ಅಂತೂ ಇಂತೂ ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರವನ್ನು ಆಯ್ದುಕೊಂಡು ಅಲ್ಲಿಂದಲೆ ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ವತಃ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಮುಖಂಡರೇ ಆಹ್ವಾನ ನೀಡಿರುವುದು ಹಲವು ಊಹಪೋಹಗಳಿಗೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕನ ಕೊರತೆಯೇ ?
ಮದ್ದೂರು ವಿಧಾನಸಭಾ ಕ್ಷೇತ್ರ ಹಿಂದಿನಿಂದಲೂ ರಾಜಕೀಯವಾಗಿ ಇತಿಹಾಸವುಳ್ಳ ಕ್ಷೇತ್ರವಾಗಿದೆ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ ಎಸ್.ಎಂ.ಕೃಷ್ಣ ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಹಾಗಾಗಿ ವೈಯಕ್ತಿಕವಾಗಿ ಎಸ್.ಎಂ.ಕೃಷ್ಣ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಡಿ.ಕೆ.ಶಿವಕುಮಾರ್ ಇಲ್ಲಿಂದಲೇ ಸ್ಪರ್ಧಿಸಿ ಮುಖ್ಯಮಂತ್ರಿ ಆಗಬಹುದು, ಮದ್ದೂರಿನಲ್ಲಿ ಅವರ ಸ್ಪರ್ಧೆಯಿಂದ ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಇನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಹಿಡಿತ ಸಾಧಿಸಬಹುದು ಎಂದು ಕಾಂಗ್ರೆಸ್ ಮುಖಂಡ ಗುರುಚರಣ್ ಹೇಳಿದ್ಧಾರೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಸ್ಪರ್ಧಿಸದಿದ್ದರೆ ತಾವೇ ಸ್ಪರ್ಧಿಸುವುದಾಗಿಯೂ ಹೇಳಿಕೊಂಡಿದ್ದಾರೆ.
ಮದ್ದೂರು ವಿಧಾನಸಭಾ ಕಣದಲ್ಲಿ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಕದಲೂರು ಉದಯ್ ಮತದಾರರನ್ನು ತಲುಪುವಲ್ಲಿ ಮುಂದಿದ್ದಾರೆ ಎಂಬುದು ಈಗಾಗಲೇ ಪ್ರಚಲಿತದಲ್ಲಿರುವ ವಿಷಯವಾಗಿದೆ. ಕದಲೂರು ಉದಯ್ ಗೆ ಯಾವುದೇ ರಾಜಕೀಯ ಪಕ್ಷದ ಟಿಕೆಟ್ ಸಿಕ್ಕರೂ ಸ್ಪರ್ಧಿಸಲು ಸಿದ್ದವಿದ್ದಾರೆ, ಒಂದು ವೇಳೆ ಪಕ್ಷದ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರವಾಗಿಯಾದರೂ ಗೆದ್ದೇ ಗೆಲ್ಲಬೇಕೆಂಬ ಉದ್ಧೇಶದಿಂದ ಜನರ ಮನ ಗೆಲ್ಲುವ ತಂತ್ರಗಳನ್ನು ಮಾಡಿಕೊಂಡಿದ್ದಾರೆ.

