Friday, September 20, 2024

ಪ್ರಾಯೋಗಿಕ ಆವೃತ್ತಿ

ಶಾಂತಿ ಕದಡುವ ಕೋಮುಶಕ್ತಿಗಳ ವಿರುದ್ದ ಫೆ.7ಕ್ಕೆ ”ಮಂಡ್ಯ ಬಂದ್”

ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲೆಯ ಸೌಹಾರ್ದ ಪರಂಪರೆಗೆ ಮಸಿ ಬಳಿದು, ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಫೆ.7 ರಂದು ಮಂಡ್ಯ ಬಂದ್ ನಡೆಸಲಾಗುವುದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ತಿಳಿಸಿದರು.

ಫೆಬ್ರವರಿ 7 ರಂದು ಮಂಡ್ಯ ನಗರವನ್ನು ಸ್ವಯಂಪ್ರೇರಿತ ಬಂದ್ ಮಾಡಲಾಗುವುದು, ರಾಷ್ಟ್ರಧ್ವಜವನ್ನು ಹಿಡಿದು ಬೃಹತ್ ಮೆರವಣಿಗೆ ನಡೆಸಿ ಶಾಂತಿ ಮತ್ತು ಸೌಹಾರ್ದ ಕಾಪಾಡಿಕೊಳ್ಳಲು ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಹಾಗಾಗಿ ಎಲ್ಲಾ ಜಾತ್ಯಾತೀತ, ಶಾಂತಿಪ್ರಿಯ, ಸೌಹಾರ್ದ ಬಯಸುವ ಜನತೆ ಈ ಬಂದ್ ಬೆಂಬಲಿಸಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರಾದ ನಾಗಣ್ಣಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಪ್ರಾಂತ ರೈತಸಂಘದ ಮುಖಂಡ ಕೃಷ್ಣೇಗೌಡ ಮಾತನಾಡಿ, ಕೆರಗೋಡು ಧ್ವಜ ಪ್ರಕರಣದಲ್ಲಿ ಶಾಸಕರು ಸೇರಿದಂತೆ ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೆ ಎಲ್ಲರ ಮೇಲೂ ಕ್ರಮವಾಗಬೇಕು. ನಾವು ಯಾವುದೇ ಧ್ವಜಕ್ಕೆ ವಿರೋಧ ಮಾಡುತ್ತಿಲ್ಲ. ಒಂದು ಸಮುದಾಯದ ಧ್ವಜ ಹಾಕಿ ಗಲಭೆ ಉಂಟು ಮಾಡುವ ಬದಲು ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಬೇಕಿತ್ತು ಎನ್ನುವ ಜವಬ್ದಾರಿ ಮುಖ್ಯವಾಗಬೇಕಿತ್ತು. ಒಕ್ಕಲಿಗ ಯುವಕರನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿದೆ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಬದಲು ಜನರ ಭಾವನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಖಂಡಿಸುತ್ತೇವೆ ಎಂದರು.

ವಕೀಲ ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, ಕಾನೂನು ಮುರಿಯುವ ಮತ್ತು ಶಾಂತಿ ಕದಡುವ ಶಕ್ತಿಗಳ ಮೇಲೆ ಮಂಡ್ಯ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ವಿಕೃತ ಮನಸ್ಸಿನ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕುರುಬ ಸಮುದಾಯ ನಡೆಸುತ್ತಿರುವ ವಿದ್ಯಾರ್ಥಿ ನಿಲಯದ ಮೇಲೆ ದಾಳಿ ಮಾಡಿದ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಒಂದು ಸಮುದಾಯ ನಡೆಸುವ ಹಾಸ್ಟೆಲ್‌ಗೆ ಅಕ್ರಮವಾಗಿ ನುಗ್ಗಿ ಧಾಂದಲೆ ನಡೆಸಿ ಪ್ಲೆಕ್ಸ್ ಹರಿದು ಹಾಕುವುದು ಪುಂಡಾಟಿಕೆಯ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಕೆಲಸವಾಗಿದೆ.  ಇಂತಹ ಪುಂಡರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕು. ಮಂಡ್ಯ ಜಿಲ್ಲೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಹೋರಾಡಲಿ, ಅದು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡಬಾರದು. ಜನರನ್ನು ಭಾವನಾತ್ಮಕ ವಿಷಯಗಳ ಮೇಲೆ ಕೆರಳಿಸಿ ಬದುಕಿನ ಪ್ರಶ್ನೆಗಳನ್ನು ಮೂಲೆಗೆ ತಳ್ಳುವ ನೀಚ ರಾಜಕಾರಣವನ್ನು ಯಾವುದೇ ಸಂಘಟನೆ ಅಥವಾ ಪಕ್ಷ ಮಾಡಬಾರದೆಂದು ಆಗ್ರಹಿಸಿದರು.

ಮಂಡ್ಯ ಜಿಲ್ಲೆಯ ಹಿಂದೂಗಳಿಗೆ ವಿವೇಕಾನಂದರು, ಒಕ್ಕಲಿಗರಿಗೆ ಕುವೆಂಪು, ಶಂಕರೇಗೌಡರು, ವೀರಣ್ಣಗೌಡರು, ಮಾದೇಗೌಡರು ಮಾದರಿಯಾಗಬೇಕೆ ಹೊರತು ಭಾವನೆಗಳಿಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಕೀಚಕರಲ್ಲ, ಹಾಗಾಗಿ ನಾವೆಲ್ಲಾ ವಿವೇಕಾನಂದರ, ಕುವೆಂಪು, ಶಂಕರೇಗೌಡ, ವೀರಣ್ಣಗೌಡ, ಮಾದೇಗೌಡರ ಹಾದಿಯಲ್ಲಿ ಕೈ, ಹಿಡಿದು ನಡೆಯೋಣ ಎಂದು ಜಿಲ್ಲೆಯ ಯುವಜನರಲ್ಲಿ ಮನವಿ ಮಾಡಿದರು.

ಗೋ‍ಷ್ಠಿಯಲ್ಲಿ ಸಿಐಟಿಯು ಮುಖಂಡರಾದ ಸಿ.ಕುಮಾರಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಸಮಾನ ಮನಸ್ಕರ ವೇದಿಕೆಯ ನರಸಿಂಹಮೂರ್ತಿ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಕನ್ನಡ ಪರ ಸಂಘಟನೆಯ ಹೆಚ್.ಡಿ.ಜಯರಾಂ, ದಸಂಸ ಮುಖಂಡರಾದ ಕೆಂಪಣ್ಣ ಸಾಗ್ಯ, ಎಂ.ವಿ.ಕೃಷ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!