Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದು ನಿಶ್ಚಿತ : ಎಂ.ಆನಂದಕುಮಾರ್

2023ರ ಚುನಾವಣೆಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ತಮಗೆ 100ಕ್ಕೆ 100ರಷ್ಟು ಟಿಕೆಟ್ ದೊರಕುವ ಭರವಸೆ ಇದ್ದು, ಈ ಬಾರಿ ಮೇಲುಕೋಟೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ಆನಂದಕುಮಾರ್ ಹೇಳಿದರು.

ಲಾಕ್ ಡೌನ್ ವೇಳೆ ಕ್ಷೇತ್ರದ ಜನರಿಗೆ ತಮ್ಮ ಕೈಲಾದ ಅಳಿಲು ಸೇವೆ ಮಾಡುವ ಜತೆಗೆ ಕಳೆದ 1993ರಿಂದಲೂ ಯುವ ಕಾಂಗ್ರೆಸ್, ಕೆಪಿಸಿಸಿಯಲ್ಲಿ ಕೆಲಸ ಮಾಡಿದ್ದೇನೆ. ಹಿಂದಿನ ಪಾಂಡವಪುರ ಕ್ಷೇತ್ರಕ್ಕೆ ಶೀಳನೆರೆ ಹೋಬಳಿ ಸೇರ್ಪಡೆಯಾಗಿದ್ದಾಗಿನಿಂದಲೂ ಪಕ್ಷಕ್ಕೆ ಬಹಳ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ಜತೆಗೆ 2013, 2018 ಹಾಗೂ 2023ರಲ್ಲಿ ಅರ್ಜಿ ಸಲ್ಲಿಸಿದ್ದು, ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷದಲ್ಲಿ 3 ಡಜನ್ ನಾಯಕರಿಂದ ನನ್ನ ಹೆಸರೇಳಿಸುವಷ್ಟು ನಿಷ್ಠೆ ಹೊಂದಿದ್ದು, ಯಾವ ಪಕ್ಷಕ್ಕೂ ಹೋಗಿಲ್ಲ. 2018ರ ಚುನಾವಣೆಯಲ್ಲಿ ಅರ್ಜಿ ಸಲ್ಲಿಸಿದಾಗ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ರೈತನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದ ಹಿನ್ನೆಲೆ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಪಕ್ಷ ಬೆಂಬಲ ಸೂಚಿಸಿತು. ಆಗ ಪಕ್ಷದ ಸೂಚನೆಯಂತೆ ರೈತಸಂಘದ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ನಡೆಸಿದೆ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡ ವೇಳೆಯೂ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪಕ್ಷ ಹೇಳಿದಂತೆ ಕೇಳಿದ್ದೇನೆಯೇ ಹೊರತು, ಎಂದಿಗೂ ಪಕ್ಷ ದ್ರೋಹ ಮಾಡಿಲ್ಲ ಎಂದರು.

ಜ.16ರ ನಾ ನಾಯಕಿ ಮಹಿಳಾ ಸಮಾವೇಶವಿದ್ದು, ಮೂವರು ಟಿಕೆಟ್ ಆಕಾಂಕ್ಷಿಗಳು ಸಮಾವೇಶಕ್ಕೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದೊಯ್ಯವ ಪ್ರಯತ್ನದಲ್ಲಿದ್ದು, ಫೆಬ್ರವರಿ ಮೊದಲ ವಾರದ ಬಳಿಕ ಎಲ್ಲರೂ ಒಗ್ಗೂಡಿ ಚುನಾವಣೆ ಕೆಲಸ ಮಾಡಲಿದ್ದೇವೆ. ಮೇಲುಕೋಟೆಯಲ್ಲಿ ಕಾಂಗ್ರೆಸ್ ಇಲ್ಲ ಎನ್ನುವುದಾದರೆ ನಾಲ್ವರು ಅರ್ಜಿ ಹಾಕಿರುವುದೇ ಪಕ್ಷ ಬಲವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.

ಶಾಸಕ ಪುಟ್ಟರಾಜುಗೆ ನೈತಿಕತೆ ಇಲ್ಲ

ಕಾಂಗ್ರೆಸ್ ಪಕ್ಷ ಅಡಮಾನವಿಡುತ್ತಿದ್ದಾರೆ ಎಂಬ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುಟ್ಟರಾಜುಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ. ಎಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆಗೇರಲು ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಇದೇ ಕಾಂಗ್ರೆಸ್ ಬೆಂಬಲ ನೀಡಿರುವುದನ್ನು ಹಾಗೂ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕಾಂಗ್ರೆಸ್‌ನ ತೇಜಸ್ವಿನಿ ಸೋಲಿಸಿದ್ದನ್ನು ಪುಟ್ಟರಾಜು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷದಷ್ಟು ಅಡಮಾನವಿಟ್ಟಿಲ್ಲ

ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್ ಮಾತನಾಡಿ, ಜೆಡಿಎಸ್ ಪಕ್ಷದಷ್ಟು ಕಾಂಗ್ರೆಸ್ ಪಕ್ಷವನ್ನು ಯಾರಿಗೂ ಅಡಮಾನವಿಟ್ಟಿಲ್ಲ. ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಯ ನಾಮ ನಿರ್ದೇಶಕ ಉಮೇಶ್ ಯಾರು ಎಂಬುದೇ ಗೊತ್ತಿಲ್ಲ. ಅವರಿಗೆ ಅಡಮಾನವಿಟ್ಟ ಜೆಡಿಎಸ್, ಆರ್ ಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಡಮಾನವಿಟ್ಟಿತು ಎಂದು ಛೇಡಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಚಿಕ್ಕಬ್ಯಾಡರಹಳ್ಳಿ ಧರ್ಮಣ್ಣ, ಕೋ.ಪು.ಗುಣಶೇಖರ್, ಅಂಕಯ್ಯ, ಹಾರೋಹಳ್ಳಿ ಚಿಕ್ಕಣ್ಣ, ಬಸ್ತಿಹಳ್ಳಿ ಕುಮಾರ್, ಅಂತನಹಳ್ಳಿ ಬಸವರಾಜು, ಚಿಕ್ಕಾಯಿರಹಳ್ಳಿ ರಾಜೇಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!