ಟಿವಿ ಧಾರಾವಾಹಿ ಮತ್ತು ಸಿನಿಮಾ ಹಾವಳಿಯ ನಡುವೆಯೂ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಉಳಿದಿರುವುದು ಶ್ಲಾಘನೀಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿ ರಂಗನಾಥಪುರ- ಹರಪನಹಳ್ಳಿ ಕ್ರಾಸ್ ವೃತ್ತದಲ್ಲಿ ಶ್ರೀ ಗವಿರಂಗನಾಥಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿಯವರು ಆಯೋಜಿಸಿದ್ದ ಹಸ್ತಿನಾವತಿಯ ರತ್ನ ಸಿಂಹಾಸನ ಅಥವಾ ಕುರುಕ್ಷೇತ್ರ ಪೌರಾಣಿಕ ನಾಟಕದ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಟಕಗಳು ಮನುಷ್ಯನ ಜೀವನ ನಿರ್ವಹಣೆ ಹಾಗೂ ಬದುಕುವ ಸನ್ಮಾರ್ಗವನ್ನು ತಿಳಿಸಿಕೊಡುತ್ತಿವೆ. ಸತ್ಯ, ನ್ಯಾಯ ನೀತಿ ಧರ್ಮಕ್ಕೆ ಎಂದಿಗೂ ಒಳ್ಳೆಯದೇ ಆಗುತ್ತದೆ. ದ್ವೇಷ, ಅಸೂಯೆ, ಮೋಸ ವಂಚನೆಗೆ ಯಾವತ್ತೂ ಉಳಿಗಾಲವಿಲ್ಲ ಎಂಬ ಸಂದೇಶಗಳನ್ನು ಸಮುದಾಯಕ್ಕೆ ತಿಳಿಸಿಕೊಡುತ್ತವೆ ಎಂದರು.
ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಮಾತನಾಡಿ, ಜನಸಾಮಾನ್ಯರು ನಾಟಕದಲ್ಲಿ ಬರುವ ಉತ್ತಮ ಪಾತ್ರಗಳ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಉತ್ತಮ ಎಂದರು.
ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಮಾತನಾಡಿಮ ಕಲೆ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಬೆಳೆಸಬೇಕು. ಕಲೆಗೆ ಜಾತಿ ಧರ್ಮಗಳ ಹಂಗಿಲ್ಲ. ಉತ್ತಮ ಕಲಾವಿದರನ್ನು ಸಮಾಜ ಜಾತಿಯ ಚೌಕಟ್ಟು ಮೀರಿ ಗೌರವಿಸುತ್ತದೆ. ಧಾರಾವಾಹಿ ಹಾಗೂ ಸಿನಿಮಾ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳು ಇಂದಿಗೂ ಜನಾಕರ್ಷಣೆ ಉಳಿಸಿಕೊಂಡಿವೆ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ಜಾನಕೀರಾಂ, ಟಿಎಪಿಸಿಎಂಎಸ್ ಉಪಾದ್ಯಕ್ಷೆ ಸುಕನ್ಯಾ ಲಕ್ಷ್ಮಣ್, ಪುರಸಭಾ ಸದಸ್ಯ ಡಿ ಪ್ರೇಂಕುಮಾರ್, ತಾ.ಪಂ.ಮಾಜಿ ಸದಸ್ಯ ಮಾಧವ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಹೆತ್ತುಗೋನಹಳ್ಳಿ ನಾರಾಯಣಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿರಮೇಶ್, ಶಿಕ್ಷಕರಾದ ಪಿ ಜೆ ಕುಮಾರ್, ಬಂಡಿಹೊಳೆ ಕೃಷ್ಣಮೂರ್ತಿ, ಯೋಗೇಶ್, ಅಗ್ರಹಾರಬಾಚಹಳ್ಳಿ ಎ.ಬಿ. ಕುಮಾರ್ ಉಪಸ್ಥಿತರಿದ್ದರು.




