Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಬಂದ್ ಸಂಪೂರ್ಣ ವಿಫಲ| ಸಂಘ ಪರಿವಾರದ ಬಂದ್ ಕರೆಗೆ ಕ್ಯಾರೇ ಎನ್ನದ ಜನತೆ….

ಮಂಡ್ಯ ತಾಲ್ಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಸಂಬಂಧ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಫೆ.9ರ ಮಂಡ್ಯ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ.

ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದ ವಿಚಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮಂಡ್ಯನಗರದ ಜನತೆ ಹಾಗೂ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ಎಂದಿನಂತೆ  ಅಂಗಡಿಗಳನ್ನು ತೆರೆದು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿದರು.

ಶಾಲಾ ಕಾಲೇಜುಗಳು, ಚಿತ್ರಮಂದಿರಗಳು, ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರೆ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಯಾವುದೇ ಅಡೆತಡೆಗಳಿಲ್ಲದೇ ಕಾರ್ಯ ನಿರ್ವಹಿಸಿದರು.

ತಲೆಕೆಡಿಸಿಕೊಳ್ಳದ ಜನಸಾಮಾನ್ಯರು

ಮಂಡ್ಯನಗರದ ಜನತೆ ಹಾಗೂ ಗ್ರಾಹಕರು ಮಂಡ್ಯ ಬಂದ್ ಕರೆಗೆ ತಲೆ ಕೆಡಿಸಿಕೊಂಡಂತೆ ಕಂಡು ಬರಲಿಲ್ಲ, ಎಂದಿನಂತೆ ತಮ್ಮ ಚಟುವಟಿಕೆ ಮುಂದುವರೆಸಿದರು.

ನಿನ್ನೆಯಷ್ಟೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಅಶೋಕ್ ಜಯರಾಂ, ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ನಾವು ಬಂದ್‌ ಅನ್ನು ಬೆಂಬಲಿಸುತ್ತಿಲ್ಲ ಎಂದು ಘೋಷಣೆ ಮಾಡಿದ್ದರು. ಅಲ್ಲದೇ ಮಂಡ್ಯ ನಗರ ಬಂದ್‌ಗೆ ಬಿಜೆಪಿ ಬೆಂಬಲ ನೀಡುವುದಿಲ್ಲ, ರ್‍ಯಾಲಿ ಬೆಂಬಲಿಸುತ್ತೇವೆ ಎಂದಿದ್ದರು.

ಬೆಂಬಲ ನೀಡದ ಜಿಲ್ಲಾ ವಾಣಿಜ್ಯ ಮಂಡಳಿ 

ಮಂಡ್ಯ ನಗರ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್ ತಿಳಿಸಿದ್ದರು.

ಬಂದ್‌ನಿಂದಾಗಿ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುವ ಪರಿಣಾಮ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತದೆ. ಇಂತಹ ಬಂದ್‌ಗೆ ಹಿಂದೆಯೂ ಬೆಂಬಲ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದಿದ್ದರು. ಆದರೆ ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಕರೆ ನೀಡಿರುವ ಫೆ.9ರಂದು ಬಂದ್‌ಗೆ ಸಹಕರಿಸುವಂತೆ ಹಿಂದು ಸಂಘಟನೆ ಕಾರ್ಯಕರ್ತರು ಮನವಿ ಮಾಡಿದ್ದರು, ವ್ಯಾಪಾರಿಗಳು ಇದಕ್ಕೆ ಕ್ಯಾರೇ ಎನ್ನದೇ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗುವ ಮೂಲಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮಂಡ್ಯ ನಗರ ಬಂದ್‌ಗೆ ಸಾರ್ವಜನಿಕರು, ವರ್ತಕರು, ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಬೇಕರಿ ಮಾಲೀಕರು, ಆಟೋ ಚಾಲಕರು ಬೆಂಬಲ ವ್ಯಕ್ತಪಡಿಸದ ಕಾರಣ ಸಂಘಪರಿವಾರ ರ್‍ಯಾಲಿಯನ್ನಷ್ಟೆ ಕೈಗೊಂಡಿತು.

ಬಿಗಿ ಪೊಲೀಸ್ ಬಂದೋಬಸ್ತ್ 

ಸಂಘ ಪರಿವಾರ ಬಂದ್ ಕರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಮುನ್ನೇಚರಿಕೆ ವಹಿಸಿ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!