Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯ ಪ್ರತಿಯೊಂದನ್ನೂ ಹೋರಾಟ ಮಾಡಿ ಪಡೆದುಕೊಳ್ಳುವ ದುಸ್ಥಿತಿ ಬಂದಿದೆ- ಮಹೇಶ್ ಜೋಷಿ

ಕರ್ನಾಟಕ ರಾಜ್ಯ ಪ್ರತಿಯೊಂದನ್ನೂ ಹೋರಾಟ ಮಾಡಿ ಪಡೆದುಕೊಳ್ಳುವ ದುಸ್ಥಿತಿ ಬಂದಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ವಿಷಾದಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಸತ್ಯಾಗ್ರಹ ಧರಣಿಯಲ್ಲಿ ಶುಕ್ರವಾರ ಪಾಲ್ಗೊಂಡು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿದ ಅವರು, ಕನ್ನಡಿಗರಾದ ನಾವು ಕನ್ನಡ ಭಾಷೆಯ ಅಸ್ಮಿತೆಗಾಗಿ ಹೋರಾಟ ಮಾಡದೆ, ನೆಲ-ಜಲ-ಗಡಿ ವಿಚಾರದಲ್ಲೂ ಹೋರಾಟ ಮಾಡಬೇಕಾಗಿದೆ ಎಂದರು.

ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲೂ ನೀರಿಲ್ಲದಿದ್ದರೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ರಾಜ್ಯ ಹಾಗೂ ರಾಜ್ಯದ ಜನತೆಗೆ ಮರಣ ಶಾಸನವಾಗಿದೆ. ತಮಿಳುನಾಡಿನ ಅಣೆಕಟ್ಟೆಗಳಲ್ಲಿ ನೀರಿದ್ದರೂ ಅವರು ನೀರು ಕೇಳುತ್ತಿರುವುದು ರಾಜಕೀಯ ಪ್ರೇರಿತ ಎಂದು ಹೇಳಿದರು.

ನಮಗೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆಯಾಗಿಲ್ಲ. ಆದರೆ, ತಮಿಳುನಾಡಿನಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮಳೆಯಾಗಲಿದೆ. ಅಲ್ಲದೆ, ಅಂತರ್ಜಲ ಮಟ್ಟ ಚೆನ್ನಾಗಿದೆ. ಅವರು ಮೂರು ಬೆಳೆಯುತ್ತಾರೆ. ನಾವು ಒಂದೇ ಒಂದು ಬೆಳೆ ಮಾತ್ರ ಬೆಳೆದಿದ್ದೇವೆ. ಎರಡನೇ ಬೆಳೆ ಬೆಳೆಯಲು ಮತ್ತು ಕುಡಿಯಲು ನೀರೇ ಇಲ್ಲದಿರುವಾಗ ಅವರು ನೀರು ಕೇಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸಮ್ಮೇಳನ ಮುಂದೂಡಿಕೆ

ರಾಜ್ಯದಲ್ಲಿ ತಲೆದೂರಿರುವ ಬರದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿದ್ದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಒಳ್ಳೆಯ ಮಳೆ-ಬೆಳೆಯಾದರೆ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.

ಅಲ್ಲದೆ, ನಾಡಿನ ಹೆಮ್ಮೆಯ ಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸುವ ಮೂಲಕ ಸರ್ಕಾರ ರೈತರ ಸಂಕಷ್ಟಕ್ಕೆ ನಿಲ್ಲಬೇಕು. ಕಾವೇರಿ ನದಿ ನೀರು ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ, ಶಾಶ್ವತ ಪರಿಹಾರ ರೂಪಿಸಬೇಕು.
                                          – ಮಹೇಶ್ ಜೋಷಿ, ಅಧ್ಯಕ್ಷರು, ಕೇಂದ್ರ ಕಸಾಪ

ಕನ್ನಡ ಭಾಷೆ, ನೆಲ-ಜಲ, ಗಡಿ ವಿಚಾರಕ್ಕೆ ಬಂದಾಗ ಕನ್ನಡ ಸಾಹಿತ್ಯ ಪರಿಷತ್ ಹೋರಾಟಕ್ಕೆ ಇಳಿಯಲಿದೆ. ಕಾವೇರಿ ವಿಚಾರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬದ್ಧವಾಗಿದ್ದು, ನಿಮ್ಮ ಜತೆ ನಾವಿರುತ್ತೇವೆ ಎಂದು ಭರವಸೆ ನೀಡಿದರು.
ಇಡೀ ರಾಜ್ಯವೇ ಹೋರಾಟಕ್ಕೆ ಧುಮುಕಬೇಕು:

