Thursday, September 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪೌರಕಾರ್ಮಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ: ಪ್ರಕಾಶ್

ಪೌರ ಕಾರ್ಮಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಆಗ ಮಾತ್ರ ನಗರ ಸುಂದರವಾಗಿ ಕಾಣಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಪ್ರಕಾಶ್ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಹಾಗೂ ಶ್ರಮಜೀವಿ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನು ಭಾಗವಹಿಸಿ ಮಾತನಾಡಿದರು.

ಪ್ರತಿ ದಿನ ಬೆಳಗಿನ ಜಾವ ಸ್ವಚ್ಛತೆಗೆ ತೆರಳಿದಾಗ ಹೊಟೇಲ್ ಹಾಗೂ ಟೀ ಅಂಗಡಿಗಳಲ್ಲಿ ಬಳಸುವ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಮಂಡ್ಯ ನಗರಸಭೆಯಲ್ಲಿ 40 ರಿಂದ 50 ಪೌರಕಾರ್ಮಿಕ ಹುದ್ದೆಗಳು ಖಾಲಿ ಇವೆ. ಆ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಹಾಗೇಯೇ ಹೊರಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕು ಎಂಬ ಬೇಡಿಕೆಯನ್ನಿಟ್ಟರು.

ಪೌರ ಕಾರ್ಮಿಕರ ಕ್ಷೇಮಾನಿಧಿಗೆ 2 ಲಕ್ಷ ನೆರವು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ತುಷಾರಮಣಿ ತಮ್ಮ ತಂದೆ ತಾಯಿ ಶಕುಂತಲಾ ವೀರಪ್ಪ ಅವರ ಹೆಸರಿನಲ್ಲಿ ಪೌರಕಾರ್ಮಿಕರ ಕ್ಷೇಮಾನಿಧಿಗೆ  ವೈಯಕ್ತಿಕವಾಗಿ 2 ಲಕ್ಷ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.

ಪೌರ ಕಾರ್ಮಿಕರನ್ನು ಮಾತೃ ಹೃದಯದಿಂದ ಕಾಣಬೇಕು

ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ, ಈ ದಿನ ಪೌರ ಕಾರ್ಮಿಕ ದಿನಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ. ಪೌರ ಕಾರ್ಮಿಕರು ಒಂದು ದಿನ ಒಟ್ಟಿಗೆ ಸೇರಿ ನಿಮ್ಮೆಲ್ಲ ಭಾವನೆಗಳನ್ನು ಹಂಚಿಕೊಳ್ಳಲು ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ವೃತ್ತಿಗೂ ಕೂಡ ಅದರದ್ದೇ ಆದ ಘನತೆ, ಗೌರವ, ಮಹತ್ವ, ಪ್ರಾಮುಖ್ಯತೆ ಇರುತ್ತದೆ. ಅದರಲ್ಲಿ ವಿಶೇಷವಾಗಿ ಪೌರ ಕಾರ್ಮಿಕರ ವೃತ್ತಿಯು ವಿಶೇಷವಾಗಿದ್ದು, ಇವರ ಕೆಲಸವನ್ನ ಯಾವ ವಿಧದಲ್ಲೂ ಅಳೆಯಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕೂಡ ಪೌರ ಕಾರ್ಮಿಕರ ಬಗ್ಗೆ ಅಪಾರವಾದಂತಹ ಗೌರವವನ್ನು ಇಟ್ಟುಕೊಳ್ಳಬೇಕು. ಜೊತೆಗೆ ಅವರನ್ನು ಮಾತೃ ಹೃದಯದಿಂದ ನೋಡಬೇಕು. ಅವರ ಮೇಲೆ ವಿಶೇಷ ಕಾಳಜಿ, ಪ್ರೀತಿಯಿಂದ ಕಾಣಬೇಕು. ವಿಶೇಷ ಗೌರವಕ್ಕೆ ಪಾತ್ರರಾದವರು ಪೌರ ಕಾರ್ಮಿಕರು ಎಂದರು.

ಪೌರಕಾರ್ಮಿಕರ ಗೃಹಭಾಗ್ಯ ಮತ್ತು ಸಂಕಷ್ಟ ಭತ್ಯೆ ಯೋಜನೆ ಸರ್ಕಾರದಿಂದ ಪೌರಕಾರ್ಮಿಕರ ಮನೆ ನಿರ್ಮಾಣಕ್ಕಾಗಿ ರೂ. 7. ಲಕ್ಷ ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಈ ಯೋಜನೆಯಡಿಯಲ್ಲಿ ಒಟ್ಟು 88 ಮನೆಗಳು ನಿರ್ಮಾಣವಾಗಿದ್ದು, 16 ಮನೆಗಳ ನಿರ್ಮಾಣ ನಡೆಯುತ್ತಿದೆ. ಅರ್ಹ ಪೌರ ಕಾರ್ಮಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ. ಖಾಯಂ ಪೌರ ಕಾರ್ಮಿಕರಿಗೆ ರೂ 3,000 ಸಂಕಷ್ಟ ಭತ್ಯೆಯನ್ನು ನೀಡಲಾಗುತ್ತದೆ. ಹೊರಗುತ್ತಿಗೆ ನೌಕರರಿಗೂ ಕೂಡ ಸಂಕಷ್ಟ ಭತ್ಯೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜೊತೆಗೆ ಖಾಲಿಯಿರುವ ಪೌರ ಕಾರ್ಮಿಕ ಹುದ್ದೆಯನ್ನು ಭರ್ತಿ ಮಾಡಲು ಬೇಡಿಕೆ ಇದ್ದು, ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಎಲ್ಲಾ ಪೌರ ಕಾರ್ಮಿಕರು ರಾಷ್ಟ್ರ ಕವಿ ಕುವೆಂಪು ಅವರು ಬರೆದಿರುವ ಜಲಗಾರ ಎಂಬ ನಾಟಕವನ್ನು ಓದಬೇಕು. ಕುವೆಂಪುರವರು ಅದರಲ್ಲಿ ಇಡೀ ಸಮಾಜವನ್ನು ಸ್ವಚ್ಛಗೊಳಿಸುವವರು ಕೆಲಸ ಹಾಗೂ ಇಡೀ ಜಗತ್ತನ್ನು ಕಾಯುವ ದೇವರು ಶಿವನ ಕೆಲಸಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಪೌರ ಕಾರ್ಮಿಕರು ಮೊದಲ ಗೌರವಕ್ಕೆ ಪಾತ್ರರಾಗುತ್ತೀರ ಎಂದರು.

ಪೌರ ಕಾರ್ಮಿಕರು ಆರೋಗ್ಯದ ಕಾವಲುಗಾರ

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಅಸಿಫ್ ಮಾತನಾಡಿ, ಪೌರ ಕಾರ್ಮಿಕರು ಪ್ರತಿಯೊಬ್ಬರ ಆರೋಗ್ಯದ ಕಾವಲುಗಾರರಾಗಿದ್ದಾರೆ. ಪೌರ ಕಾರ್ಮಿಕರ ಮಕ್ಕಳಿಗೆ ಒಂದು ಹೊತ್ತು ಊಟಕ್ಕೆ ಕೊರತೆಯಾದರೂ ಪರವಾಗಿಲ್ಲ, ಆದರೆ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದ ಕೊರತೆಯಗಬಾರದು. ಇವರು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆಯಬೇಕು. ನಿಮ್ಮ ಹಾಗೂ ನಿಮ್ಮ ಮಕ್ಕಳ ಉಜ್ವಲ ಭವಿಷ್ಯ ಮುಖ್ಯವಾಗಿದ್ದು, ಸರ್ಕಾರದ ಯೋಜನೆಗಳಾದ ಜೀವನ್ ಜ್ಯೋತಿ ಯೋಜನೆ, ಸುರಕ್ಷಾ ಭೀಮಾ ಯೋಜನೆ ಹಾಗೂ ಅಟಾಲ್ ಪಿಂಚಣಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿರುವ ಗಣ್ಯರನ್ನು ಗೌರವಿಸಲಾಯಿತು. ತದನಂತರ ಶ್ರಮಜೀವಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಜಾಗೃತಿ ಜಾಥಾ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆಯಿಂದ ವಿವಿ ರಸ್ತೆ, ಆರ್.ಪಿ. ರಸ್ತೆ ಮೂಲಕ ಅಂಬೇಡ್ಕರ್ ಭವನದವರೆಗೂ ಪೂಜಾ ಕುಣಿತ, ನಗಾರಿ, ಡೊಳ್ಳುಕುಣಿತದೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ನಗರಸಭೆ ಅಧ್ಯಕ್ಷ ಪ್ರಕಾಶ್ (ನಾಗೇಶ್) ಜಾಥಾಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ನಗರಸಭೆಯ ಉಪಾಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಎಂ ಎಸ್ ಮಂಜು, ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ ಬಿ ನಾಗಣ್ಣಗೌಡ, ನಗರಸಭೆ ಆಯುಕ್ತ ಕೃಷ್ಣಕುಮಾರ್, ನಗರಸಭೆ ಎಂಜಿನಿಯರ್‌ಗಳಾದ ರುದ್ರೇಗೌಡ, ನಗರಸಭೆ ಸದಸ್ಯರುಗಳಾದ ಮಂಜುಳಾ, ಮೀನಾಕ್ಷಿ, ಶ್ರೀಧರ್, ರವಿಕುಮಾರ್, ಪುಟ್ಟಸ್ವಾಮಿ, ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!