ಗಾನಾಸುಮಾ ಪಟ್ಟಸೋಮನಹಳ್ಳಿ-ಕವಿ
ಬಹುಶಃ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಲವು ಹಗ್ಗ ಜಗ್ಗಾಟಗಳ ನಡುವೆ ಅಧ್ಯಕ್ಷರ ಆಯ್ಕೆಯಾಗಿದೆ. ಬಹುಶಃ ಗೊ.ರು.ಚನ್ನಬಸಪ್ಪ ಬವರ ಆಯ್ಕೆಯ ಮೂಲಕ ವರ್ಷಗಳಿಂದ ತೊಡಕಾಗಿ, ವಿವಾದವಾಗಿದ್ದ ವಿಷಯ ಕೊನೆಗೂ ಸಮಾಧಾನಗೊಂಡಿತು. ಇನ್ನೇನು ಸಮ್ಮೇಳನ ಸಾಂಗೋಪಸಾಂಗವಾಗಿ ನಡೆಯಬೇಕು ಎನ್ನುವಷ್ಟರಲ್ಲಿ ಈಗ ಆಹಾರದ ವಿಷಯ ಈಗ ಬುಗಿಲೆದ್ದಿದೆ.ಬಹುಶಃ ಇದು ತಾರ್ಕಿಕ ಅಂತ್ಯ ಕಾಣುವ ಸೂಚನೆ ಸದ್ಯಕ್ಕೆ ಕಾಣುತಿಲ್ಲ.
ಮೊದಲಿಗೆ ವಿವಾದವಾಗುತ್ತಿರುವುದು ಊಟ ನಾವು ಮಾಡ್ತೀವಿ ಅನ್ನೋದಲ್ಲ. ಮಾನ್ಯ ಸಚಿವ ಸಂಪುಟ ದರ್ಜೆಯ ಸಮಾನರಾದ ಅಧ್ಯಕ್ಷರು, ಈ ನೆಲದ ಇನ್ನೂ ಮುಂದೆ ಹೋಗಿ ಈ ವಿಶ್ವದ ಬಹುಸಂಖ್ಯಾತರ ಆಹಾರವನ್ನ ಅವಮಾನಿಸಿರುವುದು. ಅದನ್ನು ಕೆಟ್ಟದ್ದು ಅಂತಾ ಬಿಂಬಿಸಿರುವುದು ಜೊತೆಗೆ ಮಾಂಸಹಾರಿಗಳನ್ನ ದುಷ್ಟರು ಎನ್ನುವರ್ಥ ಬರುವಂತೆ ಮಾಡಿರುವುದು. ಯಾವುದೇ ಸ್ಥಳದಲ್ಲಿ ಸಮ್ಮೇಳನವಾದರೆ ಅಲ್ಲಿನ ಸ್ಥಳೀಯ ಆಹಾರ ವಿಶೇಷಕ್ಕೆ ಹೆಚ್ಚು ಒತ್ತು ಕೊಟ್ಟು,ಆ ರುಚಿಗಳನ್ನ ನಾಡಿನ ಇತರೆ ಭಾಗದಿಂದ ಬಂದಂತ ಅತಿಥಿಗಳಿಗೆ ಬಡಿಸಿ ಉಪಚರಿಸುವುದು ವಾಡಿಕೆ.

ಹಿಂದೊಮ್ಮೆ ಈ ನೆಲದ ಪ್ರಾಮಾಣಿಕ ಪತ್ರಕರ್ತರಾದ ಪಿ.ಲಂಕೇಶರು ತಮ್ಮ ಮೊದಲ ಸಂಚಿಕೆಯ ತಲೆಬರಹದಲ್ಲೇ ಈ ಎರಡೂ ವರ್ಗದವರ ಸಂಘರ್ಷನ್ನ ಬಿಂಬಿಸುವಂತ “ಚಿಕನ್ ಫಲಾವ್ v/s ಬೆಂಡೆಕಾಯಿ ಗೊಜ್ಜು ಎಂದು ನೀಡುವದರ ಮೂಲಕ ವಿಶ್ಲೇಸಿದ್ದರು.
