸ್ಪತ್ರೆಗಳನ್ನು ಕಟ್ಟಬೇಕಾದ ನೆಲದಲ್ಲಿ ಮಂದಿರ ಕಟ್ಟುತ್ತಿದ್ದಾರೆ, ಗರ್ಭಗುಡಿಯಲ್ಲಿ ದೇವರಿಲ್ಲ, ಗಡಿ ಕಾಯುವ ಯೋಧ, ಅನ್ನದಾತ ರೈತರೇ ದೇವರು ಎಂದ ಅವರು, ಗರ್ಭಗುಡಿ ಸಂಸ್ಕೃತಿಯನ್ನು ಪ್ರತಿಪಾದಿಸಿ ವೈಭವಿಕರಿಸುತ್ತಿರುವ ಮನುವಾದಿಗಳ ವಿರುದ್ಧ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಮನುವಾದಿಗಳಿಗೆ ತಕ್ಕಪಾಠ ಕಲಿಸಬೇಕೆಂದು ಕರೆ ನೀಡಿದರು.

nudikarnataka.com

ಶಸ್ತ್ರ ಹಿಡಿದು ಹೋರಾಡುವ ಮೂಲಕ ಮಹರ್ ಸೈನಿಕರು ಭೀಮಾ ಕೋರೆಗಾಂವ್ ಚರಿತ್ರೆ ನಿರ್ಮಾಣ ಮಾಡಿದರು, ಇದೀಗ ನೀವುಗಳು ಸಂವಿಧಾನ ಬದ್ಧವಾಗಿ ದೊರೆತಿರುವ ಶಸ್ತ್ರ ರಹಿತ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಹೊಸ ಚರಿತ್ರೆ ನಿರ್ಮಾಣಕ್ಕೆ ಮುಂದಾಗಬೇಕು, ಮನುವಾದಿಗಳನ್ನು ಕಿತ್ತೊಗೆಯದಿದ್ದರೆ ಮತ್ತೊಮ್ಮೆ ಸ್ತನ ತೆರಿಗೆ ಕಟ್ಟುವ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.

ಅಂಬೇಡ್ಕರ್ ಅವರ ದೂರ ದೃಷ್ಟಿಯಿಂದ ದೊರೆತ ಸಂವಿಧಾನಬದ್ಧ ಹಕ್ಕು ಸಮರ್ಪಕ ಬಳಕೆಯಾಗಿದ್ದರೆ, ಅವರ ಆಶಯದಂತೆ ನಾವು ಆಳುವ ಸಮುದಾಯ ಆಗಬೇಕಾಗಿತ್ತು. ಆದರೆ ಎಲ್ಲರೂ ಸಾಮೂಹಿಕವಾಗಿ ಮಾರಾಟವಾಗಿದ್ದು, ಹೆಂಡ, ಸಾರಾಯಿ, ಹಣಕ್ಕೆ ಮತವನ್ನು ಮಾರಿಕೊಂಡಿದ್ದೀರಿ, ಗಂಡ ಇದ್ದರೂ ಚುನಾವಣೆ ವೇಳೆ ಸೀರೆ ತೆಗೆದುಕೊಳ್ಳುತ್ತೀರಿ, ಹಾಗಾಗಿ ಇದುವರೆಗೂ ಸಮುದಾಯದವರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ, ಸ್ವಾಭಿಮಾನ, ಘನತೆಯ ಬದುಕು ಕಟ್ಟಿಕೊಳ್ಳದಿದ್ದ ಮೇಲೆ ಏಕೆ ಬದುಕಿದ್ದೀರಿ ಎಂದು ಕಿಡಿಕಾರಿದರು.

ಹೋಮ,ಯಜ್ಞ, ಯಾಗಗಳು ಉದ್ಧಾರ ಮಾಡಲಿಲ್ಲ

ಹೋಮ,ಯಜ್ಞ, ಯಾಗಗಳು ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಮಾಡಲಿಲ್ಲ, ಹಾಕಿಕೊಂಡ ಬಾಯಿಬೀಗ ನಿಮ್ಮನ್ನು ಉದ್ದಾರ ಮಾಡಲಿಲ್ಲ, ದೇವರು ಎಂಬ ಮೌಢ್ಯದ ಹಿಂದೆ ಬಿದ್ದಿದ್ದೀರಿ, ದೇಶದ ಸ್ವಾತಂತ್ರ್ಯಕ್ಕೆ ಯಾವ ದೇವರು ಮುಂದಾಗಲಿಲ್ಲ, ಜನತೆಗೆ ಸಮಾನತೆ ಬದುಕು ಕಲ್ಪಿಸಲಿಲ್ಲ, ನಿಮ್ಮ ದೇವರ ಬಿಲ್ಲು, ಬಾಣ ಇತರೆ ಆಯುಧಗಳು ಕೆಲಸ ಮಾಡುವಂತಿದ್ದರೆ, ಇಲ್ಲಿಂದಲೇ ಪಾಕಿಸ್ತಾನಕ್ಕೆ ಬಿಲ್ಲು ಬಾಣ ಹಾರಿಸಿ ನುಚ್ಚುನೂರು ಮಾಡಬಹುದಿತ್ತು, ಈಗಲಾದರೂ ಎಚ್ಚೆತ್ತುಕೊಂಡು ಮೌಢ್ಯ ತೊರೆಯಿರಿ ಎಂದು ಸಲಹೆ ನೀಡಿದರು.

