Monday, September 16, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ಪುರಸಭೆ ಪಕ್ಷೇತರರ ಪಾಲು| ಅಧ್ಯಕ್ಷರಾಗಿ ಪುಟ್ಟಸ್ವಾಮಿ, ಉಪಾಧ್ಯಕ್ಷರಾಗಿ ಬಸವರಾಜು ಆಯ್ಕೆ

ಮಳವಳ್ಳಿ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯ ಎನ್.ಬಸವರಾಜು(ಜಯಸಿಂಹ) ಆಯ್ಕೆಯಾದರು.

ಮಳವಳ್ಳಿ ಪುರಸಭೆಯು 23 ಸದಸ್ಯರನ್ನು ಹೊಂದಿದ್ದು, ಜೆಡಿಎಸ್ ನಿಂದ 9, ಕಾಂಗ್ರೆಸ್ ನಿಂದ 5, ಬಿಜೆಪಿಯಿಂದ ಇಬ್ಬರು ಹಾಗೂ ಪಕ್ಷೇತರವಾಗಿ 7 ಜನ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಎಂ.ಆರ್.ರಾಜಶೇಖರ್ ಹಾಗೂ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಾದ ಎಸ್.ಕವಿತಾ ಕೃಷ್ಣ, ಎಂ.ಎನ್.ಶಿವಸ್ವಾಮಿ ಹಾಗೂ ಪಕ್ಷೇತರ ಎನ್.ಬಸವರಾಜು ನಾಮಪತ್ರ ಸಲ್ಲಿಸಿದ್ದರು. ಎಸ್.ಕವಿತಾ ಕೃಷ್ಣ ನಾಮಪತ್ರ ತಿರಸ್ಕೃತವಾಯಿತು.

ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 4ನೇ ವಾರ್ಡ್ ನ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಪರವಾಗಿ ಜೆಡಿಎಸ್ ನ ಏಳು ಮಂದಿ, ಬಿಜೆಪಿಯ ಇಬ್ಬರು ಹಾಗೂ ನಾಲ್ವರು ಪಕ್ಷೇತರರು ಮತ ಚಲಾಯಿಸಿದರು. 14 ಮತ ಪಡೆದ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ನ ಎಂ.ಆರ್.ರಾಜಶೇಖರ್ ಅವರಿಗೆ ಕಾಂಗ್ರೆಸ್ ನ ಐವರು, ಜೆಡಿಎಸ್ ಹಾಗೂ ಪಕ್ಷೇತರ ತಲಾ ಇಬ್ಬರು ಸದಸ್ಯರು ಮತ ನೀಡಿದರು. 15 ಮತ ಪಡೆದ ಎನ್.ಬಸವರಾಜು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, 8 ಮತ ಗಳಿಸಿದ ಎಂ.ಎನ್.ಶಿವಸ್ವಾಮಿ ಪರಾಭವಗೊಂಡರು.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಕೆ.ಎನ್.ಲೋಕೇಶ್ ಹಾಗೂ ಸಹಾಯಕರಾಗಿ ಗ್ರೇಡ್-2 ತಹಶೀಲ್ದಾರ್ ಬಿ.ವಿ.ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಕಾರ್ಯನಿರ್ವಹಿಸಿದರು. ಮತದಾನದ ಹಕ್ಕು ಹೊಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗೈರಾಗಿದ್ದರು.

ನೂತನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಜೆಡಿಎಸ್-ಬಿಜೆಪಿ ಮುಖಂಡರ ಹಾಗೂ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎಲ್ಲರ ಸಹಕಾರ ಪಡೆದು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಪುರಸಭೆಯ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಸಹಕಾರ ಪಡೆಯಲಾಗುವುದು ಎಂದು ಹೇಳಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮಳವಳ್ಳಿ ಪುರಸಭೆಯಲ್ಲಿ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಜಿ.ಮುನಿರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್ ಮಾತನಾಡಿದರು. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಪುರಸಭೆ ಸದಸ್ಯರಾದ ಎಂ.ಎನ್.ಕೃಷ್ಣ, ಟಿ.ನಂದಕುಮಾರ್, ರವಿ, ಎಂ.ಟಿ.ಪ್ರಶಾಂತ್, ಆರ್.ಎನ್.ಸಿದ್ದರಾಜು, ಪಿ.ಕುಮಾರ್, ನಾಗೇಶ್, ನೂರುಲ್ಲಾ, ಸವಿತಾ, ಮಣಿ, ರಾಧಾ ನಾಗರಾಜು, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!