ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಗೆ ಶನಿವಾರ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಛೇರಿಯಲ್ಲಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸ್ವೀಕೃತ ಅಹವಾಲುಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಪಂಚಾಯತ್ ರಾಜ್ ಇಲಾಖೆಯಿಂದ ಜಾರಿಗೊಳಿಸಲಾಗುತ್ತಿರುವ ಹೊಸ ಇ(e) ಸ್ವತ್ತು ಕಾರ್ಯವಿಧಾನವನ್ನು ಕಂದಾಯ ಇಲಾಖೆಯ ಸಿಬ್ಬಂದಿಗಳು ಸಕಾಲದಲ್ಲಿ ಜಾರಿಗೂಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶ್ರೀರಂಗನಾಥ ದೇವಾಲಯದಲ್ಲಿ ನಿಗದಿಯಾಗಿರುವ ಸಹಸ್ರ ಕಲಶಾಭಿಷೇಕ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ಸೂಚಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರುಗಳ, ಉಪ ತಹಶೀಲ್ದಾರ್ ಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಆಧಾರ್ ಸೀಡಿಂಗ್, ಇ-ಪೌತಿ ಖಾತಾ ಆಂದೋಲನ, ನಮೂನೆ 1 ರಿಂದ 5, ಗೈರು ವಿಲೆ ಕಡತ, ಸಕಾಲ, ನ್ಯಾಯಾಲಯಗಳ ಪ್ರಕರಣಗಳು, ಒತ್ತುವರಿ ತೆರವು, ಭೂ ಸುರಕ್ಷ, 11ಇ ತಿದ್ದುಪಡಿ, ಬಗರ್ ಹುಕ್ಕುಂ ಅರ್ಜಿಗಳ ವಿಲೇವಾರಿ, ಹಕ್ಕು ಪತ್ರಗಳ ವಿತರಣೆಗಳ ಪ್ರಗತಿ ಪರಿಶೀಲನೆ ಮಾಡಿ ಶೀಘ್ರಗತಿ ಉತ್ತಮ ಪ್ರಗತಿ ಸಾಧಿಸಲು ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು
ಕಛೇರಿಯಲ್ಲಿ ಬಾಕಿಯಿರುವ ನ್ಯಾಯಾಲಯ ಪ್ರಕರಣಗಳ ಬಾಬ್ತು ತುರ್ತಾಗಿ ಕ್ರಮವಹಿಸುವುದರ ಜೊತೆಗೆ ಹಿಂಬಾಲಿಕಾ ಕ್ರಮವಹಿಸಿ, ಈ ಕಛೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಬಾಕಿಯಿರುವ ರಿಟ್ ಪಿಟಿಷನ್ ಪ್ರಕರಣಗಳ ಬಾಬ್ತು ಶೀಘ್ರವೇ ಮಾನ್ಯ ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರವನ್ನು ಸಲ್ಲಿಸುವಂತೆ ಸೂಚಿಸಿದರು. ಬಾಕಿಯಿರುವ ಲೋಕಾಯುಕ್ತ ಪ್ರಕರಣಗಳ ಬಾಬ್ತು ಜರೂರಾಗಿ ಮಾನ್ಯ ಲೋಕಾಯುಕ್ತರಿಗೆ ವರದಿ ಸಲ್ಲಿಸುವಂತೆ ತಹಶೀಲ್ದಾರ್ ರವರಿಗೆ ಸೂಚಿಸಿದರು.
ಪ್ರಕೃತಿ ವಿಕೋಪ, ಆಕಸ್ಮಿಕ ಹಾಗೂ ಇತರೆ ರೀತಿಯ ವಿಕೋಪಗಳಲ್ಲಿ ಬಾಧಿತರಾದವರಿಗೆ ತುರ್ತಾಗಿ ಪರಿಹಾರ ಪಾವತಿ ಮಾಡುವಲ್ಲಿ ಶೀಘ್ರವೇ ಕ್ರಮವಹಿಸುವಂತೆ ಸೂಚಿಸಿದರು. ಇ-ಆಫೀಸ್ ಬಾಕಿಯನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು. ಸಾರ್ವಜನಿಕರ ಅನಗತ್ಯ ಅಲೆದಾಟಕ್ಕೆ ಆಸ್ಪದ ನೀಡದೇ, ತುರ್ತಾಗಿ ಅರ್ಜಿಗಳ ವಿಲೇವಾರಿಯಲ್ಲಿ ಕ್ರಮವಹಿಸುವಂತೆ ಕಛೇರಿಯ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯರು ಎಚ್ಚರಿಕೆ ನೀಡಿದರು. ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಭೂಹಿಡುವಳಿ ಪ್ರಮಾಣ ಪತ್ರ, ವಂಶವೃಕ್ಷ ಹಾಗೂ ಇತರೆ ಎಲ್ಲಾ ರೀತಿಯ ಸೇವೆಗಳನ್ನು ಸಕಾಲದಲ್ಲಿ ನಿಗದಿಪಡಿಸಿರುವ ಅವಧಿಯಲ್ಲಿಯೇ ಕಡ್ಡಾಯವಾಗಿ ಒದಗಿಸತಕ್ಕದ್ದು, ತಪ್ಪಿದ್ದಲ್ಲಿ ಅಂತಹ ನೌಕರರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಲಾಗುವುದು ಎಂದು ನೌಕರರಿಗೆ ಎಚ್ಚರಿಕೆ ನೀಡಿದರು.
ಕಛೇರಿಯ ಅಭಿಲೇಖಾಲಯ ಶಾಖೆಯನ್ನು ಪರಿಶೀಲಿಸಿದ ಮಾನ್ಯರು, ಯಾವುದೇ ಸಾರ್ವಜನಿಕರು ದಾಖಲಾತಿಗಳನ್ನು ಕೋರಿ ಅರ್ಜಿ ಸಲ್ಲಿಸಿದಾಗ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿಕೊಂಡೇ ದಾಖಲಾತಿಗಳನ್ನು ನೀಡತಕ್ಕದ್ದು ಎಂದು ಸೂಚಿಸಿದರು.