ಕೆಲವರಿಗೆ ಆ ಊಟ ಒಗ್ಗದೆ ಇದ್ದರೆ ಮಾಮೂಲಿಯಾದ ಊಟವೂ ಸಿದ್ದಪಡಿಸುವುದು ಇದ್ದೇ ಇರುತ್ತೆ.ಯಾರಿಗೆ ಯಾವುದು ಇಷ್ಟವೋ ಅದನ್ನ ಸ್ವೀಕರಿಸುವುದು ಅವರವರಿಗೆ ಬಿಟ್ಟದ್ದು.ಯಾರಿಗೇನು ಬಲವಂತ ಇರುವುದಿಲ್ಲ.ಈಗ ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಇಲ್ಲಿನ ಸ್ಥಳೀಯ ವಿಶೇಷ ಖಾದ್ಯವೆಂದರೆ ಮುದ್ದೆ, ಉಪ್ಸಾರು,ಮತ್ತು ಮಾಂಸಾಹಾರ.ಬಹುಶಃ ಮಂಡ್ಯ ಜಿಲ್ಲೆಯನ್ನ ಒಂದು ವರ್ಷದಲ್ಲಿ ನೀವು ಗಮನಿಸುತ್ತಾ ಬರುವುದಾದರೆ ಇಲ್ಲಿ ನಡೆಯುವ ಬಹುತೇಕ ಹಬ್ಬಗಳಲ್ಲಿ ಮಾಂಸಹಾರದ್ದೇ ಪಾರುಪತ್ಯ.ಜೊತೆಗೆ ಪ್ರತಿ ವಾರದ ನಾಲ್ಕುದಿನ ಇಲ್ಲಿನ ಬಹುಪಾಲು ದೇವಾಲಯಗಳಲ್ಲಿ (ಕೆಲವು ದೇವಾಲಯ ಹೊರತು ಪಡಿಸಿ)ಭಕ್ತರು,ಸಾರ್ವಜನಿಕರು ಹುಟ್ಟಿದಬ್ಬ,ಬೀಗರ ಔತಣ,ನಾಮಕರಣ, ಸಂತೋಷಕೂಟಗಳಲ್ಲಿ ಮಾಂಸಾಹಾರವೇ ಪ್ರಧಾನವಾಗಿರುತ್ತದೆ.
ಜೊತೆಗೆ ಜಿಲ್ಲೆಯ ಯಾವ ಮೂಲೆಗೆ ಹೋದರೂ ಮಿಲ್ಟ್ರೀ ಹೊಟೆಲ್ ಗಳ ಭಿನ್ನ ಭಿನ್ನ ಹೆಸರಿನಲ್ಲಿ ಮಾಂಸಾಹಾರಿಗಳನ್ನ ಆಕರ್ಷಿಸುತ್ತವೆ. ಹಿಂದೂ,ಮುಸ್ಲಿಂ ಸೇರಿದಂತೆ ಎಲ್ಲರ ಮಾಲೀಕತ್ವದ ಚಿಕನ್, ಮಟನ್ ಅಂಗಡಿಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ.ಹೀಗೆ ಈ ಜಿಲ್ಲೆಯ ಜನರ ಬಹುಮುಖ್ಯ ಆಹಾರ ಪದ್ದತಿಯನ್ನ ಅಖಿಲ ಭಾರತ ಸಮ್ಮೇಳನದಲ್ಲಿ ಒಂದು ಭಾಗವಾಗಿ ಇರಬೇಕು ಎಂಬುದು ಎಲ್ಕರ ಆಶಯ. ಎಂದಿನಂತೆ ಸಸ್ಯಾಹಾರಿಗಳಿಗೂ ಪ್ರತ್ಯೇಕ ವಿಭಾಗ ಇರುತ್ತದೆ. ಯಾರಿಗೆ ಯಾವುದು ಇಷ್ಟವೋ ಅವರು ತಿನ್ನಬಹುದು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ಮಾಂಸಾಹಾರ ನಿಷೇಧ’ ಎಂಬ ಯಾವ ಕಾನೂನು ಜಾರಿಯಲ್ಲಿಲ್ಲ. ಹಾಗಂತ ಪದೆ ಪದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾಂಸಾಹಾರ ಯಾಕೆ ನೀಡುತಿಲ್ಲ ಎಂದು ಯಾರು ಪ್ರಶ್ನಿಸುತಿಲ್ಲ. ಹಾಗಂತ ಅಗತ್ಯ ಬಿದ್ದರೆ ಮಾಂಸಾಹಾರವನ್ನೂ ನೀಡಬಹುದು ಇಲ್ಲ ಮಾನ್ಯ ಕೂಡಾ. ನೀಡೋದು,ತಿನ್ನೋದು ಬೇರೆ ವಿಷಯ.ಸರ್ಕಾರದ ಕಾರ್ಯಕ್ರಮ ಗಳಾದ ಕೃಷಿ ಇಲಾಖೆಯ ಕಾರ್ಯಕ್ರಮದಲ್ಲಿ ಮಾಂಸಾಹಾರದ ಬಗೆ ಬಗೆ ಖಾದ್ಯಗಳ ಕೂಟವಿರುವುದು ಸುಳ್ಳಲ್ಲ
ಇನ್ನೂ ರಾಜಕಾರಣಿಗಳ ಪ್ರತಿ ಕಾರ್ಯಕ್ರಮ ದಲ್ಲಿ ಮಾಂಸಾಹಾರದ್ದೆ ಸಿಂಹಪಾಲು. ಜನರನ್ನ ಒಲಿಸಿಕೊಳ್ಳಲು, ಕಾರ್ಯಕ್ರಮ ಕ್ಕೆ ಬರುವಂತೆ ಮಾಡಲು ಅವರಿಗೆ ಇರುವ ಆಯುಧವೇ ಮಾಂಸಾಹಾರ.ಹೀಗಿರುವಾಗ ಈ ನೆಲದ ಬಹುಸಂಖ್ಯಾತರ ಆಹಾರ ಮಾಂಸಾಹಾರವೇ ಆಗಿದೆ.ಹಾಗಂತ ಬಹುಪಾಲು ಮಾಂಸಾಹಾರಿಗಳು ಅಲ್ಪಸಂಖ್ಯಾತರಾದ ಸಸ್ಯಾಹಾರಿಗಳನ್ನ ಕೆಟ್ಟವರು, ದುಷ್ಟರು,ಸಸ್ಯಾಹಾರ ಕೆಟ್ಟದ್ದು ಅಂತಾ ಬಿಂಬಿಸಿಲ್ಲ, ಟೀಕಿಸುತ್ತಲೂ ಇಲ್ಲ. ಯಾಕೆಂದರೆ ಆಹಾರ ಅವರವರ ಆಯ್ಕೆ.ಅವರಿಗೆ ಯಾವುದು ಇಷ್ಟವೋ ಅದನ್ನ ತಿನ್ನುವ ಹಕ್ಕು ಅವರಿಗಿದ್ದೇ ಇದೆ.
ಆದರೆ ಕಸಾಪ ಅಧ್ಯಕ್ಷರು ಒಂದು ಹೆಜ್ಜೆ ಮುಂದೆ ಹೋಗಿ ಬಹುಜನರ ಬಹುಮುಖ್ಯ ಆಹಾರವನ್ನ ಆರೋಗ್ಯ ಹಾನಿಕಾರಕ ಗುಟ್ಕಾಗಳ ಜೊತೆ ಸೇರಿಸಿ ನಿಷೇಧ ಮಾಡಿರುವುದು ಇಲ್ಲಿ ಬಹಸಂಖ್ಯಾತರ ಮನ ಕೆರಳಿಸಿದೆ. ಬೇಕಿದ್ದರೆ ಅಧ್ಯಕ್ಷರು ಎಲ್ಲರ ಜೊತೆ ಕುಳಿತು ಸೌಹಾರ್ಧವಾಗಿ ಮಾಂಸಾಹಾರವಾದರೆ ಸೂಕ್ತ ವ್ಯವಸ್ಥೆ ಕಷ್ಟ ಆಗಬಹುದು, ನಿರ್ವಹಣೆ ಕಷ್ಠ ಆಗಬಹುದು ಅಂತಾ ಹೇಳಿದ್ದರೆ ಒಪ್ಪಬಹುದಿತ್ತೇನೋ. ಆದರೆ ಆ ಆಹಾರವೇ ಕೆಟ್ಟದ್ದು,ಅದನ್ನ ಸೇವಿಸುವವರೆಲ್ಲಾ ಕೆಟ್ಟವರು ಎನ್ನುವಂತೆ ಮಾಡಿದ್ದಕ್ಕೆ ನನ್ನ ಪ್ರಖಂಡ ವಿರೋಧವಿದೆ.
