ಇಂಡಿಯಾ ಮತ್ತು ಆಫ್ರಿಕಾ ದೇಶಗಳ ರಾಗಿ ತಳಿಯನ್ನು ಮಿಶ್ರ ಮಾಡಿ ಹೊಸ ತಳಿ ಇಂಡಾಫ್ ಸೃಷ್ಟಿಸಿದ ರಾಗಿ ಲಕ್ಷ್ಮಣಯ್ಯನವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆಂದು ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಅಧ್ಯಕ್ಷ ಕೆ.ಬೋರಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಗಿ ಲಕ್ಷ್ಮಣಯ್ಯ ಅವರು ತಮ್ಮ ಬಹುಪಾಲು ಜೀವನವನ್ನು ರಾಗಿ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ರಾಗಿ ಬೆಳೆಯಲ್ಲಿ ಕ್ರಾಂತಿ ಮಾಡಿದರು.
ರಾಗಿ ಲಕ್ಷ್ಮಣಯ್ಯನವರು ಇಂದು ಬದುಕಿದ್ದರೆ ನೂರು ವರ್ಷ ತುಂಬುತ್ತಿತ್ತು.ಅವರ ನೆನಪಿನಲ್ಲಿ ಮೇ. 27ರಂದು ‘ಹರಿವಾಣ ತುಂಬಿದ ತೆನೆ’ ಸಂಸ್ಮರಣ ಗ್ರಂಥ ಬಿಡುಗಡೆ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ ಮಂಡ್ಯ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದರು.
ಸಂಸ್ಮರಣ ಗ್ರಂಥವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರವರು ಲೋಕಾರ್ಪಣೆ ಮಾಡಲಿದ್ದು, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ. ರಾಜೇಂದ್ರ ಪ್ರಸಾದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರೈತ ನಾಯಕಿ ಸುನಂದ ಜಯರಾಂ ಅಧ್ಯಕ್ಷತೆ ವಹಿಸಲಿದ್ದು, ಡಾ.ಎಸ್.ತುಕಾರಾಂ ಸ್ಮಾರಕ ಉಪನ್ಯಾಸ ಮಾಡಲಿದ್ದಾರೆ ಎಂದು ತಿಳಿಸಿದರು.
ಕಳೆದ ಮೂರು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಿರಲಿಲ್ಲ. ಈಗ ರಾಗಿ ಲಕ್ಷ್ಮಣಯ್ಯ ನವರಿಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಪ್ರಶಸ್ತಿಯನ್ನು ಈ ಬಾರಿ ಒಟ್ಟಿಗೆ ನೀಡಲಾಗುತ್ತಿದೆ.
ಕಳೆದ 24 ವರ್ಷಗಳಿಂದ ರಾಗಿ ಲಕ್ಷ್ಮಣಯ್ಯ ಸಮಿತಿಯಿಂದ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ.ಈ ಬಾರಿ ರಾಗಿ ಲಕ್ಷ್ಮಣಯ್ಯ ಅವರ ಜೀವನಗಾಥೆ 400 ಪುಟಗಳ ಹರಿವಾಣ ತುಂಬಿದ ತೆನೆ ಗ್ರಂಥ ಬಿಡುಗಡೆ ಮಾಡಲಿದ್ದೇವೆ ಎಂದರು.
