ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುರುಬ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಕಾರಿಯಾಗಿ ನಿಂದಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬಸರಾಳು ಗ್ರಾಮದಲ್ಲಿ ಮಂಡ್ಯ ಜಿಲ್ಲಾ ಕುರುಬರ ಸಂಘ,ಮಂಡ್ಯ ಜಿಲ್ಲಾ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಸ್ಥಳೀಯರು ನೀಡಿದ್ದ ಕರೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು.
ಬಸರಾಳು ಗ್ರಾಮದಲ್ಲಿ ಬಂದ್ ಗೆ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಸ್ವಯಂ ಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿ ಬಂದ್ ಗೆ ಸಹಕರಿಸಿದರು. ಬಸರಾಳು ಬಂದ್ ಹಾಗೂ ಪ್ರತಿಭಟನೆಯಿಂದಾಗಿ ನಾಗಮಂಗಲ- ಮಂಡ್ಯ ಹೆದ್ದಾರಿ ಸಂಚಾರ ಬಂದ್ ಆಗಿ ಸಂಚಾರ ಅಸ್ತವ್ಯಸ್ತಗೊಂಡಿತು. ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕುರುಬ ಸಮುದಾಯದ ಜನರು ಬಂದ್ ನಲ್ಲಿ ಭಾಗವಹಿಸಿದರು.

ಜೋಡಿ ಟಗರು ಮೆರವಣಿಗೆ
ಬಸರಾಳು ಕನಕ ಭವನದಿಂದ ಪ್ರಮುಖ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೂಲಕ
ಜೋಡಿ ಟಗರುಗಳ ಜೊತೆ ಮೆರವಣಿಗೆ ನೆಡೆಸಿದರು. ಕಾಂಗ್ರೆಸ್ ಮುಖಂಡ ಕೋಡಿಕೊಪ್ಪಲು ನಾಗೇಶ್ ನೇತೃತ್ವದಲ್ಲಿ ಬಂದ್ ನಡೆಸಲಾಯಿತು.
ನಂತರ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವ ಬಸರಾಳು ಗ್ರಾಮದ ಹೇಮಾವತಿ ಬಡಾವಣೆಯ ಶಾನುಭೋಗನಹಳ್ಳಿ ಕುಮಾರ್ ಮತ್ತು ಬೆನ್ನಹಟ್ಟಿಯ ಮಹೇಶ್ ಅವರನ್ನು ಬಂಧಿಸಿ ಅವರ ವಿರುದ್ಧ ಗೂಂಡಾ ಕಾಯ್ದೆ ಮಾಡಿ ಕಾನೂನಿನಲ್ಲಿ ಅತಿ ಹೆಚ್ಚು ಶಿಕ್ಷೆ ನೀಡಬೇಕು. ಬೇರೆ ಯಾರೂ ಸಹ ಯಾವ ಜಾತಿಯವರ ಬಗ್ಗೆ ಏನು ಮಾತನಾಡಬಾರದು ಬೇರೆಯವರಿಗೆ ಪಾಠ ಆಗುವ ರೀತಿ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಬಸರಾಳು ಗ್ರಾಮದಲ್ಲಿ ಒಕ್ಕಲಿಗರು ಹಾಗೂ ಕುರುಬರು ವಿಶ್ವಾಸದಿಂದ ಇದ್ದೇವೆ. ಅವಹೇಳನಕಾರಿಯಾಗಿ ನಿಂದಿಸಿರುವ ಇಂತಹ ಕಿಡಿಗೇಡಿಗಳ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕರಡಿ ಕೊಪ್ಪಲು ಕೆ.ಸಿ.ಪುಟ್ಟಸ್ವಾಮಿಗೌಡ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಮಾಜಕ್ಕೂ ನ್ಯಾಯ ಕೊಡುವವರು ಅವರನ್ನು ಒಕ್ಕಲಿಗರ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

ಕುರುಬ ಸಮಾಜದಲ್ಲಿ ನಾವು ಸಂಗೊಳ್ಳಿರಾಯಣ್ಣ, ಕನಕದಾಸರ ಭಾವಚಿತ್ರ ನೋಡಿದ್ದೇವೆ ಆದರೆ ಸಿದ್ದರಾಮಯ್ಯ ಅವರನ್ನು ಕುರುಬ ಸಮಾಜ ದೇವರ ರೂಪದಲ್ಲಿ ಕಾಣುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರ್ ಹಾಗೂ ಮಹೇಶ್ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಪೊಲೀಸ್ ಠಾಣೆಗೆ ಮುತ್ತಿಗೆ
ನಂತರ ಪ್ರತಿಭಟನಾಕಾರರು ಬಸರಾಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬಂಧಿತ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ತೆರಯುವಂತೆ ಒತ್ತಾಯಿಸಿ ಇಬ್ಬರು ಆರೋಪಿಗಳು ಬಹಿರಂಗ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ
ಗಡಿಪಾರು ಮಾಡಲು ಆಗ್ರಹಿಸಿದರು. ನಂತರ ಪ್ರತಿಭಟನಾಕಾರರನ್ನು ಸಮಧಾನ ಮಾಡಿ ಸಂತೈಸಿದ ಎಎಸ್ಪಿ ತಿಮ್ಮಯ್ಯ ಹಾಗೂ ಗಂಗಾಧರಸ್ವಾಮಿ ಅವರು ಬಂಧಿತ ಆರೋಪಿಗಳ ಮೇಲೆ ಈಗಾಗಲೇ ಗೂಂಡಾ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿರುವುದಾಗಿ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಅಪ್ಪಾಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಕೆ.ಹೆಚ್. ನಾಗರಾಜು, ಮುಡಾ ನಿರ್ದೇಶಕ ಎನ್.ದೊಡ್ಡಯ್ಯ, ಸಾತನೂರು ಕೃಷ್ಣ, ರಾಜೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಸನ್ನ, ಸಿಎಂ ದ್ಯಾವಪ್ಪ, ಬಸರಾಳು ಶಂಕರೇಗೌಡ, ರಾಜು, ಸಾವಿತ್ರಮ್ಮ,ಮಹೇಶ್, ಶೈಲೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.




