ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಯಾವ ಸಾಲ ಮನ್ನಾವನ್ನು ಮಾಡಲ್ಲ. ನಿನ್ನೆ ಹೇಳಿದ ಸುಳ್ಳನ್ನು ಇವತ್ತು, ಇವತ್ತು ಹೇಳಿದ ಸುಳ್ಳನ್ನು ನಾಳೆ ಮನ್ನಾ ಮಾಡ್ತಾರೆ.ಇವರು ಕೇವಲ ಸುಳ್ಳಿನ ಮನ್ನಾ ಮಾತ್ರ ಮಾಡ್ತಾರೆ ಎಂದು ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ವ್ಯಂಗ್ಯವಾಡಿದರು.
ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಹಲ್ಲೇಗೆರೆ ಗ್ರಾಮದ ದಂಡಿನಮ್ಮ ದೇವಸ್ಥಾನದ ಬಳಿ ಆಯೋಜಿಸಿದ್ದ ಕಾಂಗ್ರೆಸ್ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಈಗ ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಮತ್ತೆ ಸಾಲ ಮನ್ನಾ ಮಾಡುತ್ತೇವೆ ಅಂತ ಹೇಳಿದ್ದಾರೆ. ಅವರು ಯಾರ ಸಾಲ ಮನ್ನಾ ಮಾಡೋದಿಲ್ಲ. ಸುಳ್ಳಿನ ಮನ್ನಾ ಮಾಡ್ತಾ ಹೋಗ್ತಾರೆ.
ಜೆಡಿಎಸ್ ಪಕ್ಷ ಸುಳ್ಳಿನ ಅಭಿವೃದ್ಧಿಯ ಮೇಲೆ ನಿಂತಿದೆ. ಇವತ್ತಿನವರೆಗೂ ಅವರು ಮಂಡ್ಯ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ನಿಮ್ಮ ಸಾಲ ಇವತ್ತಿಗೂ ಕೂಡ ಮನ್ನಾ ಆಗಿಲ್ಲ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ ತಕ್ಷಣ ನನ್ನನ್ನು ಸೋಲಿಸಿ, ಜೆಡಿಎಸ್ ಪಕ್ಷದವರನ್ನು ಗೆಲ್ಲಿಸಿದ್ದೀರಿ. ಆದರೆ ಇವತ್ತಿಗೂ ಕೂಡ ಅವರು ಸಾಲ ಮನ್ನಾ ಮಾಡಿಲ್ಲ ಎಂದರು.
ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನಡೆಯದ ನಾಣ್ಯವಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಪಕ್ಷ ಕೊಡುತ್ತಿದ್ದ ಏಳು ಕೆ.ಜಿ.ಅಕ್ಕಿ ಯನ್ನು ಐದು ಕೆ ಜಿ ಇಳಿಸಿದ್ದಾರೆ.2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ದಂಡಿನಮ್ಮ ದೇವರ ಆಣೆಗೂ ಸತ್ಯವಾಗಿದ್ದು, ನಮ್ಮ ಪಕ್ಷ ಬಂದ ಮೇಲೆ 10 ಕೆಜಿ ಅಕ್ಕಿ ಕೊಡಲಿದೆ ಎಂದರು.

