Saturday, May 18, 2024

ಪ್ರಾಯೋಗಿಕ ಆವೃತ್ತಿ

ಪ್ರಚಲಿತ ವಿದ್ಯಮಾನಗಳಿಗೆ ಕಾವ್ಯದ ರೂಪ ಅಗತ್ಯ

ಪ್ರಚಲಿತ ವಿದ್ಯಮಾನಗಳಿಗೆ ಶಬ್ದ ಮತ್ತು ಭಾವದ ಅರ್ಥವನ್ನು ಕವಿ ತನ್ಮಯತೆಯಿಂದ  ವಿಲೀನಗೊಳಿಸಿ ಕಾವ್ಯದ ರೂಪ ನೀಡಿದಾಗ, ಅಂತಹ ಕಾವ್ಯ ಬಹುಬೇಗನೆ ಜನರನ್ನು ಮುಟ್ಟುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ‘ವಿಶ್ವಕೋಶ’ದ ಸಹಾಯಕ ಸಂಪಾದಕ ಡಾ.ಮುಳ್ಳೂರು ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಯುವ ಬರಹಗಾರರ ಬಳಗ ಹಾಗೂ ರೈತಬಂಧು ಮಂಡ್ಯ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮಂಡ್ಯ ನಗರದ ರೈತಬಂಧು ಫೌಂಡೇಶನ್ ಕಚೇರಿಯಲ್ಲಿ ನಡೆದ ‘ಅಮೃತ ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯದ ಕತೆ,ಕಾದಂಬರಿ ಇತ್ಯಾದಿ ಪ್ರಕಾರಗಳಿಗಿಂತ ಕಾವ್ಯ ಪ್ರಕಾರದ ಮೂಲಕ ಯಾವುದೇ ವಸ್ತುವಿಷಯವನ್ನು ವಿವೇಚನಾಯುತವಾಗಿ ಜನರ ಹತ್ತಿರ ಯಶಸ್ವಿಯಾಗಿ ತಲುಪಿಸಬಹುದು ಎಂದರು.

ಒಂದು ವಿಚಾರವನ್ನು ಕುರಿತು ಏನೇ ಮಾತನಾಡಿದರೂ ನಾಳೆ ಮರೆತುಹೋಗುತ್ತದೆ. ಆದ್ದರಿಂದ, ಮಾತಿಗಿಂತ ಬರಹಕ್ಕೆ ಒತ್ತು ನೀಡಿ, ಸಾಹಿತ್ಯ ರೂಪದಲ್ಲಿ ದಾಖಲಿಸಿದಾಗ ಅದು ಅರ್ಥಗರ್ಭಿತವಾಗುತ್ತದೆ.

ಜೊತೆಗೆ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ. ಕಾವ್ಯ ಯಾವಾಗಲೂ ಕಾಯುವ ಕೆಲಸ ಮಾಡಬೇಕು. ನಾಡಿನ ಬೆನ್ನೆಲುಬಾದ ರೈತ, ಅವನ ಪರಿಶ್ರಮ, ಬರಗಾಲ, ಅದು ತಂದೊಡ್ಡುವ ಬವಣೆ, ಕೊರೋನ ಸಂಕಷ್ಟದ ವಿಷಯಗಳೂ ಸೇರಿದಂತೆ ಆಯಾ ಕಾಲಘಟ್ಟವನ್ನು ಕಾವ್ಯದಲ್ಲಿ ದಾಖಲಿಸುವ ಕಾರ್ಯ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಬರಹಗಾರರ ಬಳಗ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಸಮಾಜವನ್ನು ಸತ್ಪಥದಲ್ಲಿ ಮುನ್ನಡೆಸುವ ಕಾವ್ಯ ಚಳವಳಿ, ಹೋರಾಟ, ಕ್ರಾಂತಿಗೆ ಪ್ರೇರಣೆ ಮತ್ತು ಉತ್ತೇಜನ ನೀಡಿ, ಅದರ ಕಾವು ಆರದಂತೆ ಕಾಯುತ್ತದೆ. ಕವಿಗಳು ಬರೆದ ಅದೆಷ್ಟೊ ಕವಿತೆಗಳು, ಹಾಡುಗಳು ಹೋರಾಟಕ್ಕೆ ದನಿ ತುಂಬಿವೆ. ಹೋರಾಟಗಾರರಲ್ಲಿ ಶಿಸ್ತು, ಒಗ್ಗಟ್ಟನ್ನೂ ತಂದಿವೆ. ಆದ್ದರಿಂದ ಯುವ ಕವಿಗಳು ಹೋರಾಟಗಾರರಿಗೆ ಸದಾ ನೈತಿಕ ಶಕ್ತಿ ತುಂಬಬೇಕು ಎಂದು‌ ಕರೆ ನೀಡಿದರು.

