Sunday, September 8, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳ ಅಪೌಷ್ಟಿಕತೆಯೂ… ಅಜೀಂ ಪ್ರೇಮ್‌ ಜೀ ಫೌಂಡೇಷನ್ನೂ….

ಶಾಲಾ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿದ ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‌ ಜೀ ನಡೆ ಈ ದೇಶದ ಹಿಂದೂ-ಮುಸ್ಲಿಂ ಸೌಹಾರ್ದ ಪರಂಪರೆಗೆ ಭದ್ರವಾದ ಅಡಿಪಾಯ ಹಾಕಿದೆ ಎಂದರೆ ತಪ್ಪಾಗಲಾರದು.

ಕಳೆದ ಹತ್ತು ವರ್ಷಗಳಿಂದೀಚೆಗೆ ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ಸೌಹಾರ್ದತೆ ಬೆಸೆಯುವ ಬದಲು ಅವರ ನಡುವೆ ದ್ವೇಷದ ಕಿಡಿ‌ ಹೊತ್ತಿಸುವ ಘಟನೆಗಳು ಸಾಕಷ್ಟು ನಡೆದಿದೆ. ಇಂದು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿ ದ್ವೇಷದ ಬೆಂಕಿ ಹಚ್ಚಲು ಮಾಧ್ಯಮಗಳು ಕಾಯುತ್ತಾ ಇರುತ್ತವೆ. ಕಳೆದ ಹತ್ತು ವರ್ಷಗಳಿಂದೀಚೆಗೆ ಹಿಂದೂ-ಮುಸ್ಲಿಂರ ನಡುವಿನ ಸೌಹಾರ್ದತೆಯ ಸಂಬಂಧ ಮೊದಲಿನಂತಿಲ್ಲ. ಮುಸ್ಲಿಮರನ್ನು ಸದಾ ಸಂಶಯದಿಂದ ನೋಡುವ,ಮುಸ್ಲಿಮರೆಂದರೆ ಕೊಂಕು ನೋಟ ಬೀರುವ ಸಂದರ್ಭಗಳೇ ಹೆಚ್ಚಾಗಿವೆ. ಹಿಂದೂ-ಮುಸ್ಲಿಮರ ನಡುವಿನ ಕಂದಕ ಹೆಚ್ಚಾಗುವಲ್ಲಿ ಆಳುವ ಸರ್ಕಾರಗಳು ಹಾಗೂ ಮಾಧ್ಯಮಗಳ ಪಾತ್ರ ಮಹತ್ವದ್ದು.

ಬಿಜೆಪಿ ಅಧಿಕಾರ ನಡೆಸುತ್ತಿರುವ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ‘ಕಾವಡ್’ ಯಾತ್ರೆಯ ಮಾರ್ಗದಲ್ಲಿರುವ ತಿಂಡಿ-ತಿನಿಸು, ಹಣ್ಣು ಮಾರುವ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತಿತರ ವಿವರಗಳನ್ನು ಮಳಿಗೆಗಳ ಮುಂದೆ ಪ್ರದರ್ಶಿಸುವಂತೆ ಮುಸ್ಲಿಂ ಸಮುದಾಯವನ್ನು ಗುರಿ ಮಾಡಿಕೊಂಡೇ ಆದೇಶ ಹೊರಡಿಸಿದೆ .ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಇಂತಹ ವಿಷಮ ಪರಿಸ್ಥಿತಿಯಿರುವ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷದ ಬದಲು ಸೌಹಾರ್ದತೆ ಬೆಸೆಯುವ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂತೋಷದ ಸಂಗತಿ.

ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯಾತ ಮುಸ್ಲಿಮರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಬ್ರಿಟಿಷರ ಬೂಟು ನೆಕ್ಕುತ್ತಾ ಅವರಿಗೆ ಸಹಕರಿಸಿದ ಸಂಘಟನೆಯವರು ಇಂದು ಉಗ್ರ ಹಿಂದುತ್ವದ ಭಾಷಣ ಬಿಗಿಯುತ್ತಾ,ನಾವೇ ಅಪ್ರತಿಮ ದೇಶ ಪ್ರೇಮಿಗಳು ಎಂಬಂತೆ ಮೆರೆಯುತ್ತಿದ್ದಾರೆ. ಹಿಂದೂ-ಮುಸ್ಲಿಂರ ನಡುವೆ ದ್ವೇಷದ ಬೆಂಕಿ ಹಾಕಿ ತಮ್ಮ‌ ಸ್ವಾರ್ಥ ಸಾಧಿಸುತ್ತಿರುವ ಜನರ ಮಧ್ಯೆ ವಿಪ್ರೋ ಅಜೀಂ ಪ್ರೇಮ್‌ ಜೀ  ಅವರಂತಹವರು ತಮ್ಮ ಸಂಪಾದನೆಯ ದೊಡ್ಡ ಭಾಗವನ್ನು ಸಮಾಜ ಸೇವೆಗೆ ಬಳಸುತ್ತಿದ್ದಾರೆ. ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ಪೂರೈಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ‘ಅಜೀಂ ಪ್ರೇಮ್‌ಜೀ ಫೌಂಡೇಷನ್’ ಕೈಜೋಡಿಸಿದೆ.

ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡುತ್ತಿರುವ ತಮ್ಮ ಅಜೀಂ ಪ್ರೇಮ್‌ಜೀ ಫೌಂಡೇಷನ್‌
ಮೂಲಕ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ₹1,500 ಕೋಟಿ ದೇಣಿಗೆ ನೀಡುತ್ತಿರುವುದು ಅವರ ಬಗೆಗಿನ ಗೌರವ ಹಾಗೂ ಅಭಿಮಾನವನ್ನು ಹೆಚ್ವಿಸಿದೆ. ವಾರದಲ್ಲಿ ಎರಡು ದಿನಗಳ ಮೊಟ್ಟೆ ವೆಚ್ಚವನ್ನು ಸರ್ಕಾರ ಹಾಗೂ ನಾಲ್ಕು ದಿನಗಳ ವೆಚ್ಚವನ್ನು ಅಜೀಂ ಪ್ರೇಂಜಿ ಫೌಂಡೇಷನ್ ಭರಿಸಲಿದೆ.

ಈ ದೇಶದ ಎರಡನೇ ಅತಿ ದೊಡ್ಡ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ 5 ಸಾವಿರ‌ ಕೋಟಿ ಖರ್ಚು ಮಾಡಿ ತನ್ನ ಮಗನ ಮದುವೆ ಮಾಡಿ ದೇಶ-ವಿದೇಶಗಳ‌ ಶ್ರೀಮಂತ ಮಿತ್ರರಿಗೆ, ರಾಜಕಾರಣಿಗಳಿಗೆ,ಸಿನಿಮಾ ತಾರೆಯರಿಗೆ, ಕ್ರೀಡಾಪಟುಗಳಿಗೆ ಬಗೆಬಗೆಯ ಭಕ್ಷ್ಯ ಭೋಜನ,ದುಬಾರಿ ಉಡುಗೊರೆ ನೀಡಿದರೆ, ಅದನ್ನು ಕಣ್ಣಿಗೊತ್ತಿಕೊಂಡು‌ ಸುದ್ದಿ ಮಾಡಿದ ಮಾಧ್ಯಮಗಳು, ಪ್ರಪಂಚದ ಅತ್ಯಂತ ದುಬಾರಿ ಮದುವೆ ಅಂತ ಪ್ರಚಾರ ಮಾಡಿದವು.

ಆದರೆ ಮುಸ್ಲಿಂ ಸಮುದಾಯದ ವ್ಯಕ್ತಿ ಅಜೀಂ ಪ್ರೇಮ್‌ ಜೀ ಕರ್ನಾಟಕದ ಸರಕಾರಿ ಶಾಲೆಯ 55 ಲಕ್ಷ ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ ವಾರದ ಆರು ದಿನ ಮೊಟ್ಟೆ ನೀಡಲು ₹1500 ಕೋಟಿ ರೂಪಾಯಿ ಹಣ ನೀಡಿದರೆ ಅದರ ಬಗ್ಗೆ ಸುದ್ದಿ ಆಗಲೇ ಇಲ್ಲ. ಆದರೆ ಅಂಬಾನಿ ಮಗನ ಮದುವೆ ಬಗ್ಗೆ ದಿನ ನಿತ್ಯ‌ ಒಂದಲ್ಲಾ ಒಂದು ಸುದ್ದಿ ಮಾಡುತ್ತಾ ಪೈಪೋಟಿ ನಡೆಸಿದ್ದವು. ಇದು ಮಾಧ್ಯಮಗಳ ವೃತ್ತಿಪರತೆ ಯಾರ ಪರ ಎಂಬುದನ್ನು ನಿಸ್ಸಂದೇಹವಾಗಿ ಸಾಬೀತು ಪಡಿಸಿದವು.

ಆದರೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಜೀಂ ಪ್ರೇಮ್‌ ಜೀ ಯವರ ಉದಾರ ಗುಣ ಮಾಧ್ಯಮಗಳಲ್ಲಿ ಬರದಿದ್ದರೇನಂತೆ. ಸಾಮಾಜಿಕ ಜಾಲತಾಣಗಳು ಹಾಗೂ ಜನಪರ ಮಾಧ್ಯಮಗಳಲ್ಲಿ ಈ ಸುದ್ದಿ ಮಹತ್ವದ ಸುದ್ದಿಯಾಗಿ ಸೌಹಾರ್ದತೆ ಬಯಸುವ ಜನರ ಮನಸ್ಸು ಮುಟ್ಟಿದೆ. ರಾಜ್ಯ ಸರ್ಕಾರ ಅಜೀಂ ಪ್ರೇಮ್‌ ಜೀ ಅವರ ಈ ನೆರವನ್ನು ಸರಿಯಾಗಿ ಬಳಸಿಕೊಂಡು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಅಪೌಷ್ಟಿಕತೆ ನಿವಾರಿಸಿ,ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಿ.ಅಜೀಂ ಪ್ರೇಂಜಿ ಅಂತಹ ಜನರ ಸಂಖ್ಯೆ ಅಸಂಖ್ಯವಾಗಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!