ಮಂಡ್ಯದ ಜನ ಸ್ವಾಭಿಮಾನಿಗಳು, ದುಡಿಯುತ್ತಿರುವ ಎತ್ತಿಗೆ ಮಾತ್ರ ಅವರು ಹುಲ್ಲು ಹಾಕುವುದು. ನಿನ್ನೆ ಮೊನ್ನೆ ಬಂದವರಿಗೆ ಆದ್ಯತೆ ನೀಡುವುದಿಲ್ಲ. ಕಾಂಗ್ರೆಸ್ ವರಿಷ್ಠರ ಜೊತೆ ಚೆನ್ನಾಗಿದ್ದೇನೆ, ಟಿಕೆಟ್ ತರುತ್ತೇನೆ ಎನ್ನುವುವ ವರಿಗೆ ಟಿಕೆಟ್ ಸಿಗುವುದಿಲ್ಲ. ನಾನು ಕಳೆದ ಹತ್ತಾರು ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ನನಗೆ ಈ ಭಾಗದಲ್ಲಿ 5000 ಮತಗಳ ಲೀಡ್ ಕೊಟ್ಟಿದ್ದಾರೆ. ಪಕ್ಷಕ್ಕೆ ದುಡಿದವರಿಗೆ ಕಾಂಗ್ರೆಸ್ ವರಿಷ್ಠರು ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಅನೇಕ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ಕಾಂಗ್ರೆಸ್ ಮುಖಂಡ ಸಿದ್ಧರೂಢ ಸತೀಶ್ ಗೌಡ ಮಾತನಾಡಿ,ನಾನು ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷವನ್ನು ಕಟ್ಟಿದ್ದೇನೆ.ಈ ಭಾಗದಲ್ಲಿ ಸಂಪೂರ್ಣ ಜೆಡಿಎಸ್ ಮಯವಾಗಿದ್ದ ಈ ಭಾಗದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದೇವೆ.ನಮಗೆ ಚಲುವರಾಯಸ್ವಾಮಿ ನರೇಂದ್ರ ಸ್ವಾಮಿಯವರೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ, ನೀವೆಲ್ಲಾ ಸೇರಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಇವರೇ ಅಭ್ಯರ್ಥಿ ಎಂದು ತೀರ್ಮಾನಿಸಿ ಹೇಳಿದರೆ ನಮಗೆ ಪಕ್ಷ ಸಂಘಟನೆ ಮಾಡಲು ಅನುಕೂಲವಾಗುತ್ತದೆ ಎಂದರು.
16 ಮಂದಿ ಆಕಾಂಕ್ಷಿತ ಅಭ್ಯರ್ಥಿಗಳಲ್ಲಿ ಯಾರು ಸೂಕ್ತ ಎನ್ನುವುದು ಶೀಘ್ರ ನಿರ್ಧಾರ ಮಾಡಬೇಕು. ನಾನು ಗಣಿಗ ರವಿಕುಮಾರ್ ಪಕ್ಷ ಸಂಘಟನೆ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ಡಾ.ಕೃಷ್ಣ ಮಾತನಾಡಿ,ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವಾರು ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ಎಲ್ಲಾ ಸಮುದಾಯದ ಜನರ ಉದ್ಧಾರ ಮಾಡಿದ್ದರು.2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಮನ್ಮಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್ ಮಾತನಾಡಿ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ನಾವೆಲ್ಲಾ ಒಂದು ಗೂಡಿದ್ದೇವೆ.ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುವರೋ ಆ ನಿರ್ಧಾರಕ್ಕೆ ಬದ್ಧವಾಗಿದ್ದೇವೆ.ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶವಿದ್ದು ಸರ್ಕಾರ ರಚಿಸಲಿದೆ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಂಜನಾ ಶ್ರೀಕಾಂತ್ ಮಾತನಾಡಿ,ಕಾಂಗ್ರೆಸ್ ಬಡಜನರ ಪಕ್ಷವಾಗಿದೆ. ಇಂದಿರಾಗಾಂಧಿಯವರು ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದರು.ಅದರಂತೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.16ರಂದು ನಡೆಯಲಿರುವ ನಾ-ನಾಯಕಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ
ಕಾರ್ಯಕ್ರಮದಲ್ಲಿ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಸದಸ್ಯೆಯರು, ಮಹಿಳಾ ನಾಯಕಿಯರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಚಲುವರಾಯಸ್ವಾಮಿ ನೆರವೇರಿಸಿ ಮಾತನಾಡಿದರು.ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮುಖಂಡರಾದ ಚಿಕ್ಕಬಳ್ಳಿ ಕೃಷ್ಣ, ರುದ್ರಪ್ಪ, ನಾಗೇಶ್ ಮತ್ತಿತರರಿದ್ದರು.