ಅಧ್ಯಕ್ಷರೆ, ನಿಮಗೆ ಇಷ್ಟವಾದರೆ ನಿಮಗೆ ಏನು ಬೇಕೋ ಅದನ್ನ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ. ಆದರೆ ನಿಮ್ಮ ಮನೆಯಂತೆ ಸಾರ್ವಜನಿಕರು ಇರಬೇಕು ಎನ್ನುವುದು ಯಾರು ಒಪ್ಪುವಂತಹದಲ್ಲ. ಇಡೀ ಸಮ್ಮೇಳನ ನಡೆಯುತ್ತಾ ಇರುವುದು ಅದೇ ಬಹುಸಂಖ್ಯಾತರ ಹಣದಿಂದಲೂ ಸಹಾ ಎನ್ನುವುದನ್ನ ಮರೆಯುವಂತಿಲ್ಲ. ತಾವುಗಳು ಈ ಜಿಲ್ಲೆಯ ಮತ್ತು ಬಹುಸಂಖ್ಯಾತರ ಭಾವನೆಗಳಿಗೆ,ಆಹಾರಕ್ಕೆ ನೀವು ಗೌರವ ನೀಡಲೇಬೇಕು.ತಿನ್ನದೇ ಇರುವವರನ್ನ ಯಾರೂ ಬಲವಂತ ಮಾಡುವಂತಲ್ಲ. ಒಪ್ಪಿಕೊಳ್ಳೋಣ. ಆದರೆ ಬಹುಸಂಖ್ಯಾತರ ಬಗ್ಗೆ, ಆಹಾರದ ಬಗ್ಗೆ ನಿಮಗಿರುವ ಮನೋಧೋರಣೆಯಿದೆಯಲ್ಲ ಅದು ಬ್ರಾಹ್ಮಣ್ಯದ ಹೇರಿಕೆಯಲ್ಲದೇ ಬೇರೇನು ಇಲ್ಲ.
ಇಷ್ಟೆಲ್ಲಾ ಅಧ್ವಾನಗಳು ನಡೆಯುತಿದ್ದರೂ ಈ ನಾಡಿನ ಮುಖ್ಯಮಂತ್ರಿಯವರು ಕಸಾಪ ಅಧ್ಯಕ್ಷರ ಮಾತನ್ನ ಖಂಡಿಸಿ ಹೇಳಿಕೆ ಕೊಡಬಹುದಿತ್ತು. ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ನೀಡಿ, ಉಸ್ತುವಾರಿ ಸಚಿವರಿಗೆ, ಸಂಸ್ಕೃತಿ ಇಲಾಖೆಯವರಿಗೆ ಸೂಚನೆ ನೀಡಿ ಈ ಸಂಘರ್ಷಕ್ಕೆ ಅಂತ್ಯ ಹಾಡಬಹುದಿತ್ತು.ಈಗಲಾದರೂ ಮುಖ್ಯ ಮಂತ್ರಿಗಳು ಮಧ್ಯ ಪ್ರವೇಸ ಮಾಡಿ ಈ ವೈರುಧ್ಯಕ್ಕೆ ಅಂತ್ಯವಾಡಲಿ.
ಮೊದಲು ಸಮ್ಮೇಳನಕ್ಕೂ ಮುನ್ನ ಈ ಕೂಡಲೇ ಈ ನಾಡಿನ ಬಹುಸಂಖ್ಯಾತರ ಎದುರು ಕಸಾಪ ಅಧ್ಯಕ್ಷರು ಕ್ಷಮೆ ಕೇಳಲೇಬೇಕಿದೆ. ಸಮ್ಮೇಳನದಲ್ಲಿ ಭಾಗವಹಿಸುವ 95% ಜನರು ಮಾಂಸಾಹಾರಿಗಳೆ ಎಂಬುದು ಸುಳ್ಳಲ್ಲ. ಹಾಗಾದರೆ ಆ ಮಾಂಸಾಹಾರಿಗಳ ಸಾಹಿತ್ಯ,ಕವಿತೆ,ಹಾಡುಗಳನ್ನೂ ನಿಷೇಧ ಮಾಡುವಿರಾ?
ದಯವಿಟ್ಟು ನೀವು ಮಾಂಸಾಹಾರ ಕೊಡ್ತೀರೋ..ಇಲ್ಲವೋ ಒಂದು ಕಡೆ ಇರಲಿ. ನೀವು ಈ ನಾಡಿನ ಬಹುಸಂಖ್ಯಾತರನ್ನ,ಅವರ ಆಹಾರವನ್ನ ಟೀಕಿಸಿರುವುದಕ್ಕೆ ನಮ್ಮೆಲ್ಲರ ವಿರೋಧವಿದೆ. ಈಗ ಬಹಸಂಖ್ಯಾತರೆಲ್ಲಾ ಇದರ ವಿರುದ್ದ ಹೋರಾಟ ರೂಪಿಸುತಿದ್ದಾರೆ. ಮುಂದೆ ಅದು ಅತಿರೇಕಕ್ಕೆ ಹೋದರೆ ಅದಕ್ಕೆ ನೀವು ನಿಮ್ಮ ನಿರ್ಧಾರಗಳೆ ಕಾರಣ ಎಂಬುದು ಸುಳ್ಳಲ್ಲ. ನಿಮ್ಮ ಹಠಮಾರಿ ಧೋರಣೆ, ಏಕಪಕ್ಷೀಯ ನಿರ್ಧಾರಗಳು ನಿಮ್ಮ ಮನೆಯಲ್ಲಿರಬೇಕೇ ಹೊರತೂ ಸಾರ್ವಜನಿಕ ಸೇವೆಯಲ್ಲಿರುವಾಗಲಲ್ಲ.