ಮಂತ್ರಾಕ್ಷತೆ ವಿತರಿಸಿ ಜನರನ್ನ ಮರಳು ಮಾಡುತ್ತಿರುವ ಬಿಜೆಪಿ

ಸಂವಿಧಾನ ಬದಲಾವಣೆಗೆ ಹುನ್ನಾರ ಮಾಡುತ್ತಾ,ಮಂತ್ರಾಕ್ಷತೆ ವಿತರಿಸಿ ಜನರನ್ನ ಮರಳು ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ದೇಶದಲ್ಲಿ ಮೂರನೇ ಬಾರಿಗೆ ಜೈ ಭೀಮ್ ಘೋಷಣೆ ಮೊಳಗಿಸಬೇಕೆಂದು ಶಾಸಕ ರವಿಕುಮಾರ್ ಕರೆ ನೀಡಿದರು.

ಸಂವಿಧಾನ ವಿರೋಧಿ ನಡೆ ಅನುಸರಿಸುವ ಅನಂತ್ ಕುಮಾರ್ ಹೆಗಡೆ ನಾಲ್ಕುವರೆ ವರ್ಷ ಸುಮ್ಮನಿದ್ದು, ಚುನಾವಣೆ ಸಮೀಪದಲ್ಲಿ ಬಾಯಿಗೆ ಬಂದಂತೆ ಮಾತನಾಡಿ, ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಾರೆ, ಇಂತಹ ಪುಂಡಾಟ ಕೊನೆಗಾಣಬೇಕು, ಯಾವುದೇ ಮಂತ್ರಾಕ್ಷತೆ, ಶ್ರೀರಾಮ,ಆಂಜನೇಯ, ಶನಿಮಹಾತ್ಮ ಯಾರ ಭವಿಷ್ಯವನ್ನು ರೂಪಿಸುವುದಿಲ್ಲ, ಜನತೆ ಈಗಲೇ ಎಚ್ಚೆತ್ತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಶೋಷಿತರಿಗೆ ಮಧ್ಯ ಸೇವನೆ ದೊಡ್ಡ ಶಾಪ, ಯಾವುದೇ ಕಾರಣಕ್ಕೂ ಹೆಂಡದ ದಾಸರಾಗಬೇಡಿ, ಮದ್ಯ ಸೇವನೆ ತೊರೆದು ಹೊಸ ಬದುಕಿಗೆ ಮುಂದಾಗಿ, ಹಸಿವು ಸಹಿಸದ ಸಮುದಾಯ ನಾಶವಾಗುತ್ತೆ, ಅಂಬೇಡ್ಕರ್ ಎಷ್ಟೋ ರಾತ್ರಿ ನೀರು ಕುಡಿದು ಮಲಗಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ, ಅವರ ಹೋರಾಟದಿಂದ ಇಂದು ನೀವು ಏನೇನು ತಿನ್ನುತ್ತಿದ್ದೀರಿ, ಅದಕ್ಕಾಗಿಯಾದರೂ ಕೃತಜ್ಞತಾರಾಗಿರಬೇಕು, ಕೃತಜ್ಞತೆ ಇಲ್ಲದೆ, ನೆನಪುಗಳು ಇಲ್ಲದೆ ಕನಸಿನ ಸಮಾಜ ಹೇಗೆ ಕಟ್ಟಲು ಸಾಧ್ಯ ಎಂದು ಹೇಳಿದರು.

ಭೀಮಾ ಕೋರೆಗಾಂವ್ ಯುದ್ದ ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದಿಲ್ಲ ಬದಲಾಗಿ ಸ್ವಾಭಿಮಾನ ಮತ್ತು ಘನತೆ ನಡೆದ ಯುದ್ಧ, ಅಂದು ಸ್ವಾಭಿಮಾನದ ಹೋರಾಟ ನಡೆಯದಿದ್ದರೆ ಫುಲೆ ದಂಪತಿ ಶೋಷಿತರಿಗೆ ಶಿಕ್ಷಣ ಕೊಡಲು ಸಾಧ್ಯವಾಗುತಿತ್ತಾ ? ಅಂಬೇಡ್ಕರ್ ಶಿಕ್ಷಣ ಪಡೆದು ಸಮಾನತೆಯ ಬದುಕು ದೊರಕಿಸಿಕೊಡಲು ಸಾಧ್ಯವಾಗುತ್ತಿತ್ತಾ ? ಇತಿಹಾಸ ಅರಿತು ಕೃತಜ್ಞರಾಗಿ ಸ್ವಾಭಿಮಾನದಿಂದ ಬದುಕಲು ಮುಂದಾಗಿ ಎಂದು ಸಲಹೆ ನೀಡಿದರು.

ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಬಂತೇ ಬೋಧಿದತ್ತ ತೇರಾ ಮಾತನಾಡಿ ಜೈ ಭೀಮ್ ಸ್ಫೂರ್ತಿ ಯ ಸಂಕೇತ ಆದರೆ ಶೋಷಿತರು ಜ್ಯೋತಿ ಗೊತ್ತಾಗಲಿದೆ ಎಂಬ ಕಾರಣಕ್ಕಾಗಿ ಜೈ ಭೀಮ್ ಎಂದು ಹೇಳಲು ಹಿಂಜರಿಯುತ್ತಿದ್ದಾರೆ, ಜೈ ಭೀಮ್ ಮಹತ್ವ ಅರಿತು ಪ್ರತಿನಿತ್ಯ ಬಳಸಲು ಮುಂದಾಗಬೇಕು ಎಂದು ಹೇಳಿದರು.

ದೇಶದಲ್ಲಿ ಮಹಿಳೆಯೊಬ್ಬರು ಪ್ರಧಾನ ಮಂತ್ರಿ, ಇಬ್ಬರು ಮಹಿಳೆಯರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ ಎಂದರೆ ಅದಕ್ಕೆ ಸಂವಿಧಾನ ಕಾರಣ, ಇದನ್ನು ಅರಿತು ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಬುದ್ಧನ ಸಂದೇಶದಂತೆ ದೊಡ್ಡ ಗ್ರಂಥ, ಪುಸ್ತಕ ಬರೆದಿದ್ದಾರೆ ಮತ್ತು ಸಮಾಜದಲ್ಲಿ ಹೆಚ್ಚಿನ ಜನರು ಪಾಲನೆ ಮಾಡುತ್ತಾರೆ ಹಾಗೂ ಹಿರಿಯರು ಪೂರ್ವಜರು ಪಾಲಿಸಿದ್ದಾರೆ ಎಂದು ಯಾವುದನ್ನು ಒಪ್ಪಿಕೊಳ್ಳಬೇಡಿ, ಪ್ರತಿಯೊಂದು ವಿಚಾರವನ್ನು ಪರೀಕ್ಷಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪಂಚಶೀಲ ತತ್ವವನ್ನು ಪಾಲಿಸಿ ಎಂದು ಕರೆ ನೀಡಿದರು.

ಇದೆ ವೇಳೆ ನಿವೃತ್ತ ಅಧಿಕಾರಿಗಳಾದ ಪ್ರೊ. ಹುಲ್ಕೆರೆ ಮಹದೇವ್, ಸಿದ್ದಯ್ಯ ಹಾಗೂ ಚಂದ್ರಶೇಖರ್ ರವರನ್ನ ಅಭಿನಂದಿಸಲಾಯಿತು.

ಕರ್ನಾಟಕ ಸ್ವಾಭಿಮಾನಿ ಸಮ ಸಮಾಜದ ಸಂಸ್ಥಾಪಕ ಡಾಕ್ಟರ್ ಕುಮಾರಸ್ವಾಮಿ ಸಾಕ್ಯ ಅಧ್ಯಕ್ಷತೆ ವಹಿಸಿದ್ದರು, ರಾಜ್ಯಾಧ್ಯಕ್ಷ ಎಚ್.ಎನ್. ನರಸಿಂಹಮೂರ್ತಿ, ಪ್ರಜಾ ಪರಿವರ್ತನ ವೇದಿಕೆ ರಾಜ್ಯಾಧ್ಯಕ್ಷ ಬಿ. ಗೋಪಾಲ್, ಡಾ. ಲೋಕೇಶ್ ಮೌರ್ಯ, ಅಭಿ ಗೌಡ, ಕೃಷ್ಣಪ್ಪ, ಎಚ್ ಎಲ್ ಸತೀಶ್, ಗುಡುಗೇನಹಳ್ಳಿ ಸ್ವಾಮಿ, ಡಿ ರಾಜಗೋಪಾಲ್, ಆನಂದ್, ಸುಧಾಕರ್ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