Friday, November 20, 2026

ಪ್ರಾಯೋಗಿಕ ಆವೃತ್ತಿ

ಜಾಗತಿಕ ಲಿಂಗಾಯತ ಮಹಾಸಭೆ ನಟ ಚೇತನ್ ಬಂಧನವನ್ನೇಕೆ ಖಂಡಿಸಲಿಲ್ಲ ?

✍️ ಸಿದ್ದಪ್ಪ ಮೂಲಗೆ

ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆಂದು ಬೊಬ್ಬಿಡುತ್ತಿರುವ ಜಾಗತಿಕ ಲಿಂಗಾಯತ ಮಹಾಸಭೆ ಸಮುದಾಯದ ನಟ ಚೇತನ್ Chetan Ahimsa ಬಂಧನವನ್ನು ಇಂದಾದರೂ ಖಂಡಿಸುತ್ತದೆಯೋ? ಅಥವಾ ಬಿಜೆಪಿ ಮೇಲಿನ ಪ್ರೀತಿ ಖಂಡಿಸದಂತೆ ತಡೆಯುತ್ತದೆಯೋ?

ಅಖಿಲ ಭಾರತ ವೀರಶೈವ ಮಹಾಸಭೆಯ ಧಾರ್ಮಿಕ ನಿಲುವು ಎಡಬಿಡಂಗಿತನದಿಂದ ಕೂಡಿದೆ. ಆದರೆ, ಅದರ ರಾಜಕೀಯ ನಿಲುವು ಸ್ಪಷ್ಟವಾಗಿದೆ. ಆದರೆ ಈ ಜಾಗತಿಕ ಲಿಂಗಾಯತ ಮಹಾಸಭೆಗೆ ಒಂದು ಸ್ಪಷ್ಟವಾದ ರಾಜಕೀಯ ನಿಲುವೇ ಇಲ್ಲ. ಹಾಗಾಗಿಯೇ ಈ ಸಂಘಟನೆಯ ಕೆಲ ಮುಖಂಡರು ಸಾರ್ವಜನಿಕವಾಗಿಯೇ ಕೇಸರಿ ಶಾಲು ಧರಿಸಿ, ಬಿಜೆಪಿ ಟಿಕೆಟ್ ಗಾಗಿ ಸಂಘಪರಿವಾರದ ದೊಡ್ಡಿಗೆ ಕಾಲಿಟ್ಟರೂ ಸಂಘಟನೆಯಿಂದ ಸಂಬಂಧಿಸಿದವರಿಗೆ ಹೀಗೇಕೆಂದು ಕೇಳುವುದು ದೂರವೇ ಉಳಿಯಿತು, ತದ್ವಿರುದ್ಧವಾಗಿ ಅಂತವರಿಗೆ ಇಲ್ಲಿ ಬಹುಪರಾಕಿನ ಸನ್ಮಾನವಿದೆ. ಜತೆಗೆ, ಒಂದು ಗುಲುಗುಂಜಿಯಷ್ಟು ಅಳುಕಿಲ್ಲದೆ ಖುಲ್ಲಂಖುಲ್ಲಾ EWS ಬೆಂಬಲಿಸುತ್ತದೆ.

ಅದು ಯಾವುದೇ ಸಂಘಟನೆಯಾಗಿರಲಿ ಅದಕ್ಕೊಂದು ಸ್ಪಷ್ಟ ರಾಜಕೀಯ ನಿಲುವು ಇರಲಿಲ್ಲವೆಂದರೆ ಅದು ಬಲಾಢ್ಯ ಪಕ್ಷದ ಬಾಲಂಗೋಚಿಯಾಗಿದೆ ಎಂದರ್ಥ. ರಾಜಕೀಯ ನಿಲುವೇ ನಮ್ಮ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ನಿಲುವು ನಿರ್ಧರಿಸುತ್ತದೆ.

ಹನ್ನೆರಡನೆಯ ಶತಮಾನದಲ್ಲಿ ಸಮಾನತೆ ಕನಸು ಕಂಡಿದ್ದ ಬಸವಾದಿಗಳ ಹತ್ಯಾಕಾಂಡ ನಡೆದದ್ದು ಅವು ರಾಜಕೀಯ ಹತ್ಯೆಗಳಲ್ಲವೇ? ಎಂ ಎಂ ಕಲಬುರ್ಗಿಯವರ ಹತ್ಯೆ ಅದು ರಾಜಕೀಯ ಹತ್ಯೆವಲ್ಲವೇ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರು, ಹಾಗಾಗಿ ಅವರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಅದು ಕಾಂಗ್ರೆಸ್ ಸರಕಾರದ ರಾಜಕೀಯ ನಿರ್ಧಾರ ಆಗಿರಲಿಲ್ಲವೇ?

ಒಂದು ಚುನಾಯಿತ ಸರ್ಕಾರದ ಕ್ಯಾಬಿನೆಟ್ ನಿಂದ ಹೋಗಿರುವ ಅರ್ಜಿಯನ್ನು ಕನಿಷ್ಠ ಸಂಸತ್ತಿನಲ್ಲಿಟ್ಟು ಚರ್ಚೆಯೂ ನಡಸದೆ ಅರ್ಜಿಯನ್ನು ತಿರಸ್ಕರಿಸಿದ್ದು, ಅರ್ಜಿಯನ್ನು ವಾಪಸ್ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು ಅದು ಬಿಜೆಪಿಯ ರಾಜಕೀಯ ನಿಲುವು ಅಲ್ಲವೇ?

ನಮ್ಮ ಬದುಕಿನ ಹಾಗೂ ದೇಶದ ಎಲ್ಲಾ ಆಗುಹೋಗುಗಳನ್ನು ನಿರ್ಧರಿಸುವುದು ರಾಜಕೀಯವೆ. ಈ ದೇಶದಲ್ಲಿ ಕೋಮುವಾದ ಬಾನೆತ್ತರಕ್ಕೆ ಬೆಳೆದದ್ದು, ಇಲ್ಲಿ ಬಡತನ ಹಾಸುಹೊಕ್ಕಾಗಿ ಹರಡಿದ್ದು, ಬಡಜನತೆಗೆ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಗಗನಕುಸುಮ ಆಗಿದ್ದಕ್ಕೆ ರಾಜಕೀಯವೇ ಕಾರಣ.

ಯುದ್ಧಕ್ಕೆ ಹೊರಟಾಗ ಶತ್ರುಗಳನ್ನು ಗುರುತಿಸಲು ಸೋತರೆ ನಾವು ಬೀಸಿದ ಕತ್ತಿಗೆ ನಾವೇ ಬಲಿಯಾಗುವ ಅಪಾಯ ಇರುತ್ತದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