Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಾಭಾರತ ಮತ್ತು ಕರ್ನಾಟಕ ಬಂದ್… ನಾಗರಿಕತೆಯ ರಥ ನಿಂತಲ್ಲೇ ಸುತ್ತುತ್ತಿದೆಯೇ…..

✍️ ವಿವೇಕಾನಂದ ಎಚ್ ಕೆ

ವ್ಯಾಸರೆಂಬ ವ್ಯಕ್ತಿ ಈ ನೆಲದ ಗುಣವನ್ನು ಎಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.‌ ಇಲ್ಲಿನ ಜನರ ವರ್ತನೆಯನ್ನು ಅದು ಹೇಗೆ ಅಷ್ಟೊಂದು ಸ್ಪಷ್ಟವಾಗಿ ಗುರುತಿಸಿದ್ದರು. ಅವರ ದೂರ ದೃಷ್ಟಿ ಇಷ್ಟೊಂದು ಸೂಕ್ಷ್ಮವಾಗಿತ್ತೆ ಎಂದು ಕಲ್ಪಿಸಿಕೊಂಡರೆ ಆಶ್ಚರ್ಯವಾಗುತ್ತದೆ.

ಏಕೆಂದರೆ ಅವರು ರಚಿಸಿದ ಬೃಹತ್ ಗ್ರಂಥ ಮಹಾಭಾರತ ಈ ಕ್ಷಣಕ್ಕೂ ಎಷ್ಟೊಂದು ನೈಜ ಮತ್ತು ವಾಸ್ತವವಾಗಿದೆ ಎಂದು ಇಂದಿನ ಘಟನೆಗಳು ಮತ್ತೆ ಮತ್ತೆ ನೆನಪಿಸುತ್ತಿವೆ.

ಅಖಂಡ ಭಾರತದ ಭಾಗವೇ ಆಗಿದ್ದ ಭಾರತ ಪಾಕಿಸ್ತಾನ ಒಂದಷ್ಟು ಭೂ ಪ್ರದೇಶಕ್ಕಾಗಿ ಹರಿಸುತ್ತಿರುವ ರಕ್ತ, ಕರ್ನಾಟಕ ತಮಿಳುನಾಡು ಗೋವ ಇತ್ಯಾದಿ ರಾಜ್ಯಗಳು ನೀರಿಗಾಗಿ ನಡೆಸುತ್ತಿರುವ ಕಾದಾಟಗಳು ವ್ಯಾಸರು ಮೊದಲೇ ನಿರೀಕ್ಷಿಸಿದ್ದರೆ?

ಮನುಷ್ಯನ ಹಠಮಾರಿತನ, ದುರಹಂಕಾರ, ಮೂರ್ಖತನ ಹೇಗೆ ತಮ್ಮ ನಾಶಕ್ಕೆ ತಾವೇ ಕಾರಣವಾಗುತ್ತವೆ ಎಂದು ಅವರಿಗೆ ಅರಿವಿತ್ತೇ?

Very shocking. ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಬಹುತೇಕ ನಿಜ ಅನಿಸುತ್ತಿಲ್ಲವೆ !

ಸ್ವಾತಂತ್ರ್ಯದ ಸಮಯದಲ್ಲಿ ಅನೇಕ ಷರತ್ತುಗಳ, ಮಾತುಕತೆಯ, ಒಪ್ಪಂದದ ಮುಖಾಂತರ ಬೇರೆಬೇರೆಯಾದ ಭಾರತ ಪಾಕಿಸ್ತಾನ ವಿಶಾಲ ಭೂ ಪ್ರದೇಶ ಮತ್ತು ಅಪಾರ ಜನಸಂಖ್ಯೆ ಹೊಂದಿದ್ದರೂ ಕಾಶ್ಮೀರ ಎಂಬ ಒಂದಷ್ಟು ಸಣ್ಣ ಜಾಗಕ್ಕಾಗಿ ಈಗಾಗಲೇ ಎರಡು ಯುದ್ಧಗಳನ್ನು ಮಾಡಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ ಈಗ ಮೂರನೇ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ದಿನನಿತ್ಯದ ಪರೋಕ್ಷ ಸಾವು ನೋವು ಈಗಲೂ ನಡೆಯುತ್ತಲೇ ಇದೆ. ಏತಕ್ಕಾಗಿ ಕೇವಲ ಜಾಗಕ್ಕಾಗಿ. ಇರುವ ಜಾಗಗಳನ್ನೇ ಸರಿಯಾಗಿ ನಿರ್ವಹಿಸದೆ ಜನರನ್ನು ನರಕದ ಕೂಪಕ್ಕೆ ತಳ್ಳಿರುವ ಸರ್ಕಾರಗಳು ಸುಮಾರು 160 ಕೋಟಿ (ಭಾರತ ಪಾಕಿಸ್ತಾನ ಸೇರಿ) ಜನರನ್ನು ಬಲಿಕೊಡಲು ಸಿದ್ದವಾಗುತ್ತಿವೆ.

