ಜಿಲ್ಲೆಗೆ ಜಿ. ಮಾದೇಗೌಡರು ಕೊಟ್ಟ ಕೊಡುಗೆಗಳು ಅಪಾರ. ರಾಜಕೀಯ, ಶಿಕ್ಷಣ ಹಾಗೂ ಕಾವೇರಿ ಹೋರಾಟದಲ್ಲಿ ತಮ್ಮನ್ನೇ ಅರ್ಪಿಸಿಕೊಂಡಿರುವ ಮಾದೇಗೌಡರ ಋಣ ತೀರಿಸಲು ಅವರ ಪುತ್ರ ಮಧು ಅವರನ್ನು ಹೆಚ್ಚಿನ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಆಯ್ಕೆ ಮಾಡಬೇಕೆಂದು ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಪದವೀಧರರಲ್ಲಿ ಮನವಿ ಮಾಡಿದರು.
ಮಳವಳ್ಳಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡರ ಪರವಾಗಿ ಮತಯಾಚಿಸಿ, ಮೊದಲ ಪ್ರಾಶಸ್ತ್ಯದ ಮತವನ್ನು ಕೊಟ್ಟು ಗೆಲ್ಲಿಸುವುದರ ಮೂಲಕ ಮಂಡ್ಯ ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕೆಂದು ಮನವಿ ಮಾಡಿದರು.
ಕೋಮುವಾದ, ಪಠ್ಯ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಬಿಜೆಪಿ ವಿರುದ್ದ ತಿರುಗಿ ಬಿದ್ದಿರುವ ಪ್ರಜ್ಞಾವಂತರು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ಕೋಮುವಾದದ ಮೂಲಕ ದೇಶದಲ್ಲಿ ಅಶಾಂತಿ ತಂದಿರುವ ಬಿಜೆಪಿಯನ್ನು ಹಾಗೂ ಬಡವರಿಗೆ ಸೌಲಭ್ಯಗಳನ್ನು ನೀಡುತ್ತೇನೆಂದು ಅಧಿಕಾರ ಇದ್ದರೂ ಭರವಸೆಗಳನ್ನು ಈಡೇರಿಸದ ಅವಕಾಶವಾದಿ ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.
ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತಡವಾಗುತ್ತಿದ್ದರಿಂದ 4 ಜಿಲ್ಲೆಗಳಲ್ಲಿ ಪ್ರಚಾರ ನಡೆಸುವುದೇ ಕಷ್ಟವಾಗಿತ್ತು. ಆದರೇ ಪ್ರಸಕ್ತ ಚುನಾವಣೆಯಲ್ಲಿ ಒಂದು ವರ್ಷ ಮುಂಚಿತವಾಗಿಯೇ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಜೊತೆಗೆ ವ್ಯವಸ್ಥಿತವಾಗಿ ಪದವೀಧರರ ನೊಂದಣಿಯನ್ನು ಮಾಡಿಸಿರುವುದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡರು ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು, ಸುಂದರ್‌ರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವಾಸ್, ನಾಗೇಶ್, ವಕೀಲ ಜಗದೀಶ್, ಸುಂದರ್, ಶಾಂತರಾಜು, ಶಿವಕುಮಾರ್, ಸೇರಿದಂತೆ ಇತರರಿದ್ದರು.