2019,20 ಹಾಗೂ21ನೇ ಸಾಲಿನ ಮೂರು ವರ್ಷಗಳ ಪ್ರಶಸ್ತಿ ಕ್ರಮವಾಗಿ ಟಿ.ಡಿ.ಗೌಡ, ರಾಹುಲ್ ಗೌಡ, ಜಿ. ಮೋನಿಕಾ ಅವರಿಗೆ ಅವಧಾನಿ ವಿದ್ಯಾರ್ಥಿ ಪ್ರಶಸ್ತಿ, ಎಂ ಎಂ ಮಮತಾ, ಸಿ.ಕೆ ಲಿಖಿತ, ಭುವನಾರಾಧ್ಯ ಅವರಿಗೆ ದೇವಮ್ಮ ಮತ್ತು ಹೆಚ್. ಹೊನ್ನಯ್ಯ ಇಂಡುವಾಳು ವಿದ್ಯಾರ್ಥಿ ಪ್ರಶಸ್ತಿ, ನಾಗಮ್ಮ, ಜಯರಾಮು ಮತ್ತು ಶಿವಯ್ಯ ಅವರಿಗೆ ಲಕ್ಷ್ಮಮ್ಮ ಕೆ.ರಾಮೇಗೌಡ ರೈತ ಪ್ರಶಸ್ತಿ ( ರಾಗಿ), ಎಂ.ಸಿ. ಶಿವಣ್ಣಗೌಡ, ಸಿ.ಬಿ. ನವೀನ್ ಕುಮಾರ್,ಸಿ.ಡಿ. ಶಿವರಾಮು ಅವರಿಗೆ ನಾಗಮ್ಮ ಮತ್ತು ಮಂಚೇಗೌಡ ಎಚ್. ಕೋಡಳ್ಳಿ, ರೈತ ಪ್ರಶಸ್ತಿ ( ಭತ್ತ), ಬಿ.ಎಂ.ಅನಿಲ್ ಕುಮಾರ್,ಎನ್. ನವೀನ್ ಹಾಗೂ ಬಿ.ಎಂ. ಶಶಿಕಿರಣ್ ರವರಿಗೆ ಪುಟ್ಟಮ್ಮ ಮತ್ತು ಅಣ್ಣೇಗೌಡ ಅರಕೆರೆ, ರೈತ ಹಾಲು ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ರಾಗಿ ಲಕ್ಷ್ಮಣಯ್ಯ ಅವರ ಹೆಸರನ್ನು ಹೆಚ್ಚು ಪ್ರಸಿದ್ಧಿಗೆ ತರಲು ನಮ್ಮ ಸಮಿತಿ ಪ್ರಯತ್ನಿಸಿದೆ. ಈಗಾಗಲೇ ಮಂಡ್ಯದ ಹೊಳಲು ವೃತ್ತಕ್ಕೆ ರಾಗಿ ಲಕ್ಷ್ಮಣಯ್ಯ ವೃತ್ತ ಎಂದು ಹೆಸರಿಡಲಾಗಿದೆ. ಬೆಂಗಳೂರಿನ ಜಿಕೆವಿಕೆ ಬಳಿ ಮೆಟ್ರೋ ನಿಲ್ದಾಣಕ್ಕೆ ರಾಗಿ ಲಕ್ಷ್ಮಣಯ್ಯ ಹೆಸರು ಇಡಬೇಕೆಂದು ಸಮಿತಿ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯಮಟ್ಟದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ರಾಗಿ ಲಕ್ಷಣ್‌ಯ್ಯನವರ ಜೀವನದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲು ಹರಿವಾಣ ತುಂಬಿದ ತೆನೆ ಗ್ರಂಥವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಡುಗಡೆ ಮಾಡಲಿದ್ದಾರೆ. ಈ ಗ್ರಂಥದಲ್ಲಿ ರಾಗಿಲಕ್ಷಣಯ್ಯ ನವರ ಕೌಟುಂಬಿಕ ಜೀವನ, ಸೇವೆ, ಸಂಶೋಧನೆ, ವಿಜ್ಞಾನಿ, ರೈತರ ಅನುಭವಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಬರೆದ ಲೇಖನಗಳನ್ನು ಒಳಗೊಂಡಿದೆ ಎಂದು ಹೇಳಿದರು.
ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿಯ ಖಜಾಂಚಿ ಸುರೇಶ್ ಬಾಬು, ಸದಸ್ಯರಾದ ಯೋಗಾನಂದ, ಸಾವಯವ ಕೃಷಿಕ ಸಯ್ಯದ್ ಘನಿಖಾನ್, ಇಂಡುವಾಳು ಚಂದ್ರ ಶೇಖರ್ ಉಪಸ್ಥಿತರಿದ್ದರು.