Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ಹೊಸದಾಗಿ1000 ಮದ್ಯದಂಗಡಿ ತೆರೆಯುವುದಿಲ್ಲ: ಸಿಎಂ ಸಿದ್ದರಾಮಯ್ಯ

ಒಂದು ಸಾವಿರ ಮದ್ಯದಂಗಡಿಗಳನ್ನು ತೆರೆಯುವುದಾಗಿ ಚಿಂತನೆ ನಡೆಸುತ್ತಿರುವುದಾಗಿ ಅಬಕಾರಿ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ನಾವು ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಶುಕ್ರವಾರ ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಅವರು, “ಮದ್ಯದಂಗಡಿಗಳನ್ನು ರಾಜ್ಯದಲ್ಲಿ ಹೆಚ್ಚಿಸಬೇಕು ಎಂಬುವ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದರು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, “ಆ ಎರಡು ಪಕ್ಷಗಳ ಮೈತ್ರಿಯೇ ಅಪವಿತ್ರ ಮೈತ್ರಿ. ಜನತಾ ದಳ (ಜಾತ್ಯತೀತ) ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ. ಮೈತ್ರಿ ಬಗ್ಗೆ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ಸಿಗೆ ಬರುವ ಬಗ್ಗೆ ಮಾತನಾಡುತ್ತಿದ್ದಾರೆ” ಎಂದರು.

ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಗೆ ಸರ್ಕಾರ ಬ್ರೇಕ್ ಹಾಕಿದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, “ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದವರೇ ಬಿಜೆಪಿಯವರು. ಅವರಿಗೆ ಯಾವ ನೈತಿಕತೆ ಇದೆ. ನಮ್ಮ ಕಾಲದಲ್ಲಿ ಯಾವತ್ತೂ ಇಷ್ಟೊಂದು ಸಾಲ ಮಾಡಿರಲಿಲ್ಲ. ಹಾಗೂ ಈ ಮೊತ್ತದ ಬದ್ಧತೆ ವೆಚ್ಚ ಇರಲಿಲ್ಲ. ಎಲ್ಲಾ ಹಾಳು ಮಾಡಿ ಈಗ ಹೇಳುತ್ತಾರೆ” ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ಶಾಸಕರೇ ಈ ಆರೋಪ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, “ಹೆಚ್ಚುವರಿ ಅನುದಾನ ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ. ನಿಯಮಿತ ಅನುದಾನ ದೊರೆಯುತ್ತಿದೆ. ಭದ್ರಾ ಯೋಜನೆಗೆ 200 ಕೋಟಿ ರೂ.ಗಳನ್ನು ಭೂ ಸ್ವಾಧೀನಕ್ಕೆ ನೀಡಲಾಗಿದೆ. ಕಾರ್ಯಕ್ರಮಗಳಿಗೆ ಅನುದಾನದ ಕೊರತೆ ಇಲ್ಲ ಹಾಗೂ ಗ್ಯಾರಂಟಿ ಯೋಜನೆಗಳಿಗೂ ಅನುದಾನದ ಕೊರತೆ ಇಲ್ಲ” ಎಂದರು.

ಸತ್ಯ ಶೋಧನೆ ಯಾವುದರ ಬಗ್ಗೆ?

ಬಿಜೆಪಿ ಸತ್ಯ ಶೋಧನಾ ಸಮಿತಿ ಶಿವಮೊಗ್ಗಕ್ಕೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಸತ್ಯ ಶೋಧನೆ ಮಾಡಲು ಏನಾಗಿದೆ? ಯಾವುದರ ಬಗ್ಗೆ ಸತ್ಯ ಶೋಧನೆ ಮಾಡುತ್ತಾರೆ? ಈದ್-ಮಿಲಾದ್ ಸಂದರ್ಭದಲ್ಲಿ ಮುಸ್ಲಿಮರು ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ, ಯಾರು ಕಲ್ಲು ಎಸೆದಿದ್ದಾರೋ ಅವರ ಮೇಲೆ ಕ್ರಮ ಜರುಗಿಸಲಾಗಿದೆ. ಅವರು ಯಾವ ಪಕ್ಷದವರೇ ಆಗಿದ್ದರೂ, ಯಾರೇ ಆಗಿದ್ದರೂ ಅವರನ್ನು ಬಿಡಬೇಡಿ, ಕಾನೂನು ಕೈಗೆತ್ತಿಕೊಳ್ಳಲು ಬಿಡಬೇಡಿ ಎಂದು ಪೊಲೀಸರಿಗೆ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!