ಆದರೆ ಈ ನಡುವೆ ಕಾಂಗ್ರೆಸ್ ಟಿಕೆಟ್ ಗಾಗಿ ಎಸ್.ಎಂ.ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ಅವರ ಪುತ್ರ ಗುರುಚರಣ್ ಕಸರತ್ತು ನಡೆಸಿದ್ದು, ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಸಿಕ್ಕರೂ ಕದಲೂರು ಉದಯ್ ಎದುರು ಗೆಲ್ಲವುದಕ್ಕೆ ಸಾಧ್ಯವೇ ? ಎಂಬ ಮಾತು, ಈಗಾಗಲೇ ಕ್ಷೇತ್ರದಾದ್ಯಂತ ಜಾಲ್ತಿಯಲ್ಲಿದೆ. ಈ ಕಾರಣದಿಂದಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಗುರುಚರಣ್ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡಿ, ಕ್ಷೇತ್ರವನ್ನು ಕಾಂಗ್ರೆಸ್ ಗೆ ತೆಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಈ ತಂತ್ರ ಅನುಸರಿಸುತ್ತಿದ್ಧಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಕದಲೂರು ಉದಯ್ ‘ಕೈ’ ಟಿಕೆಟ್ ನೀಡಲು ಹೆಚ್ಚಿದ ಒತ್ತಡ
ಈಗಾಗಲೇ ಮದ್ದೂರು ಕ್ಷೇತ್ರದಲ್ಲಿ ತನ್ನದೇ ಬೆಂಬಲಿಗರ ಪಡೆಯನ್ನು ಸೃಷ್ಠಿಸಿಕೊಂಡು ಮನೆ ಮಾತಾಗಿರುವ ಕದಲೂರು ಉದಯ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರನ್ನು ಇತ್ತೀಚಿಗೆ ಮದ್ದೂರು ಕ್ಷೇತ್ರದ ಕಾಂಗ್ರೆಸ್ ನ ದಲಿತ ಮುಖಂಡರು ಭೇಟಿಯಾಗಿ ಉದಯ್ ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾಗಿ ಸುದ್ದಿ ಕೇಳಿ ಬಂದಿದೆ. ಈ ಕಾರಣದಿಂದಾಗಿ ಪಕ್ಷದ ವರಿಷ್ಠರು ಒಂದು ವೇಳೆ ಕದಲೂರು ಉದಯ್ ಕಡೆಗೆ ಮನಸ್ಸು ಮಾಡಿದರೆ, ನಮಗೆ ಟಿಕೆಟ್ ಕೈ ತಪ್ಪಬಹುದು ಎಂಬ ಉದ್ದೇಶದಿಂದಲೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಗುರುಚರಣ್ ಹಾಗೂ ಕದಲೂರು ರಾಮಕೃಷ್ಣ ಅವರು ಡಿ.ಕೆ.ಶಿವಕುಮಾರ್ ಗೆ ಆಹ್ವಾನ ನೀಡಿ ಕದಲೂರು ಉದಯ್ ಅವರನ್ನು ಕಟ್ಟಿ ಹಾಕುವ ತಂತ್ರ ನಡೆಸುತ್ತಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.
ಮದ್ದೂರು ಕ್ಷೇತ್ರಕ್ಕೆ ವಲಸಿಗ ನಾಯಕರು ಬಂದರೆ ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದಂತಹ ಸೋಲನ್ನೆ ಕಾಣಬಹುದು. ಆದ್ದರಿಂದ ಜಿಲ್ಲೆಯಲ್ಲಿಯೇ ಸಮರ್ಥರಿರುವ ನಾಯಕರಿಗೆ ಟಿಕೆಟ್ ನೀಡಬೇಕೆಂದು ಮಾತು ಕೇಳಿ ಬರುತ್ತಿದೆ.
ಒಂದೆ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆವ ತಂತ್ರ
ಈಗಾಗಲೆ ಕಳದ 20 ವರ್ಷಗಳಿಂದ ಮದ್ದೂರು ಕ್ಷೇತ್ರವು ಜೆಡಿಎಸ್ ಭದ್ರಕೋಟೆ ಎಂದು ಗುರುತಿಸಿಕೊಂಡಿದೆ. ಕಳೆದ 4 ಚುನಾವಣೆಗಳಿಂದಲೂ ಡಿ.ಸಿ.ತಮ್ಮಣ್ಣ ಅವರೇ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಯಾವುದೇ ಪಕ್ಷದಲ್ಲಿ ಇನ್ನೂ ಗುರುತಿಸಿ ಕೊಳ್ಳದ ಕದಲೂರು ಉದಯ್ ಅವರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು, ಇತರೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗಡಿಸಿವೆ. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕದಲೂರು ಉದಯ್ ಬಿಜೆಪಿ ನಾಯಕರೊಂದಿಗೆ ಕೈ ಜೋಡಿಸಿದ್ದರು ಎಂಬ ಮಾತು ಕೇಳಿ ಬರುತ್ತಿದೆ, ಆದರೆ ಬಿಜೆಪಿ ಸರ್ಕಾರ ರಚನೆಯಾದ ನಂತರ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಅವರು ಜೆಡಿಎಸ್ ಹಾಗೂ ಬಿಜೆಪಿಗೆ ಹೋಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ.