ಶತಮಾನಗಳು ಕಳೆದರೂ ಪ್ರಕೃತಿಯ ಸಹಜ ಕೊಡುಗೆ ನೀರನ್ನು ನಮ್ಮದೇ ಜನಗಳ ನಡುವೆ ಹಂಚಿಕೊಳ್ಳಲು ಬಾರದೆ ಒಣ ಪ್ರತಿಷ್ಠೆಯಿಂದ ಕರ್ನಾಟಕ ತಮಿಳುನಾಡು ದಾಯಾದಿ ಕಲಹದಲ್ಲಿ ಮುಳುಗಿವೆ. ಯಾವುದೇ ನಾಗರಿಕ ಸಮಾಜ ಮಾತುಕತೆ ಮೂಲಕ ಒಂದೇ ದಿನದಲ್ಲಿ ಪರಿಹರಿಸಿಕೊಳ್ಳಬಹುದಾದ ಸರಳ ವಿಷಯವನ್ನು ಸುಮಾರು 15 ಕೋಟಿ ( ಕರ್ನಾಟಕ ತಮಿಳುನಾಡು ಸೇರಿ ) ಜನರ ಬದುಕನ್ನು ದುರ್ಬಲಗೊಳಿಸುತ್ತಿವೆ. ಕಿತ್ತು ತಿನ್ನುತ್ತಿರುವ ಅನೇಕ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸದೆ ಎರಡೂ ಸರ್ಕಾರಗಳು ಅಥವಾ ನಮ್ಮ ನ್ಯಾಯಾಂಗ ಒಂದು ಸಹಜ ತೀರ್ಮಾನದ ಮೂಲಕ ವಿವಾದ ಬಗೆಹರಿಸಿಕೊಳ್ಳದೆ ಉಗುರಿನಲ್ಲಿ ತೆಗೆಯಬಹುದಾದ ಮುಳ್ಳನ್ನು ಕೊಡಲಿಯಿಂದ ಹೊಡೆದು ದೊಡ್ಡ ಗಾಯ ಮಾಡಿಕೊಳ್ಳುತ್ತಿವೆ.

ಇದು ಅಭಿವೃದ್ಧಿಯಲ್ಲ ವಿನಾಶ ಎಂದು ಸ್ಪಷ್ಟವಾಗಿ ತಿಳಿದಿದ್ದರು, ಅದೇ ಮಾರ್ಗ ಅನುಸರಿಸುತ್ತಿದ್ದಾರೆ. ಅದೇ ಅಲ್ಲವೆ ಪಾಂಡವರು ಕೌರವರು ಜಾಗದ ವಿಷಯಕ್ಕೆ ಕಚ್ಚಾಡಿ ನಾಶವಾಗಿದ್ದು. ಅಂದರೆ ಮನುಷ್ಯನ ನಾಗರೀಕತೆಯ ರಥ ಎಷ್ಟೇ ಶತಮಾನಗಳು ಕಳೆದರೂ ಮತ್ತೆ ಮತ್ತೆ ಅಲ್ಲೇ ಸುತ್ತುತ್ತಿದೆ.

ಹಾಗಾದರೆ ನಾವು ಭಾವಿಸಿರುವ ಆಧುನಿಕತೆ ಅಭಿವೃದ್ಧಿ ಎಲ್ಲಾ ಭ್ರಮೆಯೇ ? ನಾವೆಲ್ಲಾ ಅರೆ ಹುಚ್ಚರೇ? .

ವೇದವ್ಯಾಸರು, ಮಹಾಭಾರತ, ಕೌರವರು ಪಾಂಡವರು ಕುರುಕ್ಷೇತ್ರ ಕರ್ನಾಟಕ ಬಂದ್ ಎಲ್ಲಾ ನೆನಪಾಗುತ್ತಲೇ ಇದೆ. ಅಮಾಯಕ ಜನರ ಸಾವು ನೋವು ಕಣ್ಣ ಮುಂದೆ ನರ್ತಿಸುತ್ತಿದೆ………..ಬದಲಾವಣೆ….ನಾಗರಿಕತೆ ಎಂದೋ…………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!