Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದ ತಾಲ್ಲೂಕು ಕಚೇರಿ ನೌಕರ

ಮಂಡ್ಯ ಜಿಲ್ಲಾಧಿಕಾರಿಯವರ ಕೋರ್ಟ್ ಆದೇಶವನ್ನು ವಿಳಂಬ ಮಾಡುವ ಸಂಬಂಧ ಮೋಹನ್ ಕುಮಾರ್ ಎಂಬುವವರಿಗೆ 10 ಸಾವಿರ ರೂ ಲಂಚದ ಬೇಡಿಕೆ ಇಟ್ಟು, ಲಂಚ ಸ್ವೀಕಾರ ಮಾಡುತ್ತಿದ್ದ, ಮದ್ದೂರು ತಾಲೂಕು ಕಚೇರಿಯ ಕೊಪ್ಪ ಹೋಬಳಿಯ ಆರ್.ಟಿ.ಸಿ ತಿದ್ದುಪಡಿ ಶಾಖೆಯ ವಿಷಯ ನಿರ್ವಾಹಕ (ಪ್ರಥಮ ದರ್ಜೆ ಸಹಾಯಕ) ಡಿ.ಜೆ.ಮಂಜುನಾಥ್ ಸ್ವಾಮಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಿನ್ನೆಯಷ್ಟೆ ಮದ್ದೂರು ತಾಲೂಕು ಕಚೇರಿಗೆ ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ.ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರು ಕಚೇರಿಯ ವಿವಿಧ ಶಾಖೆಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ನೌಕರನೊಬ್ಬ ಸಿಕ್ಕಿ ಬಿದ್ದಿದ್ದಾರೆ.

ಕೊಪ್ಪ ಹೋಬಳಿಯ ಬಿದರಮೊಳೆ ಕೊಪ್ಪಲು ಗ್ರಾಮದ ಮೋಹನ್ ಕುಮಾರ್ ಅವರ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರ ಕೋರ್ಟ್ ಆದೇಶವನ್ನು ವಿಳಂಬ ಮಾಡುವುದಕ್ಕಾಗಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಸ್ವಾಮಿ, ಮೋಹನ್ ಕುಮಾರ್ ಎಂಬುವವರ ಬಳಿ  10 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮೋಹನ್ ಕುಮಾರ್ ಅವರು ಮಂಡ್ಯ ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿದ್ದರು.

ಬುಧವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ನೀಡಿದ ಸೂಚನೆಯಂತೆ ವಿಷಯ ನಿರ್ವಾಹಕ ಮಂಜುನಾಥ್ ಅವರಿಗೆ ಮೋಹನ್ ಕುಮಾರ್ ಮದ್ದೂರು ತಾಲೂಕು ಕಚೇರಿಯ ಅಂಗಡಿ ಮಳಿಗೆಗಳ ಬಳಿ 10 ಸಾವಿರ ರೂಪಾಯಿ ಲಂಚವನ್ನು ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ಧಿಡೀರ್ ದಾಳಿ ಮಾಡಿ ಮಂಜುನಾಥ್ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ತೆಗೆದುಕೊಂಡು, ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರ್ಯಾಚರಣೆ ವೇಳೆ ಲೋಕಾಯುಕ್ತ ಎಸ್ಪಿ ವಿ.ಜೆ.ಸಜಿತ್, ಡಿವೈಎಸ್ಪಿ ಟಿ.ಎನ್. ಸುನೀಲ್ ಕುಮಾರ್, ಇನ್ಸ್ಪೆಕ್ಟರ್ ಗಳಾದ ಪ್ರಕಾಶ್, ಮೋಹನ್ ರೆಡ್ಡಿ, ಸಿಬ್ಬಂದಿಗಳಾದ ಶಂಕರ್, ಮಹದೇವಯ್ಯ, ಶರತ್, ನಂದೀಶ್, ಯೋಗೇಶ್, ಮಹದೇವಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!