Friday, September 20, 2024

ಪ್ರಾಯೋಗಿಕ ಆವೃತ್ತಿ

”ಭಾರತೀಯರ ಡಿಎನ್‌ಎಯಲ್ಲೇ ಪ್ರೀತಿ ಇದೆ, ಕಾಂಗ್ರೆಸ್ ಕೂಡ ಶಾಂತಿಯ ಭಾರತವನ್ನು ಬಯಸುತ್ತದೆ”: ರಾಹುಲ್ ಗಾಂಧಿ

ಭಾರತೀಯರ ಡಿಎನ್‌ಎಯಲ್ಲೇ ಪ್ರೀತಿ ಇರುವಾಗ ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷ ಹರಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಎರಡು ದಿನಗಳ ವಿರಾಮದ ಬಳಿಕ ಛತ್ತೀಸ್‌ಗಢದಲ್ಲಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯನ್ನು ಪುನರಾರಂಭಿಸಿ ಭಾನುವಾರ ಅವರು ಮಾತನಾಡಿದರು.

ಛತ್ತೀಸ್‌ಗಢದ ರಾಯ್‌ಗಢ್‌ನ ಕೆವದಬಾದಿ ಚೌಕ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನಮ್ಮ ಪಕ್ಷವು ಭವಿಷ್ಯದ ಪೀಳಿಗೆಗೆ ದ್ವೇಷ ಮತ್ತು ಹಿಂಸೆ ಅಸ್ತಿತ್ವದಲ್ಲಿಲ್ಲದ ಹಿಂದೂಸ್ಥಾನವನ್ನು ನೀಡಲು ಬಯಸುತ್ತದೆ ಎಂದು ಹೇಳಿದರು.

”ಸದ್ಯ ದೇಶದ ಮೂಲೆ ಮೂಲೆಗಳಲ್ಲಿ ದ್ವೇಷ, ಹಿಂಸಾಚಾರ ಹರಡುತ್ತಿದೆ. ಕೆಲವರು ಅವರ ಭಾಷೆಯ ಆಧಾರದ ಮೇಲೆ ಇತರರನ್ನು ಇಷ್ಟಪಡುವುದಿಲ್ಲ. ಕೆಲವರು ರಾಜ್ಯಗಳ ಆಧಾರದ ಮೇಲೆ ಇತರರನ್ನು ಇಷ್ಟಪಡುವುದಿಲ್ಲ. ಇಂತಹ ಚಿಂತನೆಗಳು ದೇಶವನ್ನು ದುರ್ಬಲಗೊಳಿಸುತ್ತವೆ” ಎಂದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ದ್ವೇಷವನ್ನು ಹರಡುತ್ತಿದೆ. ಆದರೆ, ಈ ದೇಶದ ಡಿಎನ್‌ಎಯಲ್ಲೇ ಪ್ರೀತಿ ಇದೆ. ದೇಶದಲ್ಲಿ, ವಿಭಿನ್ನ ನಂಬಿಕೆ ಮತ್ತು ಆಲೋಚನೆಗಳನ್ನು ಹೊಂದಿರುವ ಜನರು ಪ್ರೀತಿಯಿಂದ ಶಾಂತಿಯುತವಾಗಿ ಒಟ್ಟಿಗೆ ಬದುಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಳೆದ ವರ್ಷದ ಮೇ ತಿಂಗಳಿನಿಂದ ನೂರಾರು ಜನರು ಸಾಯುತ್ತಿದ್ದರೂ, ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದರೂ, ಇದುವರೆಗೆ ಕಲಹ ಪೀಡಿತ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ರಾಹುಲ್ ವಾಗ್ದಾಳಿ ನಡೆಸಿದರು.

