ಪ್ರತಿ ಗ್ರಾಮಗಳ ಮತದಾರರ ಬೂತ್ ಮಟ್ಟದಲ್ಲಿ ಬಿಎಸ್ಪಿ ಸಂಘಟಿಸಲಾಗುವುದು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಎಸ್.ಎಸ್.ಭವನದಲ್ಲಿ ಜಿಲ್ಲಾ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹುಜನರು ದೇಶವನ್ನಾಳುವ ಸಾಮರ್ಥ್ಯ ಉಳ್ಳವರಾಗಿದ್ದಾರೆ ಎಂಬುವುದು ಉತ್ತರಪ್ರದೇಶದಲ್ಲಿ ಸಾಬೀತಾಗಿದ್ದು, ಪಕ್ಷ ಸಂಸ್ಥಾಪಕ ಮಾನ್ಯವರ್ ಕಾನ್ಶೀರಾಂ ಮತ್ತು ರಾಜಕೀಯ ಪ್ರೇರಣಾಶಕ್ತಿ ಮಾಯಾವತಿ ಅವರು ಸಾಧಿಸಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೊಳ್ಳುತ್ತಿದೆ ಎಂದು ನುಡಿದರು.
ರಾಜಕೀಯ ಶಕ್ತಿಯಿಂದ ಮಾತ್ರ ಶೋಷಿತ ಸಮಾಜಗಳು ಉದ್ದಾರವಾಗಲು ಸಾಧ್ಯ ಎಂಬುದನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದಾರೆ, ಇಂದಿಗೂ ಸಾಧ್ಯವಾಗಿಲ್ಲ, ಇನ್ನಾದರೂ ಜನ ಬಿಎಸ್ಪಿ ಸಂಘಟನೆಯಲ್ಲಿ ಕೈಜೋಡಿಬೇಕು ಎಂದು ಎಚ್ಚರಿಸಿದರು.
ಡಿ.6ರಂದು ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣದಿನವಿದ್ದು, ಅಂದು ಬಹುಜನ ಸಮಾಜ ಪಕ್ಷದ ಭಾಗವಾಗಿರುವ ಬಾನ್ಶೇಫ್ ಸಂಘಟನೆಗೆ 50 ವರ್ಷಗಳು ತುಂಬಲಿದೆ, ದೊಡ್ಡ ಸಮಾರಂಭ ಮಾಡಿ ಸ್ಮರಿಸಲಾಗುವುದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಪ್ರತಿ ಗ್ರಾಮಗಳ ಮತದಾರರ ಬೂತ್ ಮಟ್ಟದಲ್ಲಿ ಪ್ರಚಾರ, ಸಂಘಟಿಸುವ ಕೆಲಸಕ್ಕೆ ಕೈ ಹಾಕಲಾಗುವುದು ಎಂದರು.
ಇದೇ ಸಂದರ್ಭದಲ್ಲಿ “ನನ್ನ ಜನ” ಚಲನಚಿತ್ರ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಉಸ್ತುವಾರಿಗ ಹ.ರಾ.ಮಹೇಶ್, ಗಂಗಾಧರ್ ಬಹುಜನ್, ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ, ರಾಜ್ಯ ಪ್ರ.ಕಾರ್ಯದರ್ಶಿ ಕೆ.ಸಿ.ನಾಗರಾಜು, ಜಿಲ್ಲಾಧ್ಯಕ್ಷ ಶಿವಶಂಕರ್, ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ರವಿಗೌಡ, ಚಲುವರಾಜು, ವೀರಭದ್ರ, ಕುಮಾರ್, ಕುಮಾರ್, ವಜ್ರಮುನಿ ಮತ್ತಿತರರಿದ್ದರು.