ಆ ಕಾರಣಕ್ಕಾಗಿ ಉದಯ್ ಬೆಂಬಲಿಗರು ಕಾಂಗ್ರೆಸ್ ಟಿಕೆಟ್ ಗಾಗಿ ಹಿರಿಯ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಆತಂಕಗೊಂಡಿರುವ ಗುರುಚರಣ್, ಸ್ವತಃ ಡಿ.ಕೆ.ಶಿವಕುಮಾರ್ ಅವರನ್ನೇ ಕ್ಷೇತ್ರಕ್ಕೆ ಆಹ್ವಾನಿಸಿದರೆ, ಒಂದು ಕಡೆ ಕದಲೂರು ಉದಯ್ ಗೆ ಟಿಕೆಟ್ ತಪ್ಪಿಸಬಹುದು ಮತ್ತೊಂದು ಕಡೆ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಯಲ್ಲೇ ಉಳಿಸಿಕೊಳ್ಳಬಹುದು ಎಂಬುದು ಗುರುಚರಣ್ ಅವರ ಲೆಕ್ಕಾಚಾರವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸ್ಥಳೀಯ ಕೆಲವು ಮುಖಂಡರು ಮದ್ದೂರಿಗೆ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನ ಮಾಡುತ್ತಿರುವುದು ಕದಲೂರು ಉದಯ್ ಅವರಿಗೆ ಸಿಕಬೇಕಾದ ಟಿಕೆಟ್ ತಪ್ಪಿಸುವ ತಂತ್ರವಾಗಿದೆ ಎಂದು ಹೇಳುತ್ತಿದ್ದು, ಇನ್ನೂ ಕೆಲವರು ಮದ್ದೂರಿನ ಕಾಂಗ್ರೆಸ್ ಟಿಕೆಟ್ ಕದಲೂರು ಉದಯ್ ಗೆ ಹತ್ತಿರವಾಗುತ್ತಿದೆಯೇ ? ಎಂಬ ಮಾತು ಕೇಳಿ ಬರುತ್ತಿದೆ.
ಕದಲೂರ್ಉದಯ್ ಗೆ ಪಕ್ಷದಿಂದ ಟಿಕೆಟ್ ಸಿಕ್ಕರೆ ಗೆಲುವು ಸುಗಮವಾಗುತ್ತದೆ. ಇಲ್ಲದಿದ್ದರೆ ಪ್ರಬಲ ಹೋರಾಟ ಕೊಡಬೇಕಾಗುತ್ತದೆ. ಅಲ್ಲದೇ ಉದಯ್ ಸ್ಪರ್ಧೆಯು ಪರ್ಯಾಯ ಪ್ರಬಲ ಪೈಪೋಟಿ ತಂದೊಡ್ಡುತ್ತದೆ ಎಂದು ಕ್ಷೇತ್ರದ ಜನತೆಯ ಅಭಿಪ್ರಾಯವಾಗಿದೆ.
ಕಾಂಗ್ರೆಸ್ ಟಿಕೆಟ್ ನೀಡಿದರೆ ದಳಪತಿಗಳ ಕೆಂಗಣ್ಣಿಗೆ ಗುರಿಯಾಗಬಹುದು
ಒಂದು ವೇಳೆ ಕದಲೂರು ಉದಯ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ಬೀಳಿಸಿದ ಆರೋಪ ಹೊತ್ತಿರುವ ಉದಯ್ ಗೆ ಕಾಂಗ್ರೆಸ್ ಮಣೆ ಹಾಕಿದರೆ, ಸರ್ಕಾರ ಉರುಳಿಸಿ ವ್ಯಕ್ತಿಗೆ ಟಿಕೆಟ್ ನೀಡಿದ್ದಕ್ಕಾಗಿ ಕಾಂಗ್ರೆಸ್ ನ ನಡೆಯನ್ನು ಜೆಡಿಎಸ್ ಜನರ ಬಳಿ ಕೊಂಡೊಯ್ದು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸಬಹುದು.




