Friday, September 13, 2024

ಪ್ರಾಯೋಗಿಕ ಆವೃತ್ತಿ

ಮಧು ಜಿ.ಮಾದೇಗೌಡರಿಗೆ ಪಕ್ಷಾತೀತವಾಗಿ ಬೆಂಬಲ ಸಿಗುತ್ತಿದೆ : ಚಲುವರಾಯಸ್ವಾಮಿ

ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರ ಪರ ನಾಲ್ಕು ಜಿಲ್ಲೆಗಳಲ್ಲಿ ಪಕ್ಷಾತೀತವಾಗಿ ಬೆಂಬಲಿಸಲು ಮತದಾರರು ನಿರ್ಣಯಿಸಿದ್ದು, 100% ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ದಕ್ಷಿಣ ಪದವೀಧರ ಕ್ಷೇತ್ರವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.

ಮಧು ಮಾದೇಗೌಡ ಕಾಂಗ್ರೆಸ್‌ನ ಒಮ್ಮತದ ಅಭ್ಯರ್ಥಿಯಾಗಿದ್ದು, ಹಾಸನ, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಮಾದೇಗೌಡರ ಜನಪರ,ರೈತಪರ ಹೋರಾಟಗಳು, ಕಾವೇರಿ ನೀರಿನ ಹೋರಾಟ ಬಗ್ಗೆ ಪದವೀಧರ ಮತದಾರರಿಗೆ ಅರಿವಿದೆ.ಅಲ್ಲದೆ ಮಾದೇಗೌಡರ ಶೈಕ್ಷಣಿಕ ಸೇವೆ ಹಾಗೂ ಮಧು ಅವರ ಶಿಕ್ಷಣ ಸೇವೆ ಬಗ್ಗೆ ಮತದಾರರು ಒಲವು ವ್ಯಕ್ತಪಡಿಸಿದ್ದು,ಈ ಬಾರಿ ಮಧು ಜಿ. ಮಾದೇಗೌಡರಿಗೆ ಪಕ್ಷತೀತವಾಗಿ ಬೆಂಬಲ ನೀಡಿ ಆಯ್ಕೆ ಮಾಡಲಿದ್ದಾರೆ ಎಂದರು.

ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾರೆ. ಜೊತೆಗೆ ಪಕ್ಷದ ಶಾಸಕರು, ಮಾಜಿ ಶಾಸಕರು ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡರ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

ತಮ್ಮ ಕೊನೆ ಉಸಿರು ಇರುವವರೆಗೂ ಜಿ. ಮಾದೇಗೌಡರು ಪ್ರಾಮಾಣಿಕ ಹಾಗೂ ನಿಸ್ವಾರ್ಥವಾಗಿ ಹೋರಾಟ ನಡೆಸಿಕೊಂಡು ಬಂದವರು. ಜಿಲ್ಲೆಯ ಸಮಸ್ಯೆಗಳ ಬಗ್ಗೆ, ಮೈಷುಗರ್, ಕಾವೇರಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಮಾದೇಗೌಡರ ಆತ್ಮಕ್ಕೆ ನಮನ ಸಲ್ಲಿಸಲು ಇದೊಂದು ಅವಕಾಶ ಲಭಿಸಿದ್ದು, ಪದವೀಧರ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡರಿಗೆ ಪಕ್ಷಾತೀತವಾಗಿ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಅವರು ಮನವಿ ಮಾಡಿದರು.

ಸುದ್ದಿಗೊಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಜಯ ಕುಮಾರ್, ಕಾಂಗ್ರೆಸ್ ಮುಖಂಡರಾದ ಡಾ. ಕೃಷ್ಣ, ಅಪ್ಪಾಜಿ, ಹಾಲಹಳ್ಳಿ ಅಶೋಕ್, ನಗರ ಘಟಕದ ಅಧ್ಯಕ್ಷ ಹೆಚ್.ಕೆ.ರುದ್ರಪ್ಪ, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!