ಅಮೆರಿಕದ ಅಕ್ಕ ಸಂಸ್ಥೆಯ 25ನೇ ಬೆಳ್ಳೀ ಮಹೋತ್ಸವ ಸಂಭ್ರಮದ ಹಿನ್ನೆಲೆ ಅ.19ರಂದು ಮಂಡ್ಯನಗರದಲ್ಲಿ ‘ಅಕ್ಕ ಚಾರಿಟಿ ಓಟ – ಅಮ್ಮನ ನಾಡಿನ ಅಕ್ಕರೆಯ ನಂಟು’ 5k ವಾಕಥಾನ್ ಅನ್ನು ಆಯೋಜಿಸಲಾಗಿದೆ ಎಂದು ಅಕ್ಕ(ಅಮೆರಿಕ ಕನ್ನಡಿಗರ ಕೂಟಗಳ ಆಗರ) ಸಂಸ್ಥೆಯ ಅಧ್ಯಕ್ಷ ಮಧು ರಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7 ಗಂಟೆಗೆ ನಗರದ ಎಸ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರನ್ ಮತ್ತು ವಾಕಥಾನ್ಗೆ ಚಾಲನೆ ದೊರೆಯಲಿದೆ. ಕನ್ನಡಿಗರ ಏಕತೆ, ಆರೋಗ್ಯ ಜಾಗೃತಿ, ಸಾಮಾಜಿಕ ಸೇವೆಯ ಸಂದೇಶವನ್ನು ಜನರಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಜತೆಗೆ ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಷನ್ ಸಹಯೋಗದೊಂದಿಗೆ `ಹುಲಿಯ ಹೆಜ್ಜೆಯಿಂದ ಕಾಡಿನ ಅಭಿವೃದ್ಧಿ ಮತ್ತು ನದಿ ಜೀವಂತ. ಇದರಿಂದ ನಮ್ಮ ಬದುಕು’ ಎಂಬ ಉದ್ದೇಶದಿಂದ `ವನ್ಯಜೀವ ಉಳಿಸುವುದು ಐಷಾರಾಮವಲ್ಲ, ಜೀವನಸಾರ’ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಲಾಗುತ್ತಿದೆ ಎಂದರು.
ಆದಿಚುಂಚನಗಿರಿ ಪೀಠಾಧಿಪತಿಗಳಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಲಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟನೆ ಮಾಡುವರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರ ಪಿ.ರವಿಕುಮಾರ್ಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಕ್ಕ ಸಂಸ್ಥೆಯ ಟ್ರಸ್ಟ್ ಅಧ್ಯಕ್ಷ ಅಮರನಾಥಗೌಡ, ಸಂಸ್ಥೆಯ ಮಾಜಿ ಅಧ್ಯಕ್ಷ ದಯಾಶಂಕರ್ ಅಡಪ್ಪ, ಕಾರ್ಯದರ್ಶಿ ಡಾ.ನವೀನ್ಕೃಷ್ಣ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರನ್ ಮತ್ತು ವಾಕಥಾನ್ನಲ್ಲಿ 16 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. ಸರ್.ಎಂ.ವಿ ಕ್ರೀಡಾಂಗಣದಿಂದ ಆರಂಭವಾಗುವ ವಾಕಥಾನ್ ಜೆ.ಸಿ.ವೃತ್ತ, ಪ್ರವಾಸಿ ಮಂದಿರ, ಪಿಇಎಸ್ ಎಂಜಿನಿಯರಿAಗ್ ಕಾಲೇಜು, ಬನ್ನೂರು ರಸ್ತೆ, ನೂರಡಿ ರಸ್ತೆ ಹೊಸಹಳ್ಳಿ ವೃತ್ತ, ವಿ.ವಿ ರಸ್ತೆ, ಗಾಂಧಿಭವನ ಮಾರ್ಗವಾಗಿ ಸ್ಟೇಡಿಯಂ ಸೇರಲಿದೆ. ಓಟದಲ್ಲಿ ಚಲನಚಿತ್ರ ನಟರಾದ ನೆನಪಿರಲಿ ಪ್ರೇಮ್, ಅಮೃತ ಪ್ರೇಮ್, ಸಾನ್ಯ ಐಯ್ಯರ್, ನವೀನ್ ಸಜ್ಜು, ಸಿರಿ ಪ್ರಭಾಕರ್, ಪ್ರಭಾಕರ್ ಬೋರೇಗೌಡ ಇತರರು ಪಾಲ್ಗೊಳ್ಳುವರು ಎಂದು ವಿವರಿಸಿದರು.
ಹೆಚ್ಚಿನ ಮಾಹಿತಿಗೆ ಎಂ.ಆರ್.ಸವಿತಾ: 7349769868, ಬಾಬು ಗಂಗಾಡ್ಕರ್: 9448047563, ಸಂಜಯ್: 7022015999, ಚಂದ್ರು ಕಲ್ಲಹಳ್ಳಿ: 9448356727, ರವಿಶಂಕರ್ ಗೌಡ: 9448268107 ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕೀಲಾರ, ನಿರ್ದೇಶಕ ಬಸವರಾಜು, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಮಂಡ್ಯ ಸಭಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ, ವೈಲ್ಡ್ ಲೈಫ್ ಕನ್ಸರ್ವೇಷನ್ ಪೌಂಡೇಷನ್ನ ವ್ಯವಸ್ಥಾಪಕ ಟ್ರಸ್ಟಿಗಳಾದ ರಾಜಕುಮಾರ್, ಶ್ರೀನಿವಾಸ್, ವಿನೋದ್ ಇದ್ದರು.




