ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆಗೆ ಕೊಂಡೊಯ್ದು, ತಾವು ಅದೇ ಮಾರ್ಗದಲ್ಲಿ ನಡೆದ ಮಹಾನ್ ಚೇತನ ವರ್ಧಮಾನ ಮಹಾವೀರ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸ್ಮರಿಸಿದರು.
ಮಂಡ್ಯನಗರದ ಜೈನರ ಬೀದಿಯಲ್ಲಿ ಇರುವ ಶ್ರೀಅನಂತನಾಥ ಸ್ವಾಮಿ ದೇವಾಲಯ (ದಿಗಂಬರ ದೇವಾಲಯ) ವತಿಯಿಂದ ನಡೆದ ಮಹಾವೀರ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಾವೀರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿಗೆ ಆಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ ಎಂದು ತಿಳಿಸಿದರು.
ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ 5 ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.
ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ಮಹಾವೀರರ ಪುತ್ತಳಿ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ ಕುಮಾರ ಅವರು ಚಾಲನೆ ನೀಡಿದರು. ಮೆರವಣಿಗೆಯು ಬ್ಯಾಂಡ್ ಸೆಟ್ ನ ಮೂಲಕ ನಗರದ ಪೇಟೆ ಬೀದಿ ಮೂಲಕ ನಂದಾ ವೃತ್ತ, ಮೈಸೂರು ರಸ್ತೆಯಲ್ಲಿ ಮೆರವಣಿಗೆ ಸಾಗಿ ಮೂಲಸ್ಥಾನ ದೇವಾಲಯಕ್ಕೆ ಮರಳಿತು,
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜೈನ ಸಮುದಾಯದ ಅಧ್ಯಕ್ಷರಾದ ಶಾಂತಿ ಪ್ರಸಾದ್ ಜೈನ್, ಜೈನ ಸಮುದಾಯದ ಮುಖಂಡರುಗಳಾದ ರಾಕೇಶ್ ಜೈನ್ ಶ್ರೀಧರ್ ಜೈನ್, ಶಶಿಧರ್ ಜೈನ್ ,ಪದ್ಮನಾಭ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು




