ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಗಣಪತಿ ವಿಸರ್ಜನೆ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ಮತ್ತು ಇದರಿಂದ ಉಂಟಾದ ಗಲಭೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಸಂಘಟನೆಗಳು ಕೂಡಲೇ ಗಲಭೆಕೋರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಸೆ.7ರಂದು ರಾತ್ರಿ ಮದ್ದೂರು ತಾಲ್ಲೂಕಿನ ಗಣಪತಿ ವಿಸರ್ಜನೆ ವೇಳೆ ಮಸೀದಿ ಮುಂದೆ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ ಗಲಭೆ ಸೃಷ್ಠಿ ಮಾಡಿರುವುದು ಸರಿಯಾದ ನಡೆ ಅಲ್ಲ. ಯಾವುದೆ ಹಬ್ಬವಾದರೂ ಮನಸ್ಸುಗಳನ್ನು ಬೆಸೆಯುವ ಸಂಭ್ರಮದ ಪ್ರತೀಕವಾಗಬೇಕೆ ಹೊರತು ಗಲಭೆ ಸೃಷ್ಟಿ ಮಾಡುವ ಸಾಧನವಾಗಬಾರದು, ಕಲ್ಲುತೂರಾಟ ಮಾಡಿ ಗಲಭೆ ಸೃಷ್ಠಿಯಾಗಲೂ ಕಾರಣವಾದವರು ಮುಸ್ಲಿಂ ಗಳಾಗಲಿ ಅಥವಾ ಹಿಂದೂಗಳಾಗಲಿ ಅಂತಹ ಗಲಭೆಕೋರ ಕಿಡಿಗೇಡಿಗಳ ಮೇಲೆ ನಿರ್ಧಾಕ್ಷಿಣ್ಯ ಕಠಿಣ ಕ್ರಮ ಆಗಲೇಬೇಕು ಎಂದು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಹಾಗೂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಆಗ್ರಹಿಸಿದ್ದಾರೆ.
ಈ ಅಹಿತಕರ ಘಟನೆಯನ್ನು ಮುಂದಿಟ್ಟು ಕೊಂಡು ಪ್ರಚೋದನಕಾರಿ ಭಾಷಣ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದು ಕೋಮುಗಲಭೆಯನ್ನು ಉಂಟು ಮಾಡಲು ಬಿಜೆಪಿ ಆಗಲಿ ಜೆಡಿಎಸ್ ಆಗಲಿ ಅಥವಾ ಕಾಂಗ್ರೆಸ್ ಆಗಲಿ ಮುಂದಾಗಬಾರದು. ಈಗಾಗಲೇ ನಡೆದಿರುವ ಘಟನೆಯಿಂದಾಗಿ ಶಾಂತಿ ಸುವ್ಯವಸ್ಥೆ ಹಾಳಾಗಿದ್ದು ಗಲಭೆ ತಪ್ಪಿಸಲು ಲಾಠಿ ಚಾರ್ಜ್ ಮಾಡಿರುವ ಪರಿಣಾಮ ಹಲವು ಮಹಿಳೆಯರಿಗೆ ಮತ್ತೆ ನಾಗರೀಕರಿಗೂ ಪೆಟ್ಟಾಗಿರುವುದು ವಿಷಾದನೀಯ ಎಂದಿದ್ದಾರೆ.
ಈ ಘಟನೆಯನ್ನು ಮುಂದಿಟ್ಟುಕೂಂಡು ರಾಜಕೀಯ ಬೇಳೆ ಬೇಯಿಸಿಕೂಳ್ಳುವ ಸಲುವಾಗಿ ಧರ್ಮದ ಹೆಸರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಪರಿಸ್ಥಿತಿಯನ್ನು ಮತ್ತಷ್ಟು ಹಾಳುಮಾಡಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ಉಂಟು ಮಾಡಲು ಯಾರಿಗೂ ಮಂಡ್ಯದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸುತ್ತೇವೆ. ಹಾಗೆಯೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಜೂತೆಯಾಗಿ ಎರಡು ಧರ್ಮದವರನ್ನು ಕರೆಸಿ ಶಾಂತಿ ಮಾತುಕತೆಗೆ ತುರ್ತಾಗಿ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಧರ್ಮ ಮತ್ತೆ ಜಾತಿಯ ಹೆಸರಿನಲ್ಲಿ ಅತಿರೇಕದ ವರ್ತನೆಗಳಿಗೆ ದಾರಿ ಮಾಡಿಕೊಡಬಾರದು ಮಂಡ್ಯವನ್ನು ಧರ್ಮದ ಹೆಸರಿನಲ್ಲಿ ಎತ್ತಿ ಕಟ್ಟಿ ಬಡವರ ಮನೆಯ ಮಕ್ಕಳನ್ನು ದಿಕ್ಕು ತಪ್ಪಿಸಿ ಕರಾವಳಿಯಂತೆ ರಕ್ತಪಾತ ಹರಿಸುವ ದಿಕ್ಕಿಗೆ ಸಾಗಲು ಮಂಡ್ಯದ ನೆಲದ ಜನ ಅವಕಾಶ ಮಾಡಿಕೊಡುವುದಿಲ್ಲ. ಈ ನೆಲದಲ್ಲಿನ ಜನರು ಕುವೆಂಪು ರವರ ಆಶಯ ಸರ್ವಜನಾಂಗದ ಶಾಂತಿಯ ತೋಟದಂತೆ ಬದುಕಬೇಕು ಎಂಬ ಹಂಬಲದಿಂದ ದುಡಿಯುತ್ತಿರುವ ರೖತ, ದಲಿತ, ಕಾರ್ಮಿಕ, ಮಹಿಳಾ ಹಾಗೂ ಜೀವ ಪರ ಮಾನವೀಯ ಮೌಲ್ಯವುಳ್ಳ ಎಲ್ಲಾ ಹಿರಿಯರ ಚಿಂತಕರ ಕನಸಾಗಿದೆ. ಅದನ್ನು ಖಂಡಿತಾ ಹಾಳುಗೆಡವಲೂ ಅವಕಾಶ ಕೊಡದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಆಡಳಿತ ಹಾಗೂ ಪೋಲಿಸ್ ಇಲಾಖೆ ಜೊತೆಗೂಡಿ ಶಾಂತಿ ಸಭೆಗೆ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.




