ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಷಿಗೆ ನೀಡಿದ್ದ ಸಚಿವ ಸ್ಥಾನಮಾನವನ್ನು ಸರ್ಕಾರವು ಹಿಂಪಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿ ಮಂಡ್ಯದಲ್ಲಿ ಬಾಡೂಟ ಬಳಗದ ಸದಸ್ಯರಯ ಮಂಡ್ಯನಗರದ ವಿ.ವಿ.ರಸ್ತೆಯ ವಿಶ್ರಾಂತ್ ಹೋಟೇಲ್ ಮುಂಭಾಗ ಚಿಕನ್ ಕಬಾಬ್ ಹಂಚಿ ತಿನ್ನುವ ಮೂಲಕ ಸಂಭ್ರಮಿಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡುವಂತೆ ಮಹೇಶ್ ಜೋಷಿ ಅವರನ್ನು ಕೇಳಿದ್ದಾಗ, ಅದು ಆಹಾರ ಸಮಿತಿಗೆ ಸಂಬಂಧಿಸಿದ ವಿಚಾರ. ನನಗೂ ಅದಕ್ಕೂ ಸಂಬಂಧವಿಲ್ಲ ಎಂಬ ಉತ್ತರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯದ ಪ್ರಗತಿಪರ ಸಂಘಟನೆಗಳ ಮುಖಂಡರು ಇಂದು ಮಹೇಶ್ ಜೋಷಿ ಸಚಿವ ಸ್ಥಾನಮಾನ ಕಳೆದುಕೊಂಡ ಹಿನ್ನೆಲೆಯಲ್ಲಿ ಚಿಕನ್ ಕಬಾಬ್ ಹಂಚಿ ತಿನ್ನುವ ಮೂಲಕ ಸಂಭ್ರಮಿಸಿದರು.
ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಬಾಡೂಟ ನೀಡುವ ಮೂಲಕ ಆಹಾರ ಸಮಾನತೆ ಪಾಲಿಸಬೇಕು ಎಂಬ ವಿಚಾರ ಮುನ್ನಲೆಗೆ ಬಂದಿತ್ತು. ಬಾಡೂಟದ ಪರವಾಗಿ ಹಲವು ಪ್ರಗತಿಪರ ಸಂಘಟನೆಗಳು ಹೋರಾಟ ರೂಪಿಸಿ, ಅಂತಿಮವಾಗಿ ಆಹಾರ ಸಮಿತಿ ವತಿಯಿಂದಲೇ ಸಮ್ಮೇಳನದ ಕೊನೆಯ ದಿನ ಸಾವಿರಾರು ಪ್ರಮಾಣದಲ್ಲಿ ಮೊಟ್ಟೆ ವಿತರಣೆಯಾಗುವಂತೆ ಮಾಡಿದ್ದವು.
ಈ ಸಂದರ್ಭದಲ್ಲಿ ಎಂ.ಬಿ.ನಾಗಣ್ಣಗೌಡ, ಟಿ.ಡಿ.ನಾಗರಾಜು, ಎಂ.ವಿ.ಕೃಷ್ಣ, ಹೆಚ್.ಡಿ.ಜಯರಾಂ, ಮುಕುಂದ, ಮಂಗಲ ಲಂಕೇಶ್, ಮೋಹನ್ ಕುಮಾರ್, ಬಸವರಾಜು ಹಾಗೂ ಷಣ್ಮುಖೇಗೌಡ ಸೇರಿದಂತೆ ಮತ್ತಿತರರಿದ್ದರು.




