Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಜಾತ್ರೆ: ಅಪಸ್ವರ ಕೇಳಿಬಾರದಂತೆ ಕೆಲಸ ನಿರ್ವಹಿಸಿ – ಮಧು ಜಿ.ಮಾದೇಗೌಡ

ಮೆರವಣಿಗೆ ಸಮಿತಿಯಡಿ ರಚಿಸಿರುವ ಉಪ ಸಮಿತಿಗಳು ತಮ್ಮ ವ್ಯಾಪ್ತಿಯ ಕಾರ್ಯ ಚಟುವಟಿಕೆಗಳು, ಅಂದಾಜು ವೆಚ್ಚದ ಮಾಹಿತಿಯೊಂದಿಗೆ ಸ್ಪಷ್ಟ ಅಭಿಪ್ರಾಯ/ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸುವಂತೆ ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ‘ಮೆರವಣಿಗೆ ಸಮಿತಿ’ ಹಾಗೂ ‘ಉಪ ಸಮಿತಿಗಳ’ ಸಭೆ ನಡೆಸಿ ಮಾತನಾಡಿದ ಅವರು, ಉಪ ಸಮಿತಿಗಳು ಯುಕ್ತವೆಂದು ತೋರಬಹುದಾದಂತಹ ಚಟುವಟಿಕೆಗಳನ್ನು ಗುರುತಿಸಿ, ಅಂದಾಜು ವೆಚ್ಚ ಒಳಗೊಂಡ ವರದಿಯನ್ನು ಮಂಡಿಸಬೇಕು. ತರುವಾಯ, ವರದಿಯಲ್ಲಿನ ಅಭಿಪ್ರಾಯ ಮತ್ತು ಶಿಫಾರಸುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಸಂಭ್ರಮ. ಹಾಗಾಗಿ, ಸಮ್ಮೇಳನವು ಪಕ್ಷಾತೀತ ಮತ್ತು ಜಾತ್ಯತೀತವಾಗಿದ್ದು ಎಲ್ಲರನ್ನೂ ಒಳಗೊಳ್ಳುವಂತೆ ಇರಬೇಕು. ಕಲಾತಂಡಗಳ ಆಯ್ಕೆ, ಸ್ತಬ್ಧಚಿತ್ರಗಳ ನಿರ್ಮಾಣ ಸೇರಿದಂತೆ ಪ್ರತಿ ಹಂತದಲ್ಲೂ ಇದು ಅನ್ವಯವಾಗಬೇಕು. ಎಲ್ಲೂ ಕೂಡ ಅಪಸ್ವರ ಕೇಳಿಬರಬಾರದು. ಈ ಬಗ್ಗೆ ಉಪ ಸಮಿತಿಗಳು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸಮ್ಮೇಳನದ ಸಡಗರವಿದ್ದರೂ ಸಮ್ಮೇಳನದ ಮೊದಲ ದಿನ ಮೆರವಣಿಗೆ ಬೆಳಿಗ್ಗೆಯೇ ಆರಂಭವಾಗುವುದರಿಂದ ಜನರ ಭಾಗವಹಿಸುವಿಕೆ ನಿರೀಕ್ಷಿಸಿದಕ್ಕಿಂತ ಕಡಿಮೆ ಬರಬಹುದು. ಹಾಗಾಗಿ, ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕೂಡ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಗಬೇಕು. ಈ ನಿಟ್ಟಿನಲ್ಲಿಯೂ ಉಪ ಸಮಿತಿಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಮೆರವಣಿಗೆ ಸಮಿತಿ ಉಪಾಧ್ಯಕ್ಷರಾದ ಡಿ.ಪಿ.ಸ್ವಾಮಿ, ಸಂಚಾಲಕರಾದ ಕಾರಸವಾಡಿ ಮಹದೇವು, ಸದಸ್ಯ ಕಾರ್ಯದರ್ಶಿಯೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂದೀಶ್, ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.

ಉಪ ಸಮಿತಿಗಳಿಗೆ ಸಂಚಾಲಕರ ನೇಮಕ

ಇದೇ ಸಂದರ್ಭದಲ್ಲಿ ಮೆರವಣಿಗೆ ಸಮಿತಿಯ ಪ್ರಕಾರ್ಯಗಳು ಸುಗಮವಾಗಿ ನಡೆಯುವ ಹಿತದೃಷ್ಟಿಯಿಂದ ಒಟ್ಟು 9 ಉಪ ಸಮಿತಿಗಳನ್ನು ರಚಿಸಿ ಸಂಚಾಲಕರನ್ನು ನೇಮಿಸಲಾಯಿತು.

ಕಲಾತಂಡ ಆಯ್ಕೆ ಉಪ ಸಮಿತಿ (ಸಂಚಾಲಕರು –ಕಾರಸವಾಡಿ ಮಹದೇವು), ಸ್ತಬ್ಧಚಿತ್ರ ಉಪ ಸಮಿತಿ (ಕೀಲಾರ ಕೃಷ್ಣೇಗೌಡ), ಪೂರ್ಣಕುಂಭ ಉಪ ಸಮಿತಿ (ರಾಜಮೂರ್ತಿ), ಸ್ಕೌಟ್ಸ್ ಮತ್ತು ಗೈಡ್ಸ್ ಉಪ ಸಮಿತಿ (ಜಿ.ಪಿ.ಭಕ್ತವತ್ಸಲ), ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಎನ್.ಸಿ.ಸಿ. ತಂಡಗಳ ಸಂಯೋಜನಾ ಉಪ ಸಮಿತಿ (ಲಿಂಗರಾಜು), ಎತ್ತಿನಗಾಡಿ ಮತ್ತು ಆನೆಗಳ ಸಂಯೋಜನಾ ಉಪ ಸಮಿತಿ (ಶಿವಶಂಕರ್ ಸಂಪಳ್ಳಿ), ಆಟೋರಿಕ್ಷಾ ಮೆರವಣಿಗೆ ಉಪ ಸಮಿತಿ (ಟಿ.ಕೃಷ್ಣ), ಶಾಲಾ-ಕಾಲೇಜುಗಳ ಸಮನ್ವಯ ಉಪ ಸಮಿತಿ (ಅನಿಲ್ ಕುಮಾರ್) ಹಾಗೂ ಸಂಘ-ಸಂಸ್ಥೆಗಳ ಸಮನ್ವಯ ಉಪ ಸಮಿತಿ (ಎಲ್.ಸಂದೇಶ್).

ಡಿಸಿ ಅವರೊಂದಿಗೆ ಸಭೆ

ಈ ಸಭೆಗೂ ಮೊದಲು, ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಯಶಸ್ವಿಗೊಳಿಸುವ ಸಂಬಂಧ ಮೆರವಣಿಗೆ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕುಮಾರ ಅವರೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಭೆ ನಡೆಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!