ಈ ನೆಲದಲ್ಲಿ ಸುವರ್ಣ ಕನ್ನಡ ಭಾಷೆ ಉಳಿದಿರುವುದು, ಇದೇ ಬಹುಸಂಖ್ಯಾತ ಮಾಂಸಹಾರಿಗಳ ಬಳಕೆಯಿಂದ ಎನ್ನುವುದನ್ನ ಸುಳ್ಳೆನ್ನುವಿರಾ?
ಈ ಮಾಂಸಹಾರಿಗಳಲ್ಲಿ ಅದಷ್ಟು ಕವಿ,ಗಾಯಕ,ರಾಜಕಾರಣಿ,ಸಮಾಜ ಸೇವಕರು…ಸಾಹಿತಿಗಳು ಇರುವುದು ಸುಳ್ಳೆ? ಹಾಗಾದರೆ ಅವರೆಲ್ಲರು ದುಷ್ಟರೆನ್ನುವುದು ನಿಮ್ಮ ಮಾತಿರ್ಥವೇ?
ಸಮ್ಮೇಳನವನ್ನ ಯಾವುದೋ ಒಂದು ವರ್ಗಕ್ಕೆ ಸೀಮಿತ ಮಾಡಿ, ಅವರ ಆಚಾರಗಳನ್ನ ಬಹುಸಂಖ್ಯಾತರ ಮೇಲೆ ಹೇರುವ ಹಕ್ಕನ್ನ ನಿಮಗೆ ನೀಡಿದವರಾರು? ನಿಮಗೆ ಹೇಗೆ ನಮ್ಮ ಆಹಾರವನ್ನ ತಿರಸ್ಕರಿಸುವ ಧೊರಣೆಯಿದೆಯೋ ಹಾಗೆ ನಿಮ್ಮ ದುರ್ನಿರ್ಧಾರವನ್ನ ಪ್ರಶ್ನಿಸುವ,ತಿರಸ್ಕರಿಸುವ ಹಕ್ಕು ನಮಗೂ ಇದೆ. ಮೊದಲು ನಿಮ್ಮ ಧೊರಣೆಯನ್ನ ಬದಲಾಯಿಸಿಕೊಳ್ಳಿ.
ಇಲ್ಲವಾದರೆ ಸಾಹಿತ್ಯ ಸಮ್ಮೇಳನ ಸಾಹಿತ್ಯದ ಬದಲು ನಿಮ್ಮ ಹೇಳಿಕೆಯ ವಿರೋಧಾಭಾಸವನ್ನೇ ಮುನ್ನೆಲೆ ಮಾಡಿ ವಿರೋಧಿಸುವಂತೆ ಮಾಡಿ,ಸಮ್ಮೇಳನ ಕೆಡಿಸುವಂತಾಗುವುದಕ್ಕೆ ದಾರಿ ಮಾಡಿಕೊಡಬೇಡಿ
ಸಮ್ಮೇಳನಕ್ಕೆ ಬರುವ ಮಂದಿಗೆ ಈ ಜಿಲ್ಲೆಯ ವಿಶೇಷ ಆಹಾರ ಇತರೆ ಜಿಲ್ಲೆಯವರೂ ಸವಿಯುವಂತಾಗಲಿ. ಪುಷ್ಕಳ ಭೋಜನದ ಜೊತೆ ನಾಡಿನ ಸಾಹಿತ್ಯ,ಭಾಷೆ,ಹಾಡು,ಹರಟೆ ನೋಡಿ ಅರ್ಥಪೂರ್ಣ ಸಮ್ಮೇಳನವಾಗಲು ಸಹಕರಿಸುವರೆಂಬ ಆಶಯ ನನ್ನದು.