ಭಾರತ ಬಹುತ್ವ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ. ಇಲ್ಲಿ ಬಹುಭಾಷೆ, ಧರ್ಮ, ಜಾತಿ, ವರ್ಣ, ಆಹಾರ, ಉಡುಪಿನ ವೈವಿಧ್ಯತೆಯಿದ್ದರೂ ‘ಏಕತೆ’ ಉಳಿದಿದೆ. ಇದನ್ನು ಸಾಹಿತಿಗಳು ಮತ್ತು ಪತ್ರಕರ್ತರು ಉಳಿಸಿದ್ದಾರೆ. ಆದರೆ, ಮೂಲಭೂತವಾದಿ ವ್ಯವಸ್ಥೆಯ ಹುನ್ನಾರದಿಂದ ದೇಶದ ಬಹುತ್ವಕ್ಕೆ ಇಂದು ಅಪಾಯ ಎದುರಾಗಿದೆ.

ಬಹುತ್ವದ ಪರವಾಗಿರುವ ಹೋರಾಟಗಾರರ ದನಿಯನ್ನು ದಮನಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ದ ಬರಹಗಾರರು ಸಾಹಿತ್ಯ ರಚಿಸಿ ಜನರನ್ನು ಜಾಗೃತಗೊಳಿಸಬೇಕು. ಕವಿಗಳು ತಮ್ಮ ಸಂವೇದನಾಶೀಲ ಸಾಹಿತ್ಯದ ಸ್ಪಷ್ಟ ನಿಲುವುಗಳ ಮೂಲಕ ಕೋಮುವಾದಿಗಳ ವಿರುದ್ಧ ಮತ್ತು ಹೋರಾಟಗಾರರ ಪರವಾಗಿ ಗಟ್ಟಿಯಾಗಿ ನಿಲ್ಲುವ ಸಾಮಾಜಿಕ ಜವಾಬ್ದಾರಿ ತೋರಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಹಲವು ಕವಿಗಳು ಕವನ ವಾಚನ ಮಾಡಿದರು.

ರೈತಬಂಧು ಮಂಡ್ಯ ಫೌಂಡೇಶನ್ನಿನ ಪ್ರಧಾನ ಕಾರ್ಯದರ್ಶಿ ಎಂ.ಎನ್. ಶಿವಕುಮಾರ್ ಆರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆನರಾ ಬ್ಯಾಂಕಿನ ನಿವೃತ್ತ ಹಿರಿಯ ಶಾಖಾ ವ್ಯವಸ್ಥಾಪಕ ಹೆಚ್.ಕೆ. ಚಂದ್ರಹಾಸ, ಕವಯತ್ರಿ ಹಾಗೂ ಶಿಕ್ಷಕಿ ಮಮತಾ ಪ್ರವೀಣ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಮಾತನಾಡಿದರು. ಫೌಂಡೇಶನ್ನಿನ ಪದಾಧಿಕಾರಿಗಳು ಸಾಗರ್, ಕಾವ್ಯ, ನಾರಾಯಣಸ್ವಾಮಿ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!