ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ನಿರ್ದೇಶನ ನೀಡವಂತೆ ಮುಖ್ಯ ಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು
ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಭರವಸೆ ನೀಡಿದರು.
ಬೆಳಗಾವಿಯ ಸುವರ್ಣಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಸಂಘಟನೆಗಳ ಪ್ರತಿನಿಧಿಗಳ ಅಹವಾಲು ಅಲಿಸಿದ ಸಚಿವರು, ಸಮಸ್ಯೆಗಳನ್ನು ಕಾನೂನಿನ ಪರಿಮಿತಿ ಹಾಗೂ ಸಂಪನ್ಮೂಲಗಳ ಲಭ್ಯತೆ ಆಧಾರದ ಮೇಲೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರೈತರ ಪಂಪ್ ಸೆಟ್ ಗಳಿಗೆ 7 ಗಂಟೆ ಉಚಿತ ವಿದ್ಯುತ್ ನೀಡಲಾಗುತ್ತದೆ .ಉತ್ಪಾದನೆ, ಲಭ್ಯತೆ ಆಧಾರದ ಮೇಲೆ ಇದರ ಅವಧಿ ಹೆಚ್ಚಳದ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಎ.ಪಿ ಎಂ.ಸಿ ಕಾಯಿದೆ ತಿದ್ದುಪಡಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಗೆ ಬರಲಿದ್ದು ಈಗಾಗಲೇ ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಪರಿಹಾರ ಹೆಚ್ಚಳದ ಬಗ್ಗೆಯೂ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ರೈತರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಮಹಿಳಾ ಕೇಂದ್ರಿತವಾಗಿರದೇ ಗ್ರಾಮೀಣ ರೈತರು ಹಾಗೂ ಬಡಜನರ ಏಳಿಗೆಯ ಆಶಯದೊಂದಿಗೆ ರೂಪಿಸಲಾಗಿದೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.
ರೈತ ಮುಖಂಡರಾದ ಬೀರಪ್ಪ ದೇಶನೂರ, ಬಸವರಾಜ ರುದ್ರಪ್ಪ ಮೊಕಾಶಿ, ಸಿದ್ದಮಗೌಡ ಸಿ ಪಾಟೀಲ್, ಶಂಕ್ರಪ್ಪ ರುದ್ರಪ್ಪ ಅಂಬಲಿ, ಪ್ರೇಮ ಎಂ ಚೌಗಲ, ಬಸವನಗೌಡ ಪಾಟಿಲ, ಮಹಂತೇಶ ರುದ್ರಪ್ಪ ಗೌರಿ, ದಯಾನಂದ ಪಾಟೀಲ್ , ಧರ್ಮರಾಜ ಗೌಡರ, ಸೋಮಶೇಖರ್ ಮಹದೇವಪ್ಪ ಕೊತಂಬರಿ, ಮಲ್ಲಿಕಾರ್ಜುನ ಬ್ರವಾಲಿ, ಬಸನಗೌಡ ಎಂ ಚಿಕ್ಕನಗೌಡರ,ಬಸವರಾಜ ಉಪ್ಪಾರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.