ಈಶಾನ್ಯ ರಾಜ್ಯಗಳಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ಅದನ್ನು ನಿಯಂತ್ರಿಸಲು ಆಗುತ್ತಿಲ್ಲ. “ನಾನು ಅಲ್ಲಿಗೆ ಭೇಟಿ ನೀಡಿದ್ದಾಗ ಮೈತೇಯಿ ಸಮುದಾಯದವರು ಕುಕಿ ಭದ್ರತಾ ಸಿಬ್ಬಂದಿಯನ್ನು ಪಡೆಯದಂತೆ ನನ್ನನ್ನು ಕೇಳಿದ್ದರು. ಅದೇ ರೀತಿ ಕುಕಿಗಳು ಮೈತೇಯಿಗಳ ಕುರಿತು ಮಾತನಾಡಿದ್ದರು ಎಂದರು.

ತನ್ನ ಯಾತ್ರಾ ವಾಹನದ ಮೇಲೆ ಹತ್ತಿದೆ ಮಕ್ಕಳಿಗೆ ಸಿಹಿ ಹಂಚಿದ ರಾಹುಲ್ ಗಾಂಧಿ, ಒಬ್ಬ ಹುಡುಗಿಯತ್ರ ನ್ಯಾಯ ಬೇಕಾ, ಅನ್ಯಾಯ ಬೇಕಾ? ಎಂದು ಕೇಳಿದರು. ಅದಕ್ಕೆ ನ್ಯಾಯ ಎಂದು ಉತ್ತರ ಬಾಲಕಿ, ತಾನು ಭಾರತವನ್ನು ತುಂಬಾ ಪ್ರೀತಿಸುವ ಕಾರಣ, ತನಗೆ “ಮೊಹಬ್ಬತ್ ಕಾ ಹಿಂದೂಸ್ತಾನ್” ಬೇಕು ಎಂದು ರಾಹುಲ್ ಗಾಂಧಿಗೆ ಹೇಳಿದಳು.

ಸಶಸ್ತ್ರ ಪಡೆಗಳಲ್ಲಿ ಅಲ್ಪಾವಧಿಗೆ ಸೈನಿಕರನ್ನು ನೇಮಿಸಿಕೊಳ್ಳುವ ಅಗ್ನಿವೀರ್ ಪ್ರಕ್ರಿಯೆಯನ್ನು ಟೀಕಿಸಿದ ಗಾಂಧಿ, 1.50 ಲಕ್ಷ ಯುವಕರಿಗೆ ನ್ಯಾಯ ಸಿಗುವುದನ್ನು ತಮ್ಮ ಪಕ್ಷ ಖಚಿತಪಡಿಸುತ್ತದೆ ಎಂದು ಎಂದರು.

“ಎಲ್ಲಾ ರಕ್ಷಣಾ ಗುತ್ತಿಗೆಗಳನ್ನು (ಕೈಗಾರಿಕೋದ್ಯಮಿ ಗೌತಮ್) ಅದಾನಿಗೆ ನೀಡಲಾಗುತ್ತಿದೆ. ನಾನು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ, ನನ್ನ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು ಮತ್ತು ನನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕೇಳಲಾಯಿತು. ಜನರ ಹೃದಯದಲ್ಲಿ ವಾಸಿಸುತ್ತಿರುವ ನನಗೆ ಮನೆಯ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ತಮ್ಮ ಭಾಷಣದ ಸಮಯದಲ್ಲಿ ಜನ ಸಮೂಹಕ್ಕೆ ತಮ್ಮ ಮೊಬೈಲ್ ಫೋನ್ ತೋರಿಸಿದ ರಾಹುಲ್ ಗಾಂಧಿ, “ಇದನ್ನು ಚೀನಾದಲ್ಲಿ ತಯಾರಿಸಲಾಗಿದೆ. ಅಂಬಾನಿಯಂತಹ ಜನರು ಭಾರತದಲ್ಲಿ ಮಾರಾಟ ಮಾಡುತ್ತಿದ್ದಾರೆ. ಚೀನೀಯರು ಮತ್ತು ಅಂಬಾನಿ ಇಂತಹ ಫೋನ್‌ಗಳಿಂದ ಹಣ ಗಳಿಸುತ್ತಿದ್ದಾರೆ. ಈ ಫೋನ್ ಛತ್ತೀಸ್‌ಗಢದಲ್ಲಿ ಉತ್ಪಾದನೆಯಾಗಬೇಕೆಂದು ನಾನು ಬಯಸುತ್ತೇನೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!