‘ಮನಸಾಗಿದೆ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಅಭಯ್ ಚಂದ್ರಶೇಖರ್ ನಾಯಕನಾಗಿ ನಟಿಸಿರುವ ಹೊಸ ಚಿತ್ರ ‘ಮಂಡ್ಯ ಹೈದ’ ನಾಳೆ (ಫೆ.16) ಬೆಳ್ಳಿತೆರೆಗೆ ಬರಲಿದೆ.
ಹೆಸರೇ ಹೇಳುವಂತೆ ಮಂಡ್ಯದಲ್ಲಿ ನಡೆಯುವ ಕಥೆ ಇದಾಗಿದ್ದು, ಪ್ರೀತಿ, ಸ್ನೇಹ, ಸಂಬಂಧದ ಕುರಿತಾದ ಸಿನಿಮಾಗೆ ವಿ.ಶ್ರೀಕಾಂತ್ ಆ್ಯಕ್ಷನ್ -ಕಟ್ ಹೇಳಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಅನ್ನು ಮಂಡ್ಯ ಶಾಸಕ ರವಿಕುಮಾರ್, ಬಿಗ್‌ಬಾಸ್ ವಿಜೇತ ಕಾರ್ತಿಕ್ ಮಹೇಶ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
‘ಮಂಡ್ಯ ಹೈದ’ನ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅಭಯ್, ‘ನಾನಿಲ್ಲಿ ಶಿವ ಎನ್ನುವ ಪಾತ್ರ ಮಾಡುತ್ತಿದ್ದೇನೆ. ಸ್ನೇಹ ಹಾಗೂ ಸ್ನೇಹಿತರಿಗೆ ಪ್ರಾಮುಖ್ಯತೆ ನೀಡುವವನಾದರೂ ಮನಸ್ತಾಪ ಹೇಗೆ ಉಂಟಾಗುತ್ತದೆ, ನಂತರ ಏನಾಗುತ್ತದೆ ಎನ್ನುವುದರ ಸುತ್ತ ಕಥೆ ಸಾಗುತ್ತದೆ’ ಎಂದು ಹೇಳಿಕೊಂಡರು. ಅಭಯ್ ಗೆ ಜೋಡಿಯಾಗಿ ಭೂಮಿಕಾ ಕಾಣಿಸಿಕೊಂಡಿದ್ದು, ‘ಇಡೀ ಚಿತ್ರತಂಡ ಶ್ರಮ ಹಾಕಿ ಕೆಲಸ ಮಾಡಿದೆ. ನಾನು ಪ್ರಿಯಾ ಎನ್ನುವ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ. ಮಂಡ್ಯದ ಕಥೆಯಾದ್ದರಿಂದ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎಂದು ಹೇಳಿಕೊಂಡಿದ್ದಾರೆ.

ಇನ್ನು ಚಿತ್ರದಲ್ಲಿ ಐದು ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ, ಮನು ಗೌಡ ಛಾಯಾಗ್ರಹಣ, ಪವನ್ ಸಂಕಲನ ಹಾಗೂ ಡ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಅಭಯ್, ಭೂಮಿಕಾ ಅಭಿನಯದ ಚಿತ್ರಕ್ಕೆ ಕಾರ್ತಿಕ್ ಸಾಥ್ ನೀಡಿದ್ದಾರೆ.