ಕಾವೇರಿ ನದಿ ನೀರು ಕೇವಲ ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಾವೇರಿ ನಾಡಿನ ಜೀವನದಿ. ನದಿ ನೀರು ಹಂಚಿಕೆ ವಿಚಾರದಲ್ಲಿ ನಮಗೆ ನ್ಯಾಯ ದೊರಕಬೇಕಾದರೆ ಇಡೀ ರಾಜ್ಯದ ಜನರು ಹೋರಾಟಕ್ಕೆ ಧುಮುಕಬೇಕೆಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ಕರೆ ನೀಡಿದರು.
ಹಲವು ದಿನಗಳಿಂದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸಂಘಟನೆಗಳು ಪ್ರತ್ಯೇಕವಾಗಿ ಚಳವಳಿ ನಡೆಸುತ್ತಿರುವುದು ಸರಿಯಲ್ಲ. ಎಲ್ಲರೂ ಒಂದೇ ವೇದಿಕೆಯಡಿ ಹೋರಾಟ ಮಾಡಿದರೆ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ್ ಜೋಷಿ ಅವರು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಎಲ್ಲ ಕಸಾಪ ಪದಾಧಿಕಾರಿಗಳು, ಸಾಹಿತಿಗಳು, ಕನ್ನಡ ಸಂಘಟನೆಗಳ ಸಭೆ ಕರೆದು ಚರ್ಚಿಸಿ, ದೊಡ್ಡ ಹೋರಾಟ ರೂಪಿಸಬೇಕೆಂದು ಮನವಿ ಮಾಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ಕಾವೇರಿ ಸಮಸ್ಯೆ ಇಂದು ನಿನ್ನೆಯದಲ್ಲ, ಬ್ರಿಟಿಷರ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಇಲ್ಲಿಯವರೆಗೆ ದೇಶ ಹಾಗೂ ರಾಜ್ಯವನ್ನಾಳಿದ ಯಾವುದೇ ಸರ್ಕಾರಗಳು ಇದಕ್ಕೆ ಶಾಶ್ವತ ಪರಿಹಾರ ರೂಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬರಗಾಲ ಬಂದಾಗ ಕಾವೇರಿ ಸಮಸ್ಯೆ ಉದ್ಭವಿಸಲಿದೆ. ಹಾಗಾಗಿ ಕೇಂದ್ರ ಸರ್ಕಾರ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ಕರೆದು ಸಂಕಷ್ಟ ಪರಿಸ್ಥಿತಿ ಸೂತ್ರವನ್ನು ರಚಿಸಿ, ಈ ಸಮಸ್ಯೆಗೆ ಇತಿಶ್ರೀ ಹಾಡಬೇಕೆಂದು ಕೋರಿದರು.

ಈ ಸಂದರ್ಭ ಸಮಿತಿಯ ಸುನಂದಾ ಜಯರಾಂ, ಎಂ.ಎಸ್.ಆತ್ಮಾನಂದ, ಜಿ.ಬಿ. ಶಿವಕುಮಾರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಡಾ.ಎಚ್.ಎಸ್. ಮುದ್ದೇಗೌಡ, ಪದಾಧಿಕಾರಿಗಳಾದ ಎಂ.ಬಿ.ರಮೇಶ್, ಹುಸ್ಕೂರು ಕೃಷ್ಣೇಗೌಡ, ಕೃಷ್ಣ, ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ. ಅಪ್ಪಾಜಪ್ಪ, ಮನ್ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಅನುಪಮ, ಕೀಲಾರ ಕೃಷ್ಣೇಗೌಡ, ಜಯಕರ್ನಾಟಕ ಸಂಘಟನೆಯ ನಾರಾಯಣ್, ಯೋಗಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮೈಶುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್. ಕೃಷ್ಣ ಶಂಭೂನಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತ ಕೃಷ್ಣ, ಕನ್ನಡ ಸೇನೆ ಮಂಜು, ದಸಂಸ ಎಂ.ವಿ.ಕೃಷ್ಣ, : ಸಾಮಾಜಿಕ ಹೋರಾಟಗಾರ ಎಂ.ಎಲ್. ತುಳಸೀಧರ್ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!